ಅರ್ಧ ಎಕರೆ ಅರಣ್ಯ ಬೆಳೆಸುವ ಯೋಜನೆ ಜಾರಿಗೆ ಒತ್ತಡ: ಶಾಸಕ ಬೇಳೂರು
KannadaprabhaNewsNetwork | Published : Oct 08 2023, 12:00 AM IST
ಅರ್ಧ ಎಕರೆ ಅರಣ್ಯ ಬೆಳೆಸುವ ಯೋಜನೆ ಜಾರಿಗೆ ಒತ್ತಡ: ಶಾಸಕ ಬೇಳೂರು
ಸಾರಾಂಶ
ಅರಣ್ಯ ಇಲಾಖೆ ಆವರಣದಲ್ಲಿ ಶನಿವಾರ 69ನೇ ವನ್ಯಜೀವಿ ಸಪ್ತಾಹ
ಕನ್ನಡಪ್ರಭವಾರ್ತೆ ಸಾಗರ ಮನುಷ್ಯನಲ್ಲಿ ಭೂಮಿ ಸಂಗ್ರಹಿಸುವ ದಾಹ ಹೆಚ್ಚುತ್ತಿದ್ದು, ಇದು ಅರಣ್ಯದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು. ಪಟ್ಟಣದ ಅರಣ್ಯ ಇಲಾಖೆ ಆವರಣದಲ್ಲಿ ಶನಿವಾರ ಅರಣ್ಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 69ನೇ ವನ್ಯಜೀವಿ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ಅರಣ್ಯ ಉಳಿದರೆ ಮಾತ್ರ ಮನುಕುಲ ನೆಮ್ಮದಿಯಿಂದ ಜೀವಿಸಲು ಸಾಧ್ಯ ಎಂದರು. ಶಾಸಕನಾಗಿದ್ದಾಗ ಸದನದಲ್ಲಿ ಯಾರಿಗೆ ಬೇರೆ ಬೇರೆ ಯೋಜನೆಯಡಿ ಭೂಮಿಹಕ್ಕು ಕೊಡುತ್ತೇವೆಯೋ ಅವರು ಕನಿಷ್ಠ ಅರ್ಧ ಎಕರೆಯಲ್ಲಿ ಅರಣ್ಯ ಬೆಳೆಸುವ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಲು ಆಗ್ರಹಿಸಿದ್ದೆ. ಆದರೆ, ಅಂದಿನ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಈಗ ನಮ್ಮದೇ ಸರ್ಕಾರವಿದ್ದು, ಅರಣ್ಯ ಸಚಿವರ ಜೊತೆಗೆ ಈ ಕಾಯ್ದೆ ಕಡ್ಡಾಯವಾಗಿ ಜಾರಿಗೆ ತರಲು ಒತ್ತಡ ಹೇರುತ್ತೇನೆ. ಅರಣ್ಯ ಸಂರಕ್ಷಣೆ ವಿಷಯದಲ್ಲಿ ಇಲಾಖೆ ಜೊತೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಪರಿಸರ ತಜ್ಞ ಅಖಿಲೇಶ್ ಚಿಪ್ಳಿ ಅವರು ಮನುಷ್ಯ ಮತ್ತು ವನ್ಯಜೀವಿ ಸಂಘರ್ಷ ಕುರಿತು ಮಾತನಾಡಿ, ವನ್ಯಜೀವಿಗಳು ಬದುಕಬೇಕಾದ ಸ್ಥಳದ ಮೇಲೆ ಮನುಷ್ಯ ಅತಿಕ್ರಮಣ ನಡೆಸಿದ್ದರಿಂದ ಸಂಘರ್ಷ ಹೆಚ್ಚುತ್ತಿದೆ. ದೊಡ್ಡವರಿಗೆ ಅರಣ್ಯ ರಕ್ಷಣೆ ಬಗ್ಗೆ ಹೇಳಿ ಯಾವುದೇ ಪ್ರಯೋಜನವಿಲ್ಲ. ಮಕ್ಕಳ ಮೂಲಕ ಪರಿಸರ ಸಂರಕ್ಷಣೆ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ಕೆಲಸ ಮಾಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಸಕರು ಬಿತ್ತಿಪತ್ರವನ್ನು ಬಿಡುಗಡೆಗೊಳಿಸಿದರು. ವನ್ಯಪ್ರಾಣಿಗಳನ್ನು ರಕ್ಷಣೆ ಮಾಡಿದವರನ್ನು ಹಾಗೂ ವಿವಿಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಹುತಾತ್ಮರ ಸ್ಮಾರಕಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ್ ಕೆಂಚಪ್ಪನವರ್ ಅಧ್ಯಕ್ಷತೆ ವಹಿಸಿದ್ದರು. ಇನ್ನರ್ ವ್ಹೀಲ್ ಕ್ಲಬ್‌ನ ಅಧ್ಯಕ್ಷೆ ಉಷಾ ರಮಣ, ಅರಣ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಹುಚ್ಚಪ್ಪ ಮಂಡಗಳಲೆ, ಧರ್ಮೇಂದ್ರ ಶಿರವಾಳ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು. ಕಾರ್ಯಕ್ರಮದಲ್ಲಿ ಅರವಿಂದ್ ಸ್ವಾಗತಿಸಿ, ಸಹಾಯಕ ಅರಣ್ಯಾಧಿಕಾರಿ ಶ್ರೀಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಚೇತಾ ನಿರೂಪಿಸಿದರು. - - - -7ಕೆ.ಎಸ್.ಎ.ಜಿ.1: ಸಾಗರದಲ್ಲಿ ಅರಣ್ಯ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ 69ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಭಿತ್ತಿಪತ್ರ ಬಿಡುಗಡೆಗೊಳಿಸಿದರು.