ರೇಬೀಸ್ ತಡೆಗಟ್ಟಿ, ನಿಮ್ಮನ್ನು ರಕ್ಷಿಸಿಕೊಳ್ಳಿ

| Published : Feb 18 2024, 01:30 AM IST / Updated: Feb 18 2024, 01:31 AM IST

ಸಾರಾಂಶ

ಮುಂಡಗೋಡ ತಾಲೂಕಿನ ಬ್ಯಾನಳ್ಳಿ ಗ್ರಾಮದಲ್ಲಿ ರೇಬಿಸ್ ತಡೆಗಟ್ಟುವ ಜಾಗೃತಿ ಅಭಿಯಾನ ನಡೆಯಿತು. ರೇಬಿಸ್ ಬಗ್ಗೆ ಮಾಹಿತಿ ನೀಡಲಾಯಿತು. ರೇಬಿಸ್ ತಡೆಗಟ್ಟುವ ಕ್ರಮ ತಿಳಿಸಲಾಯಿತು.

ಮುಂಡಗೋಡ: ಲೊಯೋಲಾ ವಿಕಾಸ ಕೇಂದ್ರ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ಪಶು ಸಂಗೋಪನಾ ಇಲಾಖೆ, ಚವಡಳ್ಳಿ ಗ್ರಾಪಂ, ಮಹಿಳಾ ಸಂಘದವರು ಹಾಗೂ ಬ್ಯಾನಳ್ಳಿ ಗ್ರಾಮ ಅಭಿವೃದ್ಧಿ ಸಮಿತಿ ಸಂಯೋಗದಡಿಯಲ್ಲಿ ಬ್ಯಾನಳ್ಳಿ ಗ್ರಾಮದಲ್ಲಿ ರೇಬಿಸ್ ತಡೆಗಟ್ಟಲು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಕೃಷ್ಣಮೂರ್ತಿ ಹೆಗಡೆ ಅವರು ಕಾಯಿಲೆ ಲಕ್ಷಣಗಳ ಕುರಿತು ಮಾಹಿತಿ ನೀಡಿದರು. ನಾಯಿ, ಬೆಕ್ಕು ಮುಂತಾದ ಸೋಂಕಿನ ಪ್ರಾಣಿಗಳ ಕಡಿತ, ಪರಚುವಿಕೆಯಿಂದ ಮನುಷ್ಯನಿಗೆ ರೇಬಿಸ್ ಬರುತ್ತದೆ ಎಂದು ಹೇಳಿದರು. ರೋಗಲಕ್ಷಣಗಳು: ನೀರು ಮತ್ತು ಗಾಳಿಯ ಭಯ, ನುಂಗಲು ಕಷ್ಟವಾಗುವಿಕೆ, ಅತಿಯಾಗಿ ಜೊಲ್ಲು ಸುರಿಸುವಿಕೆ ಇವು ರೋಗ ಲಕ್ಷಣಗಳು. ರೋಣ ಕಾಣಿಸಲು ನಾಲ್ಕು ವಾರಕ್ಕಿಂತ ಹೆಚ್ಚು ದಿನ ಬೇಕಾಗಬಹುದು. ರೇಬಿಸ್ ಸೋಂಕಿನ ಪ್ರಾಣಿಯ ಕಡಿತವು ವೈದ್ಯಕೀಯ ತುರ್ತು ಪರಿಸ್ಥಿತಿ. ಮುಖ, ಕುತ್ತಿಗೆ ಮತ್ತು ಬೆರಳಿನ ತುದಿಯ ಕಡಿತವು ಅತ್ಯಂತ ಅಪಾಯಕಾರಿ. ರೇಬಿಸ್ ಶೇ. ೧೦೦ ಮಾರಣಾಂತಿಕವಾದರೂ ತಡೆಗಟ್ಟಬಹುದಾದ ರೋಗ. ಕ್ರೋದೋನ್ನತ್ತ ಪ್ರಾಣಿಗಳು ಕಚ್ಚಿದಾಗ ರೇಬಿಸ್ ಸೋಂಕು ಬರುತ್ತದೆ. ಗಾಯವನ್ನು ಸಾಬೂನು ಮತ್ತು ನೀರಿನಿಂದ ಕನಿಷ್ಠ ಹದಿನೈದು ನಿಮಿಷ ತೊಳೆಯಿರಿ ಎಂದು ಹೆಗಡೆ ಹೇಳಿದರು.ವೈದ್ಯರ ನಿರ್ದೇಶನದ ಮೇರೆಗೆ ರೇಬಿಸ್ ಲಸಿಕೆಯ ತೆಗೆದುಕೊಳ್ಳುವ ಕ್ರಮದ ಬಗ್ಗೆ ವಿವರಿಸಿ ಅವರು, ಪ್ರಾಣಿಯು ಕಚ್ಚಿದ ದಿನ, ೩ನೇ, ೭ನೇ ದಿನ, ೧೪ನೇ ದಿನ, ೨೮ನೇ ದಿನ ಪೂರ್ಣ ಲಸಿಕಾ ಕ್ರಮವನ್ನು ತೆಗೆದುಕೊಳ್ಳಬೇಕು. ತೀವ್ರವಾದ ಕಡಿತದ ಸಂದರ್ಭಗಳಲ್ಲಿ ಗಾಯಕ್ಕೆ ರೇಬಿಸಿಮ್ಯೂನೋಗ್ಲೋಬುಲಿನ್ ಲಸಿಕೆ ತೆಗೆದುಕೊಳ್ಳಬೇಕು. ರೇಬಿಸ್ ಅನ್ನು ತಡೆಗಟ್ಟುವುದು ಒಂದು ಸಾಮಾಜಿಕ ಕರ್ತವ್ಯ. ನಿಮ್ಮ ಎಲ್ಲ ನಾಯಿ, ಬೆಕ್ಕು ಸಾಕು ಪ್ರಾಣಿಗಳಿಗೆ ನಿಯಮಿತವಾಗಿ ಪಶು ಸಂಗೋಪನೆ ಇಲಾಖೆಯಲ್ಲಿ ಲಸಿಕೆ ಹಾಕಿಸಿ ಎಂದು ಕರಪತ್ರ ಹಾಗೂ ಪಿಪಿಟಿ ಮೂಲಕ ಜಾಗೃತಿ ಮೂಡಿಸಿದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ರೇಬಿಸ್ ತಡೆಗಟ್ಟುವ ಹಾಗೂ ಮುಂಜಾಗ್ರತೆಗಾಗಿ ಕರಪತ್ರ ಹಾಗೂ ಪಿಪಿಟಿ ಮೂಲಕ ಜಾಗೃತಿ ಮೂಡಿಸಿದರು.

ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಿತ ಅಧಿಕಾರಿ ಮರಿಯಮ್ಮ, ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಎನ್.ಎಚ್. ಹಿರೇಮಠ ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಸರೋಜಾ ಜಾಗಟಿ, ಬಸನಾಯ್ಕ ಪಶು ಸಂಗೋಪನಾ ನಿರೀಕ್ಷಕ ಎಂ.ಸಿ. ತಟ್ಟಿ, ಐ.ಎಚ್‌. ದಾನಕಟಗಿ, ದೇವರಾಜ ಪೆನಗುದ್ದಿ, ಗೀತಾ ಬಿಸ್ಕಣ್ಣನವರ, ಮಂಜುಳಾ ಅಗಡಿ, ಕೊಂಡುಬಾಯಿ ವಿಟ್ಟು ಗಾವಡೆ ಮುಂತಾದವರಿದ್ದರು. ಮಲ್ಲಮ್ಮ ನೀರಲಗಿ ಕಾರ್ಯಕ್ರಮ ನಿರೂಪಿಸಿದರು. ತೇಜಸ್ವಿನಿ ಬೇಗೂರು ಸ್ವಾಗತಿಸಿದರು. ತುಕಾರಾಮ ಗಾವಡೆ ವಂದಿಸಿದರು.