ಸಾರಾಂಶ
ಧಾರವಾಡ:
ಮರು ಪರಿಸರ ಸ್ಥಾಪನೆಯು ಭೂಮಿಯ ಅವನತಿಯನ್ನು ಹಿಮ್ಮೆಟ್ಟಿಸುವ ಗುರಿ ಹೊಂದಿದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಸದಾನಂದ ಜೋಶಿ ಹೇಳಿದರು.ಇಲ್ಲಿಯ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಸ್ಥಾನಿಕ ಕೇಂದ್ರವು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಮೂಹ ಚರ್ಚೆಯಲ್ಲಿ ಮಾತನಾಡಿದ ಅವರು, ಮರುಭೂಮೀಕರಣವು ಶುಷ್ಕ, ಅರೆ ಶುಷ್ಕ ಪ್ರದೇಶಗಳಲ್ಲಿನ ಭೂಮಿಯ ಅವನತಿ ಸೂಚಿಸುತ್ತದೆ. ಇದು ಪ್ರಾಥಮಿಕವಾಗಿ ಮಾನವ ಚಟುವಟಿಕೆ ಮತ್ತು ಹವಾಮಾನ ಬದಲಾವಣೆಗಳಿಂದ ಉಂಟಾಗುತ್ತದೆ ಮತ್ತು ಇದು ಉತ್ಪಾದಕ ಭೂಮಿಯ ನಷ್ಟಕ್ಕೆ ಕಾರಣವಾಗುತ್ತದೆ. ಆದ್ದರಿಂದ ಭೂಮಿ ಹಾಗೂ ಪರಿಸರದ ಮರುಸ್ಥಾಪನೆಯು ಈ ಅವನತಿಯನ್ನು ಹಿಮ್ಮೆಟ್ಟಿಸುವ ಗುರಿ ಹೊಂದಿದೆ. ಈ ಹಿನ್ನೆಲೆಯಲ್ಲಿ ಪರಿಸರ ಕಾಪಾಡುವ ಕಾರ್ಯ ದುಪ್ಪಟ್ಟಾಗಬೇಕಿದೆ ಎಂದರು.
ನೇಚರ್ ಫಸ್ಟ್ ಇಕೋ ವಿಲೇಜ್ ಮುಖ್ಯಸ್ಥ ಪಿ.ವಿ. ಹಿರೇಮಠ ಮಾತನಾಡಿ, ಮರುಭೂಮಿಕರಣವು ಗಮನಾರ್ಹವಾದ ಜಾಗತಿಕ ಸಮಸ್ಯೆ. ಅದರ ಪರಿಣಾಮಗಳನ್ನು ತಗ್ಗಿಸಲು ಮತ್ತು ಭೂಮಿಯ ಅವನತಿ ತಡೆಗಟ್ಟಲು ಸ್ಥಳೀಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಗಳಿಂದ ಸಂಘಟಿತ ಪ್ರಯತ್ನಗಳ ಅಗತ್ಯವಿದೆ ಎಂದು ಹೇಳಿದರು.ಟಾಟಾ ಮಾರ್ಕೋಪೋಲೋ ಉಪ ವ್ಯವಸ್ಥಾಪಕ ಸುನೀಲ ರೊಡಿಗ್ಸ, ಮಳೆ ನೀರು ಕೊಯ್ಲು ತಮ್ಮ ಕೈಗಾರಿಕ ಪ್ರದೇಶದಲ್ಲಿ ಅಳವಡಿಸಿರುವ ಬಗ್ಗೆ ವಿವರಿಸಿದರು. ಸಂಸ್ಥೆಯ ಅಧ್ಯಕ್ಷರಾದ ಡಾ. ವಿ.ಎಸ್. ಹವಾಲ್ದಾರ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ವಿಜಯ ತೋಟಗೇರ, ಡಾ. ಎಸ್.ಜಿ. ಜೋಶಿ, ಡಾ. ಕೆ.ಎನ್. ಪಾಟೀಲ, ಸಂಜಯ ಕಬ್ಬೂರ, ಶ್ರೀಹರಿ ಕೆ.ಎಚ್, ಡಾ. ಸುನೀಲ ಹೊನ್ನುನಂಗರ ಇದ್ದರು.