ದೌರ್ಜನ್ಯ ತಡೆ ಎಲ್ಲರ ಜವಾಬ್ದಾರಿ: ಡಿಸಿ ಸಿ.ಎನ್. ಶ್ರೀಧರ್

| Published : Nov 21 2025, 02:15 AM IST

ದೌರ್ಜನ್ಯ ತಡೆ ಎಲ್ಲರ ಜವಾಬ್ದಾರಿ: ಡಿಸಿ ಸಿ.ಎನ್. ಶ್ರೀಧರ್
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ, ಪ್ರಾಥಮಿಕ ತನಿಖೆಯ ಹಂತ, ಚಾರ್ಜ್‌ಶೀಟ್ ಸಲ್ಲಿಕೆ, ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣಗಳ ವಿವರಗಳನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಂದಾ ಹಣಬರಟ್ಟಿ ಮಂಡಿಸಿದರು.

ಗದಗ: ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಕೇವಲ ಪುಸ್ತಕದಲ್ಲಿರಬಾರದು. ಅದರ ಜವಾಬ್ದಾರಿ ಅನುಷ್ಠಾನ ನಮ್ಮ ಮೇಲಿದೆ. ದೌರ್ಜನ್ಯ ಪೀಡಿತರ ಮನಸ್ಸಿನಲ್ಲಿ ಭಯವಲ್ಲ, ಭರವಸೆ ಮೂಡುವಂತೆ ಪೊಲೀಸ್ ಮತ್ತು ಆಡಳಿತ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್‌. ಶ್ರಿಧರ್‌ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಸಮಿತಿಯ ಮಹತ್ವದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ, ಪ್ರಾಥಮಿಕ ತನಿಖೆಯ ಹಂತ, ಚಾರ್ಜ್‌ಶೀಟ್ ಸಲ್ಲಿಕೆ, ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣಗಳ ವಿವರಗಳನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಂದಾ ಹಣಬರಟ್ಟಿ ಮಂಡಿಸಿದರು.ತನಿಖೆ ವಿಳಂಬವಾಗಿರುವ ಕೆಲವು ಪ್ರಕರಣಗಳ ಬಗ್ಗೆ ಕಾರಣ ವಿಚಾರಿಸಿದ ಜಿಲ್ಲಾಧಿಕಾರಿಗಳು, ಕಾನೂನುಬದ್ಧ ಅವಧಿಯೊಳಗೆ ತನಿಖೆ ಪೂರ್ಣಗೊಳಿಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ಹೊರಿಸಿ ಇತರರಿಗೆ ಸಂದೇಶ ನೀಡಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ದೂರು ನೀಡಲು ಹೆದರುವ ಪೀಡಿತರಿಗೆ ಕಾನೂನು ಸಹಾಯ, ಕೌನ್ಸೆಲಿಂಗ್ ವ್ಯವಸ್ಥೆ ಕಲ್ಪಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ತಿಳಿಸಿದರು.

ಸಭೆಯಲ್ಲಿ ದೂರನ್ನು ಸ್ವೀಕರಿಸುವ ಪೊಲೀಸ್ ಠಾಣೆ, ತಹಸೀಲ್ದಾರ್ ಕಚೇರಿ, ಸಮಾಜ ಕಲ್ಯಾಣ ಕಚೇರಿ ಮುಂತಾದ ಕಡೆ ದೂರವಾಣಿ ಸಂಖ್ಯೆಗಳು, ತುರ್ತು ಸಂಪರ್ಕ ವಿವರಗಳನ್ನು ಗೋಚರವಾಗುವಂತೆ ಅಂಟಿಸುವಂತೆ ಸೂಚಿಸಲಾಯಿತು.

ಪ.ಜಾ., ಪ.ಪಂ. ಜನರಿಗೆ ತಲುಪಬೇಕಾದ ವಸತಿ, ವೈದ್ಯಕೀಯ, ಶಿಕ್ಷಣ ಸೇರಿದಂತೆ ವಿವಿಧ ಸೌಲಭ್ಯಗಳು ಅರ್ಹರಿಗೆ ಸಕಾಲದಲ್ಲಿಯೆ ದೊರಕಬೇಕು. ಹೊಂಬಳ ನಾಕಾದ ಸ್ಮಶಾನ ಭೂಮಿಯಲ್ಲಿ ಬೆಳೆದಿರುವ ಮುಳ್ಳಿನ ಕಂಟಿಗಳನ್ನು ತೆಗೆದು ಸ್ವಚ್ಛಗೊಳಿಸಿ ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಸಮಿತಿ ಸದಸ್ಯರಾದ ಶರೀಫ್ ಬಿಳೆಯಲಿ, ಸುರೇಶ ನಡುವಿನಮನಿ, ವಿನಾಯಕ ಬಳ್ಳಾರಿ, ತುಕ್ಕಪ್ಪ ಪೂಜಾರ, ಶ್ರೀನಿವಾಸ ದ್ಯಾವನೂರ, ಧ್ರುವರಾಜ ಹೊನ್ನಪ್ಪನವರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟ್ಟೂರ, ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಹಬೂಬ ತುಂಬರಮಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ., ಕಾರ್ಮಿಕ ಇಲಾಖೆ ಅದಿಕಾರಿ ಶ್ರೀಶೈಲ ಸೋಮನಕಟ್ಟಿ, ಡಿಎಚ್‌ಒ ಡಾ. ಎಸ್.ಎಸ್. ನೀಲಗುಂದ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ಶರಣು ಗೋಗೇರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.