ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳಲ್ಲಿ ದಿನಕ್ಕೆ ಸರಾಸರಿ ಒಂದು ಜೀವ ಬಲಿಯಾಗುತ್ತಿದ್ದು, ಈ ಮರಣ ಪ್ರಮಾಣವನ್ನು ಎರಡಂಕಿಗೆ ಇಳಿಸಲು ಜಿಲ್ಲಾಡಳಿತ ಎಲ್ಲಾ ಅಗತ್ಯ ಕ್ರಮ ಕೈಗೊಂಡಿದೆ. ಚಾಲಕರು ಸಹ ಸಂಚಾರ ನಿಯಮ ಪಾಲನೆ, ಸುರಕ್ಷಿತ ವಾಹನ ಚಾಲನೆಗೆ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಕಿವಿಮಾತು ಹೇಳಿದರು.
ನಗರದ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದಲ್ಲಿ ಗುರುವಾರ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಬಸ್ಸು ಚಾಲಕರು, ನಿರ್ವಾಹಕರಿಗೆ ಹಮ್ಮಿಕೊಂಡಿದ್ದ ಪ್ರಥಮ ಚಿಕಿತ್ಸಾ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾದ್ಯಂತ ಅಪಘಾತ ಪ್ರಮಾಣವನ್ನು ಗಣನೀಯವಾಗಿ ತಡೆಯುವುದು ಸೇರಿ ಸಾವು-ನೋವುಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕೆಂಬುದು ತಮ್ಮ ಉದ್ದೇಶ ಎಂದರು.ದಿನಕ್ಕೊಬ್ಬರು ಜಿಲ್ಲೆಯಲ್ಲಿ ಅಪಘಾತಕ್ಕೆ ಬಲಿಯಾಗುತ್ತಿದ್ದು, ಕಳೆದ ವರ್ಷ 328 ಜನ ರಸ್ತೆ ಅಪಘಾತದಿಂದ ಸಾವನ್ನಪ್ಪಿದ್ದಾರೆ. ಈ ಮರಣ ಪ್ರಮಾಣವನ್ನು ಮೊದಲು ಎರಡಂಕಿಗೆ ತರಬೇಕೆಂಬ ಆಸೆ ಎಲ್ಲಾ ಅಧಿಕಾರಿಗಳದ್ದಾಗಿದೆ. ಕೆಲವು ರಸ್ತೆಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ನಿತ್ಯ ಅದೇ ರಸ್ತೆಯಲ್ಲಿ ಸಂಚರಿಸುವ ಚಾಲಕರು ಸಂಬಂಧಿಸಿದ ಪ್ರಾಧಿಕಾರದ ಗಮನಕ್ಕೆ ತಂದರೆ, ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.
ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ನಾಗರೀಕ ಬಂದೂಕು ತರಬೇತಿ ಶಿಬಿರದ ವೇಳೆ ಡಾ. ಕುಮಾರ ಪ್ರಥಮ ಚಿಕಿತ್ಸೆ ಬಗ್ಗೆ ಉಪಯುಕ್ತ ಮಾಹಿತಿ ನೀಡಿದ್ದರು. ಇದರಿಂದ ಪ್ರಭಾವಿತರಾಗಿ ಕೆಎಸ್ಸಾರ್ಟಿಸಿ ಚಾಲಕರು, ನಿರ್ವಾಹಕರಿಗೂ ಇದರ ಅಗತ್ಯವಿರುವುದನ್ನು ಮನಗಂಡು ತರಬೇತಿ ನೀಡಲಾಗುತ್ತಿದೆ. ಸಂಸ್ಥೆಯಲ್ಲಿ ನಿತ್ಯ ಬಸ್ಸುಗಳಲ್ಲಿ ಲಕ್ಷಾಂತರ ಜನರು ಸಂಚರಿಸುತ್ತಾರೆ. ಚಾಲಕರು-ನಿರ್ವಾಹಕರು ಸಹ ಹಗಲಿರುಳು ಕಾರ್ಯ ನಿರ್ವಹಿಸುತ್ತಾರೆ ಎಂದು ತಿಳಿಸಿದರು. ರಕ್ತದಾನ ಶಿಬಿರವನ್ನು ಆಯೋಜಿಸುವಂತೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಮನವಿ ಮಾಡಲಾಗಿದೆ. ಆರೋಗ್ಯವಂತ ಸಿಬ್ಬಂದಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ, ಮತ್ತೊಂದು ಜೀವ ಉಳಿಸುವ ಮೂಲಕ ಸಮಾಜ ಸೇವೆಗೆ ನಿಮ್ಮನ್ನು ನೀವು ಸಮರ್ಪಿಸಿಕೊಳ್ಳಬೇಕು ಎಂದು ಡಿಸಿ ಗಂಗಾಧರಸ್ವಾಮಿ ಮನವಿ ಮಾಡಿದರು. ಸಂಪನ್ಮೂಲ ವ್ಯಕ್ತಿ, ರಾಷ್ಟ್ರೀಯ ತರಬೇತುದಾರ ಡಾ. ಕುಮಾರ ಮಾತನಾಡಿ, ಸುರಕ್ಷಿತ ಪ್ರಯಾಣಕ್ಕೆ ಇಡೀ ದೇಶದಲ್ಲೇ ಕೆಎಸ್ಸಾರ್ಟಿಸಿ ಪ್ರಸಿದ್ಧಿ ಪಡದಿದೆ. ಪ್ರಯಾಣದ ವೇಳೆ ಯಾರಾದರೂ ಪ್ರಯಾಣಿಕರು ಮೂರ್ಛೆ ಹೋದರೆ, ಹೃದಯಾಘಾತ ಇತರೆ ಸಮಸ್ಯೆ ಕಂಡು ಬಂದರೆ ತಕ್ಷಣವೇ ಅಂತಹವರ ಜೀವ ಉಳಿಸುವ ಚಿಕಿತ್ಸೆಯ ಭಾಗವಾಗಿ ಪ್ರಥಮ ಚಿಕಿತ್ಸೆ ನೀಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಂದಿನಿಂದ ಎರಡು ದಿನ ತರಬೇತಿ ನೀಡಲಾಗುತ್ತಿದೆ. ತರಬೇತಿಯ ಸದುಪಯೋಗವನ್ನು ನೀವೆಲ್ಲರೂ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್. ಹೆಬ್ಬಾಳ್ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ, ಇಎನ್‌ಟಿ ತಜ್ಞ ಡಾ.ಎ.ಎಂ. ಶಿವಕುಮಾರ, ಪ್ರಧಾನ ಕಾರ್ಯದರ್ಶಿ ಆನಂದಜ್ಯೋತಿ, ಕೆಎಸ್‌ಆರ್‌ಟಿಸಿ ವಿಭಾಗೀಯ ಯಾಂತ್ರಿಕ ಅಭಿಯಂತರ ಕೆ. ವೆಂಕಟೇಶ, ವಿಭಾಗೀಯ ಸಂಚಾಲನಾಧಿಕಾರಿ ಡಿ. ಫಕೃದ್ದಿನ್ ಸೇರಿದಂತೆ ಸಿಬ್ಬಂದಿ ಇದ್ದರು. 200ಕ್ಕೂ ಹೆಚ್ಚು ಚಾಲಕರು, ನಿರ್ವಾಹಕರು ತರಬೇತಿಯಲ್ಲಿ ಭಾಗಿಯಾಗಿದ್ದರು.
ಅಪಘಾತವಾದ ವೇಳೆ ಗಾಯಾಳಿಗೆ ನೀರು ಕುಡಿಸಿ ಉಪಚರಿಸುವುದು ಪ್ರಥಮ ಚಿಕಿತ್ಸೆ ಅಲ್ಲ. ಬದಲಿಗೆ ಜೀವ ಉಳಿಸಲು ಏನೆಲ್ಲಾ ಮಾಡಬಹುದೆನ್ನುವುದು 2 ದಿನ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಲಾಗುವುದು. ಈ ತರಬೇತಿ ಭವಿಷ್ಯದಲ್ಲಿ ಬಸ್ ಪ್ರಯಾಣಿಕರು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ದಿಢೀರನೆ ಆಘಾತಕ್ಕೊಳಗಾಗುವ ಜನ ಸಾಮಾನ್ಯರ ಜೀವ ಉಳಿಸುವ ನಿಟ್ಟಿನಲ್ಲಿ ಅನುಕೂಲಕ್ಕೆ ಬರಲಿದೆ.ಡಾ. ಕುಮಾರ, ಸಂಪನ್ಮೂಲ ವ್ಯಕ್ತಿ, ರಾಷ್ಟ್ರೀಯ ತರಬೇತುದಾರ