ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ

| Published : Mar 16 2024, 01:47 AM IST

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಪ್ರತಿಷ್ಠಿತ ಐಎಸ್‌ಒ 27001 ದೃಢೀಕರಣ ಮಾನ್ಯತೆ ಪ್ರದಾನ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ ಗ್ರಾಮೀಣ ಮಹಿಳೆಯರ ಮತ್ತು ಜನರ ಪ್ರಾಮಾಣಿಕತೆ, ವ್ಯವಹಾರ ನಿಷ್ಠೆ ಮತ್ತು ಸಿಬ್ಬಂದಿ ವರ್ಗದ ಕಾರ್ಯತತ್ಪರತೆಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಂತಾರಾಷ್ಟ್ರೀಯ ಮಾನ್ಯತೆಯನ್ನು ಪಡೆಯಲು ಸಾಧ್ಯವಾಗಿದೆ. ಪ್ರತಿಷ್ಠಿತ ಅಂತಾರಾಷ್ಟ್ರೀಯ ಐಎಸ್‌ಒ ಸಂಸ್ಥೆಯು ಸಹಸದಸ್ಯ ಎನ್‌ಕ್ಯೂಎ ಸಂಸ್ಥೆಯ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರತಿಷ್ಠಿತ ಐಎಸ್ಓ 27001 ದೃಢೀಕರಣ ಮಾನ್ಯತೆಯನ್ನು ಪಡೆದುಕೊಂಡಿರುವುದು ಸಂಸ್ಥೆಗೆ ಹೆಮ್ಮೆಯ ವಿಚಾರವಾಗಿದೆ ಎಂದು ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ಪ್ರತಿಷ್ಠಿತ ಐಎಸ್‌ಒ 27001 ದೃಢೀಕರಣ ಮಾನ್ಯತೆ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶ್ರೀ ಕ್ಷೇತ್ರದ ಎಲ್ಲ ಸಂಸ್ಥೆಗಳ ಕೆಲಸ ಕಾರ್ಯ ಹಾಗೂ ವ್ಯವಹಾರಗಳಲ್ಲಿ ಪಾರದರ್ಶಕತೆ ಇದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿಯೊಂದು ವ್ಯವಹಾರದಲ್ಲಿ ತಂತ್ರಜ್ಞಾನ ಬಳಸಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲ್ ತಂತ್ರಜ್ಞಾನದ ಅರಿವು ಹಾಗೂ ಬಳಕೆ ಮಾಡುವ ಕುರಿತು ಯೋಜನೆಯು ಮಹತ್ತರ ಪಾತ್ರವಹಿಸುತ್ತಿದೆ. ಗ್ರಾಮೀಣ ಮಹಿಳೆಯರು ಟ್ಯಾಬ್ ಬಳಕೆ, ಆನ್‍ಲೈನ್ ಬ್ಯಾಂಕಿಂಗ್ ಸೌಲಭ್ಯ ಬಳಕೆ ಮಾಡುವುದನ್ನು ಗಮನಿಸಿದ ಪ್ರಧಾನಿ ಮೋದಿಯವರು ಡಿಜಿಟಲ್ ಇಂಡಿಯಾ ಸಾಕಾರಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಹೆಗ್ಗಡೆ ತಿಳಿಸಿದರು. ತಂತ್ರಜ್ಞಾನ ಅಳವಡಿಕೆಯಲ್ಲಿ ಯೋಜನೆಯು ಸದಾ ಮುಂದಿದ್ದು ಐಎಸ್‌ಒ 27001 ದೃಢೀಕರಣ ಮಾನ್ಯತೆ ನಮ್ಮ ಕಾರ್ಯದಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲು ಸಹಕಾರಿಯಾಗಲಿದೆ. ತಂತ್ರಜ್ಞಾನವನ್ನು ನಾವು ಬಳಸುವಂತಾಗಬೇಕು, ಆದರೆ ನಮ್ಮನ್ನು ತಂತ್ರಜ್ಞಾನ ನಿಯಂತ್ರಿಸುವಂತೆ ಆಗಬಾರದು. ಈ ಬಗ್ಗೆ ಎಚ್ಚರಿಕೆ ಅಗತ್ಯ ಎಂದರು.ಎನ್‌ಕ್ಯೂಎ ಸಂಸ್ಥೆಯ ಮಹಾಪ್ರಬಂಧಕ ಅಮರ್ ದೀಪ್ ಮಾತನಾಡಿ, ಲಂಡನ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಎನ್.ಕ್ಯೂ.ಎ. ಸಂಸ್ಥೆ 2023ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವೈಖರಿ, ಪಾರದರ್ಶಕತೆ, ತಂತ್ರಜ್ಞಾನಗಳ ಬಳಕೆ, ಸುರಕ್ಷತೆ, ಬದ್ಧತೆ, ಕಾರ್ಯಕರ್ತರ ಕಾರ್ಯಕುಶಲತೆ, ವರದಿಗಳ ತಯಾರಿ ಮತ್ತು ಬಳಕೆ, ವ್ಯವಹಾರದಲ್ಲಿ ನೈಪುಣ್ಯತೆ ಮೊದಲಾದ 114 ವಿಷಯಗಳನ್ನು ಗಮನಿಸಿ ಅಂತಾರಾಷ್ಟ್ರೀಯ ಐ.ಎಸ್.ಒ. 27001 ಪ್ರಶಸ್ತಿ ಪ್ರದಾನ ಮಾಡಲು ಸಂತೋಷ ಮತ್ತು ಅಭಿಮಾನ ಉಂಟಾಗುತ್ತದೆ ಎಂದರು. ಮುಂದಿನ ಮೂರು ವರ್ಷಗಳ ವರೆಗೆ ಇದು ಚಾಲ್ತಿಯಲ್ಲಿದ್ದು ಬ್ಯಾಂಕ್‌ಗಳೊಡನೆ ವಿಶ್ವಾಸಾರ್ಹ ವ್ಯವಹಾರಗಳನ್ನು ನಡೆಸಲು ನೆರವಾಗಲಿದೆ. ಬ್ಯಾಂಕುಗಳಿಗೆ ಯೋಜನೆಯ ಮೇಲೆ ಹೆಚ್ಚಿನ ವಿಶ್ವಾಸಾರ್ಹತೆ ಮೂಡಿಸಲು ಸಹಾಯವಾಗುತ್ತದೆ. ಸ್ವ-ಸಹಾಯ ಸಂಘಗಳ ಸದಸ್ಯರು ಇನ್ನೂ ಹೆಚ್ಚಿನ ಸೇವೆಯನ್ನು ನಿರೀಕ್ಷಿಸಬಹುದು ಎಂದ ಅವರು, ಪ್ರಶಸ್ತಿ ಗೋಡೆಯಲ್ಲಿ ಮಾತ್ರ ಪ್ರದರ್ಶನಕ್ಕೆ ಅಲ್ಲ. ಮನಃಪೂರ್ವಕವಾಗಿ ಅದರ ಉದ್ದೇಶ ಫಲಾನುಭವಿಗಳ ಸೇವೆಯಲ್ಲಿ ಬಳಕೆಯಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿದರು. ಹರೀಶ್‌ ಕೃಷ್ಣಸ್ವಾಮಿ ಮಾತನಾಡಿ, ಅಂತಾರಾಷ್ಟ್ರೀಯ ಮಾನ್ಯತೆಯಿಂದ ಫಲಾನುಭವಿಗಳ ನಂಬಿಕೆ, ವಿಶ್ವಾಸ ಹೆಚ್ಚಾಗುತ್ತದೆ ಎಂದು ಹೇಳಿದರು. ಸಮಾರಂಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿ ಹೇಮಾವತಿ ವೀ. ಹೆಗ್ಗಡೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್. ಎಸ್., ಮಾನಸ ಕನ್ಸಲ್ಟೆನ್ಸಿ ಮುಖ್ಯಸ್ಥ ಭಾರ್ಗವ್, ಮುಖ್ಯ ಹಣಕಾಸು ಅಧಿಕಾರಿ ಶಾಂತರಾಮ್ ಪೈ ಮತ್ತಿತರರು ಉಪಸ್ಥಿತರಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್‌. ಮಂಜುನಾಥ್ ಸ್ವಾಗತಿಸಿದರು. ಅನಿಲ್‌ಕುಮಾರ್ ವಂದಿಸಿದರು. ಯೋಜನೆಯ ನಿರ್ದೇಶಕರಾದ ರಾಜೇಶ್ ಶೆಟ್ಟಿ ಮತ್ತು ಸುರೇಶ್ ಮೊಯ್ಲಿ ಕಾರ್ಯಕ್ರಮ ನಿರೂಪಿಸಿದರು.

ಬಾಕ್ಸ್

ಅಂತಾರಾಷ್ಟ್ರೀಯ ಮಾನ್ಯತೆ ದಾಖಲಾರ್ಹ ಸಂಗತಿ ಯೋಜನೆಯು ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ತನ್ನ ವ್ಯವಸ್ಥೆಗಳನ್ನು ಪಾರದರ್ಶಕವಾಗಿ ರೂಪಿಸಿಕೊಳ್ಳಲು ಬೇಕಾಗುವ ಎಲ್ಲ ಮಾನದಂಡಗಳನ್ನು ಅಳವಡಿಸಿಕೊಂಡು ಅಂತಾರಾಷ್ಟ್ರೀಯ ಐಎಸ್‌ಒ ಸಂಸ್ಥೆಯಿಂದ ಮಾನ್ಯತೆ ಪಡೆದುಕೊಂಡಿರುವುದು ದಾಖಲಾರ್ಹ ವಿಷಯವಾಗಿದೆ. ಸುಸ್ಥಿರ ಅಭಿವೃದ್ಧಿ ಮಾದರಿಯನ್ನು ಯೋಜನೆಯು ಸೃಷ್ಟಿಸಿದೆ. ಸ್ವಸಹಾಯ ಸಂಘಗಳ ಸದಸ್ಯರ ದಾಖಲೀಕರಣ ಮಾಡುವಲ್ಲಿ ಯೋಜನೆಯು ದೇಶದಲ್ಲಿಯೇ ಅತ್ಯುನ್ನತ ಗುಣಮಟ್ಟದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದರಿಂದಾಗಿ ಸ್ವಸಹಾಯ ಸಂಘದ ಯಾವುದೇ ಸದಸ್ಯರು ಯಾವುದೇ ರೀತಿಯ ಆರ್ಥಿಕ ವ್ಯವಹಾರವನ್ನು ಮಾಡಿದರೂ ಅದನ್ನು ದಾಖಲೀಕರಣ ಮಾಡಿ ಸಂಬಂಧಿಸಿದ ಬ್ಯಾಂಕುಗಳಿಗೆ ಮತ್ತು ಸಂಬಂಧಿಸಿದ ಸದಸ್ಯರುಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಸುಮಾರು 55 ಲಕ್ಷ ಸದಸ್ಯರುಗಳಿಗೆ ಬ್ಯಾಂಕ್, ವಿಮಾ ಕಂಪೆನಿಗಳ ಸೌಲಭ್ಯಗಳನ್ನು, ಸರ್ಕಾರಿ ಯೋಜನೆಗಳನ್ನು ನೇರವಾಗಿ ಗ್ರಾಮಾಭಿವೃದ್ಧಿ ಯೋಜನೆ ತಲುಪಿಸುತ್ತಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್ ತಿಳಿಸಿದರು.