ಎಸ್ಟಿ ಪ್ರಮಾಣ ಪತ್ರ ಅನ್ಯರ ಪಾಲು ತಡೆಯಿರಿ: ವಾಲ್ಮೀಕಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ

| Published : Jan 14 2025, 01:01 AM IST

ಎಸ್ಟಿ ಪ್ರಮಾಣ ಪತ್ರ ಅನ್ಯರ ಪಾಲು ತಡೆಯಿರಿ: ವಾಲ್ಮೀಕಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್ಟಿ ಪ್ರಮಾಣ ಪತ್ರ ಅನ್ಯರ ಪಾಲು ತಡೆಯಿರಿ.

ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ

ಕನ್ನಡಪ್ರಭ ವಾರ್ತೆ ಕಾರಟಗಿ

ಕೋಲಿ, ಕಬ್ಬಲಿಗ ಸಮುದಾಯದ ತಳವಾರ ಸಮುದಾಯದವರೂ ಎಸ್ಟಿ ಪ್ರಮಾಣ ಪತ್ರ ಪಡೆಯುತ್ತಿದ್ದು, ಕೂಡಲೇ ರಾಜ್ಯ ಸರ್ಕಾರ ಪ್ರವರ್ಗ ಒಂದರಲ್ಲಿ ಅವರನ್ನು ಮರುಸ್ಥಾಪಿಸಿ ವಾಲ್ಮೀಕಿ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಈ ಬಗ್ಗೆ ಜಾತ್ರೆಯಲ್ಲಿಯೇ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಒತ್ತಾಯಿಸಿದರು.

ಇಲ್ಲಿನ ಗುಡಿತಿಮ್ಮಪ್ಪನ ಕ್ಯಾಂಪಿನ ವಾಲ್ಮೀಕಿ ಭವನದಲ್ಲಿ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಫೆ. ೮, ೯ರಂದು ಜರುಗುವ ವಾಲ್ಮೀಕಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ವಾಲ್ಮೀಕಿ ಸಮುದಾಯದ ತಳವಾರ, ಪರಿವಾರ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಜಾರಿ ಮಾಡಿ ಸಂವಿಧಾನದ ಕ್ರ.ಸಂ. ೩೪ರಲ್ಲಿ ಸೇರಿವೆ. ಇವನ್ನು ಹೊರತುಪಡಿಸಿ ಅನ್ಯ ಸಮುದಾಯಗಳಾದ ಕೋಲಿ, ಕಬ್ಬಲಿಗ ಸಮುದಾಯದ ತಳವಾರ ಸಮುದಾಯಗಳೂ ಇತ್ತೀಚಿನ ದಿನಗಳಲ್ಲಿ ಎಸ್ಟಿ ಪ್ರಮಾಣ ಪತ್ರ ಪಡೆಯುತ್ತಿವೆ.

ಇದರಿಂದ ನಿಜವಾದ ಎಸ್.ಟಿ. ಫಲಾನುಭವಿಗಳಾದ ವಾಲ್ಮೀಕಿ, ನಾಯಕ ಸಮುದಾಯದ ಜನರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ನಕಲಿ ಪ್ರಮಾಣ ಪತ್ರ ಪಡೆಯುವುದಕ್ಕೆ ತಡೆ ನೀಡಲು ಕೋಲಿ, ಕಬ್ಬಲಿಗ ಸಮುದಾಯದ ತಳವಾರರನ್ನು ಪ್ರವರ್ಗ ಒಂದರಲ್ಲಿ ಮರುಸ್ಥಾಪಿಸಬೇಕು. ಈ ಮೂಲಕ ನಾಯಕ ವಾಲ್ಮೀಕಿ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸುತ್ತಿದ್ದೇವೆ. ಈ ಬಗ್ಗೆ ಜಾತ್ರೆಗೆ ಆಗಮಿಸುವ ಮುಖ್ಯಮಂತ್ರಿಗಳು ವೇದಿಕೆಯಲ್ಲಿಯೇ ಸ್ಪಷ್ಟನೆ ನೀಡಲು ಆಗ್ರಹಿಸುತ್ತೇವೆ. ಕಡೆಗಣಿಸಿದರೆ ಈ ಮುಂಚೆ ರಾಜ್ಯಭಾರ ಮಾಡಿ ಮನೆಯಲ್ಲಿ ಕುಳಿತಿರುವ ಘಟಾನುಘಟಿಗಳಂತೆ ನಿಮ್ಮನ್ನೂ ಮನೆಗೆ ಕಳುಹಿಸುವ ದಿಟ್ಟ ನಿರ್ಧಾರಕ್ಕೆ ಬರಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಕಲಿ ಪ್ರಮಾಣ ಪತ್ರ ಪಡೆಯುತ್ತಿರುವವರಿಂದ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಜಾಗೃತಿ ಮೂಡಿಸುವ, ವೈಚಾರಿಕತೆಯನ್ನು ಸಮುದಾಯದಲ್ಲಿ ಬಿತ್ತುವ ಮಹದುದ್ಧೇಶವನ್ನೇ ಈ ಜಾತ್ರೆ ಹೊಂದಿದೆ. ಹೀಗಾಗಿ, ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವರು. ಕಾರಟಗಿ ತಾಲೂಕಿನ ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.

ಈ ವೇಳೆ ಸಮಾಜದ ತಾಲೂಕು ಅಧ್ಯಕ್ಷ್ಷಗದ್ದೆಪ್ಪ ನಾಯಕ, ಪ್ರಮುಖರಾದ ಗಿರಿಯಪ್ಪ ಬೂದಿ, ೨೦೨೪ ಜಾತ್ರಾ ಸಮಿತಿಯ ಅಧ್ಯಕ್ಷ ಸೋಮನಾಥ ದೊಡ್ಡಮನಿ, ಮಲ್ಲಿಕಾಜುನ ಚೆಳ್ಳೂರು, ದುರುಗೇಶ ಪ್ಯಾಟ್ಯಾಳ, ಸುರೇಶ ಬೆಳ್ಳಿಕಟ್ಟಿ, ವೀರೇಶ ತಳವಾರ, ರಾಘವೇಂದ್ರ ಹುಳ್ಕಿಹಾಳ, ಭೋಗೇಶ ಗುತ್ತಿಗೆದಾರರು, ಹನುಮೇಶ ಗುರಿಕಾರ, ನಾಗರಾಜ ನಂದಿಹಳ್ಳಿ, ರಮೇಶ ಜನೌಷಧ, ಆಂಜನೇಯ ಹಗೇದಾಳ, ಶರಣಬಸವ ಡಂಕನಕಲ್, ವಿಜಯಲಕ್ಷ್ಮೀ ಉಳೇನೂರು, ಹುಲಿಗೆಮ್ಮ ನಾಯಕ ಸೇರಿದಂತೆ ಇತರರು ಇದ್ದರು.

ವಾಲ್ಮೀಕಿ ಮಹಾಸಭಾದ ಜಿಲ್ಲಾಧ್ಯಕ್ಷ ಡಾ. ಕೆ.ಎನ್. ಪಾಟೀಲ್, ಶಿವರೆಡ್ಡಿ ನಾಯಕ ವಕೀಲರು ಮಾತನಾಡಿದರು. ಸೋಮನಾಥ ಹೆಬ್ಬಡದ ಮತ್ತು ಶರಣಪ್ಪ ಚಾಗಿ ನಿರ್ವಹಿಸಿದರು.