ತಮಿಳುನಾಡಿಗೆ ಅನಧಿಕೃತವಾಗಿ ಮೇವು ಸಾಗಾಣಿಕೆ ಮಾಡುತ್ತಿರುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಹನೂರು ಮಂಡಲದ ಪದಾಧಿಕಾರಿಗಳು ಪಟ್ಟಣದಲ್ಲಿ ತಹಸೀಲ್ದಾರ್ ಚೈತ್ರ ಅವರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ, ಹನೂರು
ತಮಿಳುನಾಡಿಗೆ ಅನಧಿಕೃತವಾಗಿ ಮೇವು ಸಾಗಾಣಿಕೆ ಮಾಡುತ್ತಿರುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಹನೂರು ಮಂಡಲದ ಪದಾಧಿಕಾರಿಗಳು ಪಟ್ಟಣದಲ್ಲಿ ತಹಸೀಲ್ದಾರ್ ಚೈತ್ರ ಅವರಿಗೆ ಮನವಿ ಸಲ್ಲಿಸಿದರು.ಹನೂರು ಮಂಡಲ ಅಧ್ಯಕ್ಷ ವೃಷಭೇಂದ್ರ ಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು ಅಂತರ್ಜಲ ಕುಸಿತವಾಗಿದೆ. ಹನೂರು ಭಾಗದಲ್ಲಿ ಹೈನುಗಾರಿಕೆಯನ್ನು ಅವಲಂಬಿಸಿರುವ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ಈ ಭಾಗದ ರೈತರ ಪ್ರಧಾನ ಕಸುಬು ಹಸು ಸಾಕಾಣಿಕೆ ಈ ಭಾಗದಲ್ಲಿ ವಿಶೇಷ ಜಾತಿಯ ಹಳ್ಳಿಕಾರ್ ತಳಿ ಬರಗೂರ್ ತಳಿ ಇತ್ತೀಚಿಗೆ ಗೀರ್ ತಳಿ ಹಾಗೂ ಮಿಶ್ರತಳಿ ಹಸುಗಳನ್ನು ಸಾಕಿದ್ದು ಹಾಲು ಮಾರಾಟದಿಂದ ಜೀವನ ಸಾಗಿಸುತ್ತಿರುತ್ತಾರೆ.ಹೊಲಗದ್ದೆಗಳಲ್ಲಿ ನೀರು ಕಡಿಮೆಯಾಗಿರುವುದರಿಂದ ಬೆಳೆ ಬೆಳೆಯಲಾಗದೆ ಅನ್ನದಾತ ಕಂಗಲಾಗಿದ್ದಾನೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯದಿಂದ ಬತ್ತದ ಹುಲ್ಲನ್ನು ನೆರೆಯ ರಾಜ್ಯದವರು ದಿನನಿತ್ಯ ನೂರಾರು ವಾಹನಗಳಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದಾರೆ. ಇದರಿಂದ ಇಲ್ಲಿಯ ಸ್ಥಳೀಯ ಹೈನುಗಾರರಿಗೆ ಮೇವಿನ ಅಭಾವ ಬಂದು ಪಶು ಸಂಪತ್ತು ನಶಿಸಿ ಹೋಗುವ ಸಾಧ್ಯತೆ ಇದೆ.
ಅಲ್ಲದೆ ಮುಂಬರುವ ಬೇಸಿಗೆಯಲ್ಲಿ ಇಲ್ಲಿ ಹಸುಗಳಿಗೆ ಮೇವು ಸಿಗದಂತಾಗುತ್ತದೆ. ಆದ್ದರಿಂದ ನೆರೆರಾಜಕ್ಕೆ ಕಾಳ ಸಂತೆಯಲ್ಲಿ ಮೇವು ಸಾಗಾಣಿಕೆಯಾಗುತ್ತಿರುವುದನ್ನು ತಡೆಯಬೇಕು. ತಾಲೂಕಿನ ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್ ಗಳಲ್ಲಿ ಅಧಿಕಾರಿಗಳನ್ನು ನೇಮಕ ಮಾಡಿ ಅನಧಿಕೃತವಾಗಿ ಸಾಗಾಣಿಕೆ ಮಾಡುತ್ತಿರುವ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು.ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ತಕ್ಷಣವೇ ಮೇವು ಖರೀದಿ ಮಾಡಿ ಮೇವು ನಿಧಿ ಸ್ಥಾಪನೆ ಮಾಡಬೇಕು. ಮುಂಬರುವ ದಿನಗಳಲ್ಲಿ ಹೋಬಳಿ ಕೇಂದ್ರದಲ್ಲಿ ಮೇವು ಘಟಕ ಸ್ಥಾಪನೆ ಮಾಡಿ ಹಸು ಸಾಕಾಣಿಕೆಯನ್ನೇ ನಂಬಿಕೊಂಡಿರುವ ಅನ್ನದಾತನಿಗೆ ನೆರವಾಗಬೇಕೆಂದು ಆಗ್ರಹಿಸಿದರು.
ಕಳೆದ ತಿಂಗಳಲ್ಲೇ ಈ ವಿಚಾರವಾಗಿ ತಾಲೂಕು ಆಡಳಿತಕ್ಕೆ ಅರ್ಜಿ ಸಲ್ಲಿಸಿ ಮುಂಜಾಗ್ರತೆ ವಹಿಸಬೇಕೆಂದು ಮನವಿ ಮಾಡಿದ್ದರು ಸಹ ಪ್ರಯೋಜನವಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ವೃಷಭೇಂದ್ರ ಸ್ವಾಮಿ, ಮಾಜಿ ಅಧ್ಯಕ್ಷರಾದ ಜಗನ್ನಾಥ ನಾಯ್ಡು, ಪ್ರಧಾನ ಕಾರ್ಯದರ್ಶಿಗಳಾದ ಮಾತೃಭೂಮಿ ಮೂರ್ತಿ, ವರಪ್ರಸಾದ್, ಕಾರ್ಯದರ್ಶಿ ಮಹಾದೇವಸ್ವಾಮಿ, ನಾಗರಾಜು ನಾಯ್ಕ, ಮಹದೇವ್ ಸೇರಿದಂತೆ ಹಲವಾರು ಪದಾಧಿಕಾರಿಗಳು ಭಾಗವಹಿಸಿದ್ದರು.
------------4ಸಿಎಚ್ಎನ್12
ತಮಿಳುನಾಡಿಗೆ ಅನಧಿಕೃತವಾಗಿ ಮೇವು ಸಾಗಾಣಿಕೆ ಮಾಡುತ್ತಿದ್ದೂ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಜನತಾ ಪಾರ್ಟಿ ಹನೂರು ಮಂಡಲದ ಪದಾಧಿಕಾರಿಗಳು ಪಟ್ಟಣದಲ್ಲಿ ತಹಸೀಲ್ದಾರ್ ಚೈತ್ರ ಅವರಿಗೆ ಮನವಿಯನ್ನು ಸಲ್ಲಿಸಿದರು.