ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಮಾನವ ಕಳ್ಳಸಾಗಾಣಿಕೆಯಿಂದ ಒಬ್ಬ ವ್ಯಕ್ತಿ ಮಾತ್ರ ಸಮಸ್ಯೆಗೆ ಸಿಲುಕುವುದಿಲ್ಲ. ಆವರ ಕುಟುಂಬವೂ ಸಂಕಷ್ಟಕ್ಕೆ ಸಿಲುಕಲಿದೆ. ಆದ್ದರಿಂದ ಈ ರೀತಿಯ ಸಮಸ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ವರ್ತಿಸಿದಾಗ ಮಾತ್ರ ಒಬ್ಬ ವ್ಯಕ್ತಿ ಹಾಗೂ ಒಂದು ಕುಟುಂಬದಲ್ಲಿ, ಸಮಾಜದಲ್ಲಿ ನೆಮ್ಮದಿ ಸಾಧ್ಯವೆಂದು ಅಪರ ಸಿವಿಲ್ ನ್ಯಾಯಾಧೀಶೆ ಐಶ್ವರ್ಯ ಎಸ್. ಗುಡದಿನ್ನಿ ಅಭಿಪ್ರಾಯಪಟ್ಟರು.ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಮಾನವ ಕಳ್ಳ ಸಾಗಾಣಿಕೆ ನಿಷೇಧ ಕಾಯಿದೆ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯಾವುದೇ ಅಪರಾಧ ನಡೆಯುವ ಮುನ್ನ ಕೆಲವು ಸುಳಿವುಗಳನ್ನು ಸ್ಥಳದಲ್ಲಿ ಕಾಣಬಹುದು. ಜತೆಗೆ ಅಂತಹ ಸನ್ನಿವೇಶಗಳಲ್ಲಿ ಅಪರಾಧ ತಡೆಯುವ ಅವಕಾಶಗಳು ಇರುತ್ತದೆ. ಮಾನವ ಕಳ್ಳ ಸಾಗಾಣಿಕೆಯಲ್ಲಿ ವಯಸ್ಸಿನ ಮಿತಿ ಇರುವುದಿಲ್ಲ ಹಾಗೂ ತನ್ನನ್ನು ತಾನು ರಕ್ಷಿಸಿಕೊಳ್ಳಲಾಗದ ವ್ಯಕ್ತಿ ಇಲ್ಲಿ ಬಲಿಪಶು ಆಗುತ್ತಾರೆ. ಇಂತಹ ವ್ಯಕ್ತಿಗಳು ಗುರಿಯಾಗುವ ಸಂದರ್ಭದಲ್ಲಿ ಸಮಾಜದಲ್ಲಿ ಬದಲಾವಣೆ ಅಥವಾ ಇದ್ದಕ್ಕಿದ್ದಂತೆ ಅಹಿತಕರ ಘಟನೆ ನಮ್ಮ ಗಮನಕ್ಕೆ ಬಂದಾಗ ಹೋಗಿ ತಡೆಯಬೇಕು ಎಂಬುದಿಲ್ಲ, ಆದರೆ ತುರ್ತು ಸಹಾಯವಾಣಿ ಕೇಂದ್ರದ ಸಂಖ್ಯೆ ೧೧೨ ಅಥವಾ ೧೦೯೮ ನಂಬರ್‌ಗೆ ಕರೆ ಮಾಡಿ ತಿಳಿಸಿದಾಗ ಮುಂದಿನ ಅಪರಾಧವನ್ನು ತಡೆಯಬಹುದು. ವಿವಿಧ ಇಲಾಖೆಗಳ ನಿರ್ದಿಷ್ಟ ಅಧಿಕಾರಿ ಮಾತ್ರ ಕ್ರಮಕೈಗೊಳ್ಳಬೇಕು ಎಂದೇನಿಲ್ಲ, ಮೇಲ್‌ಸ್ತರ ಅಥವಾ ಕೆಳಸ್ತರ ಅಧಿಕಾರಿ ಎಂದೇನಿಲ್ಲ, ಒಬ್ಬ ವ್ಯಕ್ತಿ ಬಲಿಯಾವುದನ್ನು ತಪ್ಪಿಸಲು ಪ್ರತಿಯೊಬ್ಬರೂ ಮುಂದಾಗಬೇಕೆಂದು ತಿಳಿಸಿದರು. ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್ ಮಾತನಾಡಿ, ಮಾನವ ಕಳ್ಳಸಾಗಣೆ ಎಂದರೆ ಲಾಭಕ್ಕಾಗಿ ಸ್ವಾತಂತ್ರ್ಯವನ್ನು ಕದಿಯುವ ವ್ಯವಹಾರ. ಕೆಲವು ಸಂದರ್ಭಗಳಲ್ಲಿ, ಕಳ್ಳಸಾಗಣೆದಾರರು ಲೈಂಗಿಕತೆ ಅಥವಾ ಅಮಾನವೀಯ ಲೈಂಗಿಕ ಶೋಷಣೆ, ಬಲವಂತದ ಕಾರ್ಮಿಕ, ಗುಲಾಮಗಿರಿ, ಜೀತಪದ್ಧತಿ ಮತ್ತು ಅಂಗಾಂಗಗಳನ್ನು ತೆಗೆಯುವುದನ್ನು ಒಳಗೊಂಡಿದೆ ಮತ್ತು ಕಾನೂನುಬಾಹಿರ ಅಥವಾ ಸ್ವೀಕಾರಾರ್ಹವಲ್ಲದ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವಂತೆ ಒತ್ತಾಯ ಅಥವಾ ಹಿಂಸೆ ನೀಡಲಾಗುತ್ತದೆ. ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವನ್ನು ಶೋಷಣೆಯ ಉದ್ದೇಶಕ್ಕಾಗಿ ನೇಮಕಾತಿ, ಸಾಗಣೆ, ವರ್ಗಾವಣೆ, ಆಶ್ರಯ ಅಥವಾ ಸ್ವೀಕರಿಸುವುದನ್ನು ಬಲವಂತ, ವಂಚನೆ ಅಥವಾ ವಂಚನೆ ಇಲ್ಲದಿದ್ದರೂ ಸಹ ಯಾವಾಗಲೂ ಕಳ್ಳಸಾಗಣೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮಾನವ ಕಳ್ಳಸಾಗಣೆ ಅಥವಾ ಕಾನೂನು ಬಾಹಿರ ಕೃತ್ಯಗಳು ಕಂಡುಬಂದಲ್ಲಿ ಜವಾಬ್ದಾರಿಯಿಂದ ನಮ್ಮ ಕರ್ತವ್ಯ ನಿರ್ವಹಿಸಿ, ಉತ್ತಮ ಸಮಾಜ ನಿರ್ಮಾಣದಲ್ಲಿ ಭಾಗಿಯಾಗೋಣವೆಂದರು.
ಪೊಲೀಸ್ ಉಪ ಅಧೀಕ್ಷಕರಾದ ಶಾಲೂ ಮಾತನಾಡಿ, ಸಮಾಜದಲ್ಲಿ ಪೊಲೀಸರ ಜವಾಬ್ದಾರಿ ಹೆಚ್ಚಿಗೆ ಇದ್ದು, ಮಾನವ ಕಳ್ಳಸಾಗಣೆಯಂತಹ ಕೃತ್ಯಗಳು ನಡೆಯುವ ಮುನ್ನ ಒಬ್ಬ ವ್ಯಕ್ತಿ ಇಲ್ಲಸಲ್ಲದ ಆಸೆ ಆಮಿಷ ತೋರಿ, ಉತ್ತೇಜಿಸುವ ವ್ಯಕ್ತಿಗಳ ಬಗ್ಗೆ ಪೂರ್ವಪರ ಪರಿಶೀಲನೆಯೂ ಮಾನವ ಕಳ್ಳಸಾಗಣೆ ತಡೆಗಟ್ಟುವ ನಿಟ್ಟಿನಲ್ಲಿ ಸಹಕಾರಿಯಾಗುತ್ತದೆ. ಈ ರೀತಿಯ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ನೀವು ಮಾಹಿತಿ ನೀಡಿದರೆ ಅಗತ್ಯ ತನಿಖೆ ನಡೆಸಿ, ಕ್ರಮಕೈಗೊಳ್ಳಲು ಸಾಧ್ಯ. ಆದ್ದರಿಂದ ಪೊಲೀಸ್ ಇಲಾಖೆಯ ಜತೆಗೆ ಸಾರ್ವಜನಿಕರು ಕೈಜೋಡಿಸಿ, ಕಾನೂನು ಬಾಹಿರ ಯಾವುದೇ ಚಟುವಟಿಕೆ ನಿಮ್ಮ ಗಮನಕ್ಕೆ ಬಂದಲ್ಲಿ ಮಾಹಿತಿ ನೀಡುವಂತೆ ಸಲಹೆ ನೀಡಿದರು.ತಹಸೀಲ್ದಾರ್ ರೇಣುಕುಮಾರ್ ವೈ.ಎಂ. ಮತ್ತುಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಖಿ, ಒನ್ ಸ್ಟಾಫ್ ಸೆಂಟರ್, ವಕೀಲರಾದ ಬಿಂದೇಶ್ವರಿ ಮಾತನಾಡಿದರು. ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಸುರೇಶ ಸಿ. ಪ್ರಮಾಣ ವಚನ ಬೋಧಿಸಿದರು. ಅಂಗನವಾಡಿ ಶಿಕ್ಷಕಿ ಶೋಭ ಪ್ರಾರ್ಥಿಸಿದರು, ಸಿಡಿಪಿಒ ಕಚೇರಿಯ ಪುಷ್ಪಲತಾ ಸ್ವಾಗತಿಸಿದರು ಹಾಗೂ ಪಂಕಜ ನಿರೂಪಿಸಿದರು. ಬಿಇಒ ಜಿ.ಎನ್.ಸೋಮಲಿಂಗೇಗೌಡ, ಮುಖ್ಯಾಧಿಕಾರಿ ಶಿವಶಂಕರ್, ಇಒ ಮುನಿರಾಜು, ಇತರರು ಇದ್ದರು.