ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲಸಮಾಜದಲ್ಲಿ ಪುರುಷ ಹಾಗೂ ಮಹಿಳೆಯರ ಅನುಪಾತದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ದಿನೇದಿನೇ ಕಡಿಮೆಯಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಗಂಭೀರ ಪರಿಣಾಮವನ್ನು ಉಂಟು ಮಾಡುತ್ತದೆ. ಇದನ್ನು ತಡೆಯುವುದು ಅತ್ಯಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಹೇಳಿದರು.
ಅವರು ಗುರುವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಯುಕ್ತ ಆಶ್ರಯದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದ ಅಂಗವಾಗಿ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ವೈದ್ಯಾಧಿಕಾರಿಯವರಿಗೆ ನಡೆದ ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಇತ್ತೀಚಿನ ದಿನಗಳಲ್ಲಿ ಯುವ ಗಂಡು ಮಕ್ಕಳು ಮದುವೆಯಾಗಲು ಹೆಣ್ಣು ಮಕ್ಕಳು ಸಿಗದೇ ಇರುವುದು ನಾವು ಕಾಣುತ್ತಿದ್ದೇವೆ. ಕಳೆದ ತಿಂಗಳು ರಾಜ್ಯ ಮಹಿಳಾ ನಿಲಯದಲ್ಲಿ ಅನಾಥ ಹೆಣ್ಣು ಮಕ್ಕಳ ಮದುವೆಯ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿದ ಅನೇಕ ಯುವಕರು ನಮಗೆ ಹೆಣ್ಣು ಬೇಕೆಂಬ ಕರೆಗಳು ಬರುತ್ತಿದೆ. ಸಮಾಜದಲ್ಲಿ ಲಿಂಗಾನುಪಾತ ವ್ಯತ್ಯಾಸಕ್ಕೆ ಇದೇ ಒಂದು ಉದಾಹರಣೆಯಾಗಿದೆ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಮಾತನಾಡಿ, ಸರ್ಕಾರ ಲಿಂಗ ತಾರತಮ್ಯ ನಿವಾರಣೆ ಹಾಗೂ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಒಂದೇ ಉದ್ದೇಶದಿಂದ ಭೇಟಿ ಪಡಾವೋ ಭೇಟಿ ಬಚಾವೋ ಆಂದೋಲನವನ್ನು ಜಾರಿಗೆ ತಂದಿದೆ. ಲಿಂಗಾನುಪಾತದ ವ್ಯತ್ಯಾಸ ದಿನೇ ದಿನೇ ಹೆಚ್ಚುತ್ತಾ ಹೋದಲ್ಲಿ ಮನುಕುಲಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.ಪಿ.ಸಿ.ಪಿ.ಎನ್.ಡಿ.ಟಿ. ಸಮಿತಿಯ ಅಧ್ಯಕ್ಷ ಡಾ. ಪ್ರತಾಪ್ ಕುಮಾರ್ ಮಾತನಾಡಿ, ಸಮಾಜದಲ್ಲಿನ ಗಂಡು ಮತ್ತು ಹೆಣ್ಣಿನ ಅನುಪಾತ ಸಮಾನಾಗಿರಬೇಕು. ಗಂಡು ಹೆಣ್ಣು ಎಂಬ ತಾರತಮ್ಯ ಯಾರೂ ಮಾಡಬಾರದು. ಸರ್ಕಾರ ಜಾರಿಗೆ ತಂದಿರುವ ಭ್ರೂಣ ಲಿಂಗ ಪತ್ತೆ ಕುರಿತ ಕಾನೂನನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ. ಪಿ. ಗಡಾದ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮರಾವ್, ಸರ್ಕಾರಿ ಹಾಗೂ ಖಾಸಗಿ ವೈದ್ಯಾಧಿಕಾರಿಗಳು, ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ. ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವೀಣಾ ವಿವೇಕಾನಂದ ನಿರೂಪಿಸಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ವಂದಿಸಿದರು.