ಮೆಹೆಂದಳೆ ವೈಜಯಂತಿಪುರ ಕೃತಿಗೆ ಪ್ರತಿಷ್ಠಿತ ಅಮ್ಮ ಪ್ರಶಸ್ತಿ

| Published : Nov 16 2023, 01:18 AM IST

ಮೆಹೆಂದಳೆ ವೈಜಯಂತಿಪುರ ಕೃತಿಗೆ ಪ್ರತಿಷ್ಠಿತ ಅಮ್ಮ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಮೊದಲ ರಾಜ ಮನೆತನ ಮತ್ತು ಮೊದಲ ಸಾಮ್ರಾಜ್ಯ ಕುರಿತಾದ ಈ ಕಾದಂಬರಿಯಲ್ಲಿ ಈ ವರೆಗೆ ಸಾಹಿತ್ಯದಲ್ಲಿ ದಾಖಲಾಗದ ಅಂಶಗಳನ್ನು ಗುರುತಿಸಿ, ಅವುಗಳ ಆಧಾರ ಸಹಿತ ಪ್ರಕಟಿಸಿದ್ದಾರೆ.

ಕಾರವಾರ:

ಸೇಡಂನ ಪ್ರತಿಷ್ಠಿತ ಅಮ್ಮ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದ್ದು, ಅತ್ಯುತ್ತಮ ಕಾದಂಬರಿಗೆ ಕೊಡಮಾಡುವ ಅಮ್ಮ ೨೦೨೩ ಪ್ರಶಸ್ತಿಗೆ ಉ.ಕ. ಜಿಲ್ಲೆಯ ಹಳಿಯಾಳ ತಾಲೂಕಿನ ತೇರಗಾಂವ್ ಗ್ರಾಮದ ಸಾಹಿತಿ, ಅಂಕಣಕಾರ ಸಂತೋಷಕುಮಾರ ಮೆಹೆಂದಳೆ ಅವರ ‘ವೈಜಯಂತಿಪುರ– ಕದಂಬ ಮಯೂರವರ್ಮನ ಮಹಾ ಚರಿತೆ’ ಕಾದಂಬರಿ ಭಾಜನವಾಗಿದೆ.ಕನ್ನಡದಲ್ಲಿ ಬಂದಿರುವ ನಿಖರ ಮತ್ತು ಶಾಸನ ಆಧಾರಿತ ಮೊಟ್ಟ ಮೊದಲ ಕಾದಂಬರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವೈಜಯಂತಿಪುರ ಉ.ಕ. ಜಿಲ್ಲೆಯ ಈಗಿನ ಬನವಾಸಿ ಆಗ ಕದಂಬರ ರಾಜಧಾನಿಯಾಗಿ ಮೆರೆದ ಹಾಗೂ ಕನ್ನಡದ ಮೊದಲ ಸಾಮ್ರಾಟ ಮಯೂರವರ್ಮನ ಹೆಜ್ಜೆ ಗುರುತುಗಳನ್ನು ಅತ್ಯಂತ ಸ್ಪಷ್ಟವಾಗಿ ಅಡಿ ಟಿಪ್ಪಣಿ ಸಮೇತ ನಮೂದಿಸುವ ಕೃತಿಯಾಗಿದೆ.ಕಳೆದ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿರುವ ಕೃತಿ ಅತ್ಯಂತ ತ್ವರಿತವಾಗಿ ಆರು ಮುದ್ರಣ ಕಂಡಿದ್ದು, ಕನ್ನಡದ ಮಟ್ಟಿಗೆ ಇತ್ತಿಚಿನ ದಿನಗಳಲ್ಲಿ ಗಮನಾರ್ಹವಾದ ಕೃತಿಯಾಗಿ ಸುದ್ದಿಗೆ ಬಂದಿತ್ತು. ಕನ್ನಡ ಮೊದಲ ರಾಜ ಮನೆತನ ಮತ್ತು ಮೊದಲ ಸಾಮ್ರಾಜ್ಯ ಕುರಿತಾದ ಈ ಕಾದಂಬರಿಯಲ್ಲಿ ಈ ವರೆಗೆ ಸಾಹಿತ್ಯದಲ್ಲಿ ದಾಖಲಾಗದ ಅಂಶಗಳನ್ನು ಗುರುತಿಸಿ, ಅವುಗಳ ಆಧಾರ ಸಹಿತ ಪ್ರಕಟಿಸಿದ್ದಾರಲ್ಲದೇ, ಈ ಅಧಿಕೃತ ವಸ್ತುವಿಗಾಗಿ ಕಾದಂಬರಿ ಉದ್ದಕ್ಕೂ ಎಂಭತ್ತಕ್ಕೂ ಹೆಚ್ಚು ಅಡಿ ಟಿಪ್ಪಣಿಗಳ ಪ್ರಕಟಿಸುವ ಮೂಲಕ ವೈಜಯಂತಿಪುರ ಎಂಬ ಕೃತಿಯ ಖಚಿತತೆಯ ಬಗ್ಗೆ ವಿಷದಿಕರಿಸಲಾಗಿದೆ. ಎಲ್ಲಿಯೂ ಲಭ್ಯವಿರದ, ಮಯೂರವರ್ಮನ ಇತಿಹಾಸ ಖಚಿತತೆಗೆ ಅನುಮಾನಿಸುವ ಸಂದರ್ಭದಲ್ಲಿ ಮೂಡಿ ಬಂದಿರುವ ಅತ್ಯಂತ ಗಮನಾರ್ಹ ಕಾದಂಬರಿ ಇದಾಗಿದೆ.

ಈಚೆಗೆ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಸಾಹಿತ್ಯ ವಿಭಾಗದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಸಾಹಿತ್ಯಕ್ಕಾಗಿ ಉ.ಕ. ಜಿಲ್ಲಾಡಳಿತ ಮೆಹೆಂದಳೆ ಅವರಿಗೆ ಘೋಷಿಸಿತ್ತು, ಹಿಂದೆಯೇ ಕರ್ನಾಟಕದ ಪ್ರತಿಷ್ಟಿತ ಕರ್ನಾಟಕ ಸಂಘ, ಶಿವಮೊಗ್ಗ ಮೆಹೆಂದಳೆಯವರ ಅಲೆಮಾರಿಯ ಡೈರಿ ಪ್ರವಾಸ ಕಥನಕ್ಕಾಗಿ ಪ್ರಶಸ್ತಿಯನ್ನು ಘೋಷಿಸಿತ್ತು.

ಇದೆ ನ. 26ರಂದು ಕಲಬುರಗಿಯ ಸೇಡಂನಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ, ಸನ್ಮಾನ ಮತ್ತು ಸ್ಮರಣಿಕೆಗಳನ್ನು ಪ್ರದಾನ ಮಾಡಲಾಗುವುದು, ಕೃತಿಗಾರರು ಸ್ವಯಂ ಹಾಜರಿದ್ದು ಪ್ರಶಸ್ತಿ ಸ್ವೀಕರಿಸಬೇಕು ಎಂದು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.