ಎಚ್‌ಐವಿ ನಿಯಂತ್ರಣಕ್ಕೆ ಮುಂಜಾಗ್ರತೆ ಮುಖ್ಯ: ಡಾ. ಆಜ್ಞಾ ನಾಯಕ

| Published : Dec 10 2024, 12:31 AM IST

ಸಾರಾಂಶ

ಯುವ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ಎಚ್‌ಐವಿಗೆ ತುತ್ತಾಗುತ್ತಿರುವುದು ಕಳವಳಕಾರಿ. ಡ್ರಗ್ಸ್ ಸೇವನೆ, ಅನಧಿಕೃತ ಟ್ಯಾಟು ಕೇಂದ್ರಗಳಿಂದ ದೂರವಿರಬೇಕು.

ಕುಮಟಾ: ಎಚ್‌ಐವಿ ಸೋಂಕಿತರನ್ನು ಸಮಾಜದಲ್ಲಿ ಗೌರವದಿಂದ ಬದುಕಲು ಅವಕಾಶ ನೀಡುವುದು ಅವಶ್ಯ. ಏಡ್ಸ್ ಸಂಪೂರ್ಣ ಗುಣಪಡಿಸುವಿಕೆ ಅಸಾಧ್ಯವಾದ್ದರಿಂದ ಮುಂಜಾಗ್ರತಾ ಕ್ರಮವೇ ಸುರಕ್ಷಿತ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ ತಿಳಿಸಿದರು.ಇಲ್ಲಿನ ಡಾ. ಎ.ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಯುತ್‌ ರೆಡ್‌ಕ್ರಾಸ್, ರೋವರ್ಸ್‌ ಸ್ಕೌಟ್ಸ್- ಗೈಡ್ಸ್, ಎನ್ಎಸ್ಎಸ್ ಘಟಕ, ಎನ್‌ಸಿಸಿ, ಮಹಿಳಾ ಘಟಕಗಳೊಂದಿಗೆ ತಾಲೂಕು ಆರೋಗ್ಯ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ರೋಗ ದಿನಾಚರಣೆ ಮತ್ತು ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.ತಾಲೂಕಾಸ್ಪತ್ರೆಯ ಐಸಿಟಿಸಿ ಆಪ್ತ ಸಮಾಲೋಚಕ ಪ್ರದೀಪ ನಾಯ್ಕ ಮಾತನಾಡಿ, ಯುವ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ಎಚ್‌ಐವಿಗೆ ತುತ್ತಾಗುತ್ತಿರುವುದು ಕಳವಳಕಾರಿ. ಡ್ರಗ್ಸ್ ಸೇವನೆ, ಅನಧಿಕೃತ ಟ್ಯಾಟು ಕೇಂದ್ರಗಳಿಂದ ದೂರವಿರಿ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎನ್.ಕೆ. ನಾಯಕ ಅವರು, ವಿದ್ಯಾರ್ಥಿಗಳ ಬದುಕು ಅಮೂಲ್ಯ. ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ಏಡ್ಸ್‌ನಂತಹ ಮಹಾಮಾರಿ ರೋಗದ ಕುರಿತು ಎಚ್ಚರ ವಹಿಸುವುದು ಅವಶ್ಯಕ ಎಂದರು. ವೇದಿಕೆಯಲಿ ಕ್ಷಯರೋಗ ಕಾರ್ಯಕ್ರಮಾಧಿಕಾರಿ ರಾಘವೇಂದ್ರ ನಾಯ್ಕ, ಐಕ್ಯುಎಸಿ ಸಂಚಾಲಕ ಪ್ರೊ. ಲೋಕೇಶ ಹೆಗಡೆ, ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷೆ ಪ್ರೊ. ವಿದ್ಯಾ ತಲಗೇರಿ, ಎನ್ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಶಿವಾನಂದ ಬುಳ್ಳಾ, ಎನ್‌ಸಿಸಿ ನೇವಿ ಅಧಿಕಾರಿ ವಿ.ಆರ್. ಶಾನಭಾಗ, ಎನ್‌ಸಿಸಿ ಆರ್ಮಿ ಅಧಿಕಾರಿ ಡಾ. ಶ್ರೀನಿವಾಸ ಹರಿಕಾಂತ, ರೋವರ್ಸ್‌ಸ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕ ಶ್ರೀಕಾಂತ ಮೊಗೇರ, ಯುತ್‌ ರೆಡ್ ಕ್ರಾಸ್ ಸಂಚಾಲಕ ಎಚ್.ಜಿ. ಕಿರಣ್ ಉಪಸ್ಥಿತರಿದ್ದರು. ಶಾಂಭವಿ ಸಂಗಡಿಗರು ಪ್ರಾರ್ಥಿಸಿದರು. ಎಚ್.ಜಿ. ಕಿರಣ್ ಸ್ವಾಗತಿಸಿದರು, ಡಾ. ಶಿವಾನಂದ ಬುಳ್ಳಾ ವಂದಿಸಿದರು. ಮಾಯಾ ಹೆಗಡೆಕರ್, ಕೀರ್ತಿ ನಿರೂಪಿಸಿದರು.ಇಂದು ಸ್ವ ಉದ್ಯೋಗ ಮಾಹಿತಿ ಶಿಬಿರ

ದಾಂಡೇಲಿ: ಇಲ್ಲಿನ ಕೆನರಾ ಬ್ಯಾಂಕ್, ದೇಶಪಾಂಡೆ ಹಳಿಯಾಳದ ಆರ್‌ಸೆಟಿ, ಲಯನ್ಸ್ ಕ್ಲಬ್, ಮನುವಿಕಾಸ ಸಂಸ್ಥೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಸ್ವ- ಉದ್ಯೋಗ ಮಾಹಿತಿ ಶಿಬಿರ(ಚಿಂತೆಬಿಡಿ ಉದ್ಯೋಗಕ್ಕೆ ಆದ್ಯತೆ ಕೊಡಿ)ವು ಡಿ. ೧೦ರಂದು ಬೆಳಗ್ಗೆ ೯.೩೦ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ನಗರದ ಕರ್ನಾಟಕ ಸಂಘದ ಪಂಚಗಾನ ಭವನದಲ್ಲಿ ನಡೆಯಲಿದೆ.ಶಿಬಿರದಲ್ಲಿ ನಗರ ಮತ್ತು ಗ್ರಾಮೀಣ ಭಾಗದ ಸ್ವ- ಉದ್ಯೋಗದಲ್ಲಿ ಆಸಕ್ತ ಇರುವ ಯುವಕ, ಯುವತಿಯರಿಗೆ ಉಯೋಗದ ಆಯ್ಕೆ ಬಗ್ಗೆ ಮಾಹಿತಿ ನೀಡಲಾಗುವುದು. ತರಬೇತಿಗೆ ಸಂಬಂದಿಸಿದಂತೆ ಸ್ಥಳದಲ್ಲಿಯೇ ಅರ್ಜಿಗಳನ್ನು ತುಂಬಿಸಿಕೊಳ್ಳಲಾಗುತ್ತದೆ. ಸ್ವಂತ ಉದ್ಯಮವನ್ನು ಪ್ರಾರಂಭ ಮಾಡಲು ಉಪಯುಕ್ತ ಮಾಹಿತಿ, ಮಾರ್ಗದರ್ಶ ದೊರೆಯಲಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಘಟಕರು ಪತ್ರಿಕಾ ಪ್ರಕಟನೆ ಮೂಲಕ ವಿನಂತಿಸಿದ್ದಾರೆ.