ಪರಿಸರಸ್ನೇಹಿ ಅಭ್ಯಾಸಗಳಿಂದ ಹವಾಮಾನ ವೈಪರಿತ್ಯ ತಡೆ: ಪ್ರೊ.ಮಹಾಜನ್

| Published : Mar 23 2024, 01:05 AM IST

ಸಾರಾಂಶ

ಹವಾಮಾನ ಬದಲಾವಣೆ ಕುರಿತು ಜಾಗೃತಿ ಮೂಡಿಸಲು ಭಾರತಾದ್ಯಂತ ಸೈಕ್ಲಿಂಗ್ ಮಾಡುತ್ತಿರುವ ಪರಿಸರವಾದಿ ಪ್ರೊ.ಜಯಂತ್ ಮಹಾಜನ್ ಗುಜರಾತ್‌ನಿಂದ ಕರಾವಳಿಯುದ್ದಕ್ಕೂ 2,000 ಕಿ.ಮೀ. ಸೈಕ್ಲಿಂಗ್ ಅನ್ನು ಈಗಾಗಲೇ ಪೂರ್ಣಗೊಳಿಸಿ, ಮಣಿಪಾಲಕ್ಕೆ ಬಂದರು. ಅಲ್ಲಿ ಜಿಯೋಪಾಲಿಟಿಕ್ಸ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಕನ್ನಡಪ್ರಭ ವಾರ್ತೆ ಮಣಿಪಾಲನಾವು ವೈಯಕ್ತಿಕವಾಗಿ ನಮ್ಮ ದೈನಂದಿನ ಜೀವನದಲ್ಲಿ ಪರಿಸರಸ್ನೇಹಿ ಅಭ್ಯಾಸಗಳನ್ನು ಅಳವಡಿಸಿಕೊಂಡರೆ, ಹವಾಮಾನ ವೈಪರಿತ್ಯಗಳನ್ನು ತಡೆಗಟ್ಟುವಲ್ಲಿ ನಾವು ಒಟ್ಟಾಗಿ ಶ್ರಮಿಸಬಹುದು ಎಂದು ಪರಿಸರವಾದಿ ಪ್ರೊ.ಜಯಂತ್ ಮಹಾಜನ್ ಹೇಳಿದರು.

ಹವಾಮಾನ ಬದಲಾವಣೆ ಕುರಿತು ಜಾಗೃತಿ ಮೂಡಿಸಲು ಭಾರತಾದ್ಯಂತ ಸೈಕ್ಲಿಂಗ್ ಮಾಡುತ್ತಿರುವ ಅವರು, ಗುಜರಾತ್‌ನಿಂದ ಕರಾವಳಿಯುದ್ದಕ್ಕೂ 2,000 ಕಿ.ಮೀ. ಸೈಕ್ಲಿಂಗ್ ಅನ್ನು ಈಗಾಗಲೇ ಪೂರ್ಣಗೊಳಿಸಿ, ಮಣಿಪಾಲಕ್ಕೆ ಬಂದಿದ್ದರು.

ಇಲ್ಲಿನ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್) ಮತ್ತು ಜಿಯೋಪಾಲಿಟಿಕ್ಸ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಪ್ರೊ.ಮಹಾಜನ್, ಹವಾಮಾನ ಬದಲಾವಣೆಗೆ ಕಾರಣವಾಗುವ ಶಕ್ತಿಗಳು ನಮಗೆ ದೊಡ್ಡ ಸವಾಲಾಗಿದೆ. ಅದನ್ನು ತಡೆಯಲು ನಾವು ಕೆಲವು ನೀತಿಗಳನ್ನು ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಕಾರ್ಯಗತಗೊಳಿಸಬೇಕಾಗಿದೆ ಎಂದು ಹೇಳಿದರು.

ಮೂಲತಃ ಪುಣೆಯವರಾದ ಜಯಂತ್ ಮಹಾಜನ್ ಅವರು ಪ್ರಸ್ತುತ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರು ಭಾರತದ ಗಡಿಯುದ್ದಕ್ಕೂ ಇನ್ನೂ 18,000 ಕಿ.ಮೀ. ಸೈಕ್ಲಿಂಗ್ ಅನ್ನು ಮಾಡುವ ಉದ್ದೇಶ ಹೊಂದಿದ್ದಾರೆ. ತಾವು ಬಂದ ಮಾರ್ಗದಲ್ಲಿ ಅರಣ್ಯ ಪ್ರದೇಶಗಳು ಕಣ್ಮರೆಯಾಗುತ್ತಿರುವುದನ್ನು ಗಮನಿಸಿದ ಪ್ರೊ.ಮಹಾಜನ್ ತಮ್ಮ ಅನುಭವಗಳನ್ನು ಹಂಚಿಕೊಂಡರು.ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ, ಡಾ.ಧನಶ್ರೀ ಜಯರಾಂ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.* ಸಂಗೀತ - ನೃತ್ಯ ತರಬೇತಿಜಿಸಿಪಿಎಎಸ್ ಆಶ್ರಯದಲ್ಲಿ ಶುಕ್ರವಾರದಿಂದ ನೃತ್ಯ ಮತ್ತು ಸಂಗೀತದ ತರಗತಿಗಳು ಆರಂಭಗೊಂಡಿದ್ದು, ವಾರಕ್ಕೊಂದು ದಿವಸದಂತೆ ಮೇ ೨೧ರ ವರೆಗೆ ನಡೆಯಲಿವೆ. ಈ ಉಚಿತ ತರಗತಿಗಳು ಎಲ್ಲರಿಗೂ ಮುಕ್ತವಾಗಿವೆ. ನೃತ್ಯ ತರಗತಿಗಳು ಪ್ರತೀ ಸೋಮವಾರ ಸಂಜೆ ೫ ಗಂಟೆಗೆ ನಡೆಯಲಿದ್ದು, ಖ್ಯಾತ ನೃತ್ಯ ಕಲಾವಿದೆ ಡಾ. ಭ್ರಮರಿ ಶಿವಪ್ರಕಾಶ್ ಇವರು ಭರತನಾಟ್ಯವನ್ನು ವಿವಿಧ ಹಂತಗಳಲ್ಲಿ ಕಲಿಸಿಕೊಡಲಿದ್ದಾರೆ. ಸಂಗೀತ ತರಗತಿಗಳು ಪ್ರತೀ ಗುರುವಾರ ಸಂಜೆ ೪ ಗಂಟೆಗೆ ನಡೆಯಲಿದ್ದು, ಪ್ರತಿಭಾನ್ವಿತ ಯುವ ಸಂಗೀತ ಕಲಾವಿದೆ ಶ್ರಾವ್ಯ ಬಾಸ್ರಿ ಇವರು ಕರ್ನಾಟಕ ಸಂಗೀತ, ಸುಗಮ ಸಂಗೀತ ಮತ್ತು ಸಿನಿಮಾ ಹಾಡುಗಳನ್ನು ಕಲಿಸಿಕೊಡಲಿದ್ದಾರೆ.