ಸಾರಾಂಶ
ಗದಗ: ಬಾಲ್ಯ ವಿವಾಹ ಎನ್ನುವುದು ಸಮಾಜಕ್ಕೆ ಅಂಟಿದ ಶಾಪವಾಗಿದ್ದು, ಇದನ್ನು ತಡೆಗಟ್ಟಲು ವ್ಯಾಪಕ ಪ್ರಚಾರದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಕೋರ್ಟ್ ಹಾಲ್ ನಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ವಿವಿಧ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ತಾಲೂಕು ಮಟ್ಟದ ವಿವಿಧ ಸಮಿತಿಯ ಸಭೆಗಳು ಕಡ್ಡಾಯವಾಗಿ ಜರುಗಬೇಕು ಮತ್ತು ಬಾಲ ಮಂದಿರಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕು. ಬಾಲ್ಯವಿವಾಹ ತಡೆಗಟ್ಟಲು ಪ್ರೌಢ ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಬಾಲ್ಯವಿವಾಹದ ದುಷ್ಟರಿಣಾಮದ ಅರಿವನ್ನು ವ್ಯಾಪಕವಾಗಿ ಪ್ರಚಾರ ಮಾಡಬೇಕು, ಸಾಮೂಹಿಕ ಮದುವೆ ಜತೆಗೆ ವೈಯಕ್ತಿಕವಾಗಿ ನಡೆಯುವ ಮದುವೆಗಳಲ್ಲಿಯೂ ಗಮನಹರಿಸಬೇಕು. ಸಂಶಯ ಬಂದಲ್ಲಿ ಆಧಾರ ಕಾರ್ಡ್,ಶಾಲಾ ದಾಖಲಾತಿ, ವೈದ್ಯಕೀಯ ಪರೀಕ್ಷೆ ನಡೆಸಿ ಪರಿಶೀಲಿಸಬೇಕು. ಪೊಸ್ಕೊ ಪ್ರಕರಣ ತಡೆಗಟ್ಟಲು ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಉದ್ಯಾನವನ, ಆಟೋ ಚಾಲಕ, ಕಾರ್ಮಿಕರಲ್ಲಿ ಕಾಯ್ದೆಯನ್ನು ತಿಳಿಸಿ ಅರಿವು ಮೂಡಿಸಬೇಕು ನಿರ್ದೇಶಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಿವನಗೌಡ್ರ ಮಾತನಾಡಿ, ಪೊಲೀಸ್ ಇಲಾಖೆಯ ಚೆನ್ನಮ್ಮ ಪಡೆಯ ಮೂಲಕ ಎಲ್ಲ ಠಾಣೆ ಮತ್ತು ಗ್ರಾಮೀಣ ಭಾಗದಲ್ಲಿ ಬಾಲ್ಯ ವಿವಾಹವಾಗದಂತೆ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದರು.ಮಹಿಳಾ ಮತ್ತು ಮಕ್ಕಳ ರಕ್ಷಣಾಧಿಕಾರಿ ರಫೀಕಾ ಮಾತನಾಡಿ, 2023-24 ನೇ 4 ನೇ ತ್ರೈಮಾಸಿಕ ಮತ್ತು 2024-25 ನೇ ಸಾಲಿನ ನಡಾವಳಿ ತಿಳಿಸಿದರು.
ಜಿಪಂ ಸಿಇಓ ಭರತ್ ಎಸ್ ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ತರುವ ಪ್ರಯತ್ನ ವಾಗಬೇಕು ಎಂದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಕೆ. ಬೈಲೂರು, ಡಿಡಿಪಿಐ ಎಂ.ಎ. ರೆಡ್ಡೆರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.