ಅಡುಗೆ ಸಿಬ್ಬಂದಿ ವೇತನ ಹೆಚ್ಚಿಸಲು ಒತ್ತಡ: ಶಾಸಕ

| Published : Jan 20 2025, 01:32 AM IST

ಸಾರಾಂಶ

ನೂರಾರು ಮಕ್ಕಳಿಗೆ ಅಡುಗೆ ಮಾಡುವುದು ಸುಲಭವಾದ ಕೆಲಸವಲ್ಲ. ಅಡುಗೆಯವರು ಒಂದು ರೀತಿಯಲ್ಲಿ ಸಮಾಜ ಸೇವಕರಿದ್ದಂತೆ. ಮಕ್ಕಳ ಆರೋಗ್ಯ ನಿಮ್ಮ ಕೈಯಲ್ಲಿರುತ್ತದೆ. ಆದ್ದರಿಂದ ಮಕ್ಕಳಿಗೆ ಅಡುಗೆ ಮಾಡುವಾಗ ಶುಚಿತ್ವ ಕಾಪಾಡುವ ಜೊತೆಗೆ ನಿಮ್ಮ ಆರೋಗ್ಯ ಹಾಗೂ ಸುರಕ್ಷತೆಗೆ ಆದ್ಯತೆ ನೀಡಬೇಕು.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಶಾಲೆಗಳಲ್ಲಿ ಅಡುಗೆ ಕೆಲಸ ಮಾಡುವ ಸಿಬ್ಬಂದಿ ಜಾಗ್ರತೆಯಿಂದ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಬೇಜವಾಬ್ದಾರಿ ತೋರಬಾರದು ಎಂದು ಶಾಸಕ ಕೆ.ಎಚ್. ಪುಟ್ಟಸ್ವಾಮಿ ಗೌಡ ಹೇಳಿದರು.ತಾಲೂಕಿನ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುವ ಅಡುಗೆ ಸಿಬ್ಬಂದಿಗೆ ನಗರದ ಸಾಯಿ ಕೃಷ್ಣ ಕನ್ವೆನ್ಷನ್ ಹಾಲ್ ನಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಕನಿಷ್ಠ ವೇತನಕ್ಕೆ ಒತ್ತಡ

ನೂರಾರು ಮಕ್ಕಳಿಗೆ ಅಡುಗೆ ಮಾಡುವುದು ಸುಲಭವಾದ ಕೆಲಸವಲ್ಲ. ನೀವು ಒಂದು ರೀತಿಯಲ್ಲಿ ಸಮಾಜ ಸೇವಕರಾಗಿದ್ದೀರಿ. ಮಕ್ಕಳ ಆರೋಗ್ಯ ನಿಮ್ಮ ಕೈಯಲ್ಲಿರುತ್ತದೆ. ಆದ್ದರಿಂದ ಮಕ್ಕಳಿಗೆ ಅಡುಗೆ ಮಾಡುವಾಗ ಶುಚಿತ್ವ ಕಾಪಾಡುವ ಜೊತೆಗೆ ನಿಮ್ಮ ಆರೋಗ್ಯ ಹಾಗೂ ಸುರಕ್ಷತೆಗೆ ಆದ್ಯತೆ ನೀಡಬೇಕು. ಅಡುಗೆ ಸಿಬ್ಬಂದಿಗೆ ವೇತನವು ತುಂಬಾ ಕಡಿಮೆಯಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಗಮನ ಸೆಳೆದು ಚರ್ಚಿಸಿ ಕನಿಷ್ಠ ವೇತನ ನೀಡಬೇಕು ಎಂದು ಸರ್ಕಾರದ ಗಮನ ಸೆಳೆಯುತ್ತೇನೆ ಎಂದರು. ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎನ್ ನರಸಿಂಹಪ್ಪ ಮಾತನಾಡಿ, ಬಿಸಿಯೂಟ ತಯಾರಿಕೆಯಲ್ಲಿ ಗುಣಮಟ್ಟ ಮತ್ತು ಸ್ವಚ್ಛತೆಯಲ್ಲಿ ಯಾವುದೇ ಕಾರಣಕ್ಕೂ ರಾಜಿ ಸಾಧ್ಯವಿಲ್ಲ. ಬಿಸಿಯೂಟದ ಹಿಂದೆ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕೆಂಬ ಉದ್ದೇಶವಿದೆ ಎಂದರು. ಅಡುಗೆ ಕೆಲಸ ಸೇವೆ ಇದ್ದಂತೆ

ತಹಸೀಲ್ದಾರ್ ಮಹೇಶ್ ಎಸ್ ಪತ್ರಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಅಡುಗೆ ಕೆಲಸದಲ್ಲಿ ನಿರತರಾಗಿರುವ ಸಿಬ್ಬಂದಿ ಅದನ್ನು ಸೇವೆ ಎಂದು ಪರಿಗಣಿಸಿ ಅಪರ್ಣ ಭಾವದಿಂದ ಕಾರ್ಯನಿರ್ವಹಿಸಬೇಕು ಎಂದರು.

ಅಗ್ನಿ ದುರಂತಗಳು ಸಂಭವಿಸದಂತೆ ಮತ್ತು ಸಂಭವಿಸಿದಾಗ ಕೈಗೊಳ್ಳಬೇಕಾದ ತುರ್ತು ಕಾರ್ಯಗಳ ಬಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿ ವತಿಯಿಂದ ಅಡುಗೆ ಸಿಬ್ಬಂದಿಗೆ ಅರಿವು ಮೂಡಿಸಲಾಯಿತು.

ತಾ.ಪಂ.ಇ.ಒ ಹೊನ್ನಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ವಿ. ಶ್ರೀನಿವಾಸ ಮೂರ್ತಿ, ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎನ್ ಆರ್ ಮಂಜುನಾಥ್, ಜಿಲ್ಲಾ ಸಂಘದ ಕಾರ್ಯದರ್ಶಿ ಸಂಜೀವ ರಾಯಪ್ಪ, ತಾಲೂಕು ಸಂಘದ ಕಾರ್ಯದರ್ಶಿ, ಬಾಲಪ್ಪ, ಸಿಆರ್‌ಪಿಗಳಾದ ನರಸಿಂಹಮೂರ್ತಿ, ಸಂಘದ ಕಾರ್ಯದರ್ಶಿ ರಾಜಮ್ಮ, ಅಡುಗೆ ಸಿಬ್ಬಂದಿ ಉಪಸ್ಥಿತರಿದ್ದರು.