ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನಲ್ಲಿ ಸಣ್ಣ ಈರುಳ್ಳಿ ಬೆಳೆಗೆ ಕೆಲ ದಿನ ಬಂಪರ್ ಬೆಲೆ ಸಿಕ್ಕಿತ್ತು. ಕಳೆದ ಕೆಲ ದಿನಗಳಿಂದ ತುಂತುರು, ಸಾಧಾರಣೆ ಮಳೆಗೆ ಮತ್ತೆ ಬೆಲೆ ಕುಸಿತಗೊಂಡು ರೈತರ ಕಣ್ಣಲ್ಲಿ ನೀರು ತರಿಸಿದೆ. ಸಣ್ಣ ಈರುಳ್ಳಿ ಬೆಳೆಯಲು ಮುಗಿ ಬಿದ್ದ ತಾಲೂಕಿನ ನೂರಾರು ರೈತರ ಗೋಳು ಹೇಳ ತೀರದಾಗಿದ್ದು, ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಕೊಡಿಸುವ ಕೆಲಸವಾಗಲಿ ಎಂಬ ರೈತರ ಬೇಡಿಕೆಯಾಗಿದೆ.ಬೆರಟಹಳ್ಳಿ ಗ್ರಾಮದ ಶ್ರೀಕಾಂತ್ ಮಾತನಾಡಿ, ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ, ಸೀತ ಗಾಳಿಗೆ ಸಣ್ಣ ಈರುಳ್ಳಿ ತೇವವಾಗಿ ಸಣ್ಣ ಈರುಳ್ಳಿ ಕಲರ್ ಮಾಸುತ್ತಿರುವ ಕಾರಣ ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎಂದರು.
ಮಳೆಗೆ ಸಣ್ಣ ಈರುಳ್ಳಿ ಬೆಳೆದ ರೈತರ ಪಾಡು ಹೇಳ ತೀರದಾಗಿದ್ದು, ಮಾಡಿದ ಖರ್ಚು ಬರುತ್ತಿಲ್ಲ. ಕ್ವಿಂಟಾಲ್ ಸಣ್ಣ ಈರುಳ್ಳಿಗೆ ೧ ಸಾವಿರದಿಂದ ೧.೫ ಸಾವಿರ ರು. ತನಕ ಕೇಳುತ್ತಿದ್ದಾರೆ ಎಂದು ಹೆಸರೇಳೀಚ್ಚಲಿಸಿದ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.ತಾಲೂಕಿನ ಸುಮಾರು ಸಾವಿರ ಹೆಕ್ಟೇರ್‌ಗೂ ಹೆಚ್ಚು ಮಂದಿ ಈರುಳ್ಳಿ ಬೆಳೆ ಹಾಕಲಾಗಿದೆ. ಸುಮಾರು ೨ ಸಾವಿರ ಎಕರೆಯಷ್ಟು ಕಟಾವಾಗಿದೆ. ಕಟಾವಾಗದ ಹಾಗೂ ಕಟಾವು ಮಾಡಿದ ರೈತರ ಸಣ್ಣ ಈರುಳ್ಳಿಗೆ ಬೆಲೆ ಇಲ್ಲದ ಕಾರಣ ಬೆಳೆಗಾರ ಕಂಗಾಲಾಗಿದ್ದಾರೆ.
ಈರುಳ್ಳಿಗೆ ಇದು ಸಕಾಲ ಎಂಬ ಭಾವನೆಯಿಂದ ನೂರಾರು ಮಂದಿ ರೈತರು ಈರುಳ್ಳಿ ಬೆಳೆಯತ್ತ ಮುಖ ಮಾಡಿದ್ದರು.ಕಳೆದ ವಾದ ನಿರಂತರ ಮಳೆಯ ವೇಳೆ ಸಣ್ಣ ಈರುಳ್ಳಿ ಬೆಳೆದ ರೈತರು ಸಂಕಷ್ಟಕ್ಕೆ ಒಳಗಾದರು ಈಗ ಬೆಲೆ ಕುಸಿತಗೊಂಡಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.ಬಿತ್ತನೆ ಈರುಳ್ಳಿ ಕ್ವಿಂಟಾಲ್‌ಗೆ ೪ ರಿಂದ ೫ ಸಾವಿರ ರು. ಬಂಡವಾಳ ಹಾಕಿದ ರೈತರು ಬಿತ್ತನೆ ಮಾಡಿದ್ದರು. ಏನು ಫಸಲು ಚೆನ್ನಾಗಿ ಬಂತು ಎಂದು ನಿಟ್ಟುಸಿರು ಬಿಡುವ ವೇಳೆಗೆ ಇದೀಗ ಕ್ವಿಂಟಾಲ್‌ಗೆ ಒಂದು ಸಾವಿರದಿಂದ ೧೫೦೦ ಕೇಳುತ್ತಿದ್ದಾರೆ ಎಂದು ರೈತರು ಅವಲತ್ತುಕೊಂಡಿದ್ದಾರೆ.
ಒಂದು ಎಕರೆಗೆ ೪ ಕ್ವಿಂಟಾಲ್ ಬಿತ್ತನೆ ಬೇಕು. ಬೆಳೆ ತೆಗೆಯುವ ಹಂತದ ಸಮಯದಲ್ಲಿ ಒಂದು ಎಕರೆ ಪ್ರದೇಶದಲ್ಲಿ ಈರುಳ್ಳಿ ಕೀಳಲು ೩ಸಾವಿರ ರು.ಕಿತ್ತ ಈರುಳ್ಳಿ ಬಿಡಿಸಲು ಕೂಲಿ ಒಂದು ದಿನಕ್ಕೆ ಊಟಿ ತಿಂಡಿ ಸೇರಿ ೩೦೦ ರು. ಖರ್ಚಾಗುತ್ತಿದೆ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.ಬೆಟ್ಟದಮಾದಹಳ್ಳಿ ಗ್ರಾಮದ ಬಿ.ಸಿ.ಮಹದೇವಸ್ವಾಮಿ ಮಾತನಾಡಿ, ಈರುಳ್ಳಿಗೆ ಕನಿಷ್ಟ ಕ್ವಿಂಟಾಲ್‌ಗೆ ೨೫೦೦ ರು.ಬಂದರೂ ಬಂಡವಾಳ ಬರುತ್ತದೆ. ಆದರೆ ಲಾಭ ಬರುವುದಿಲ್ಲ. ಇಂಥ ಸನ್ನಿವೇಶ ತಾಲೂಕಿನಲ್ಲಿ ಎದುರಾಗಿದೆ. ಆದರೆ ಬೆಲೆ ಕುಸಿತವಾಗಿರುವ ರೈತನ ಪಾಡು ದೇವರೇ ಕಾಪಾಡಬೇಕು ಎಂದು ಹೇಳಿದರು.
ಮಳೆಯಿಂದ ನಷ್ಟ ಈರುಳ್ಳಿ ಫಸಲು ಬರುವ ಸಮಯಕ್ಕೆ ಕಳೆದ ವಾರ ಮಳೆ ಬಂದ ಕಾರಣ ಈರುಳ್ಳಿಯ ಬೆಲೆ ಕುಸಿಯಲು ಪ್ರಮುಖ ಕಾರಣವಾಗಿದೆ.ಜೊತೆಗೆ ಹೆಚ್ಚು ಮಂದಿ ರೈತರು ಈರುಳ್ಳಿ ಬಿತ್ತನೆ ಮಾಡಿರುವುದು ಮತ್ತೊಂದು ಕಾರಣ.ಕಳೆದ ವಾರ ಮಳೆಯ ಕಾರಣ ಸಣ್ಣ ಈರುಳ್ಳಿ ನಷ್ಟವಾದರೆ ಈಗ ಬಿಸಿಲಿದೆ ಆದರೂ ಸಣ್ಣ ಈರುಳ್ಳಿ ಬೆಲೆ ಕಳೆದ ತಿಂಗಳು ಐದರಿಂದ ೫ ಸಾವಿರವಿತ್ತು.ಈಗ ಸಾವಿರ ಬಂದಿದೆ ಎಂದು ಗೋಪಾಲಪುರದ ಸುರೇಶ್ ಹೇಳಿದರು.
ತಾಲೂಕಿನಲ್ಲಿ ಈರುಳ್ಳಿ ಬೆಳೆ ಅತಿಯಾಗಿ ಬೆಳೆದಿರುವ ಕಾರಣ ಖರೀದಿ ಮಾಡುವವರಿಲ್ಲ ಹಾಗೂ ಈರುಳ್ಳಿ ಎಲ್ಲಾ ಕಡೆ ಬೆಳೆದಿರುವ ಕಾರಣ ಬೆಲೆ ಕುಸಿತ ಗೊಂಡು ರೈತ ಕಂಗೆಟ್ಟಿದ್ದಾನೆ.ಕ್ವಿಂಟಾಲ್‌ಗೆ ೪ ಸಾವಿರ ರು. ದರ ನಿಗದಿ ಮಾಡಿ
ಗುಂಡ್ಲುಪೇಟೆ : ಸಣ್ಣ ಈರುಳ್ಳಿ ಬೆಳೆದ ರೈತರಿಗೆ ಬೆಲೆ ಕುಸಿತದಿಂದ ಕಂಗಾಲಾಗಿದ್ದು, ರಾಜ್ಯ ಸರ್ಕಾರ ಮದ್ಯಪ್ರವೇಶ ಮಾಡಿ ಕ್ವಿಂಟಾಲ್‌ಗೆ ಕನಿಷ್ಠ ೪ ಸಾವಿರ ರು. ದರ ನಿಗದಿಪಡಿಸಬೇಕು ಎಂದು ಜಿಲ್ಲಾ ರೈತಸಂಘ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಕನ್ನಡಪ್ರಭದೊಂದಿಗೆ ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿಮ ರೈತರು ಬೆಳೆದ ಸಣ್ಣ ಈರುಳ್ಳಿಗೆ ೧೫೦೦ ರು.ಗೆ ಕೇಳುತ್ತಿಲ್ಲ. ರೈತ ಸಂಕಷ್ಟದಲ್ಲಿದ್ದಾನೆ. ರೈತರ ನೆರವಿಗೆ ಜಿಲ್ಲಾಡಳಿತ ಸ್ಪಂದಿಸಿ ರಾಜ್ಯ ಸರ್ಕಾರಕ್ಕೆ ವರದಿ ಮಾಡಬೇಕು ಎಂದು ಒತ್ತಾಯಿಸಿದರು.ಸಣ್ಣ ಈರುಳ್ಳಿ ಬೆಲೆ ಕುಸಿದಗೊಂಡ ಸಮಯದಲ್ಲಿ ಅಧಿಕಾರಿಗಳಾರು ಬೆಲೆ ಕುಸಿತದ ಬಗ್ಗೆ ಚಕಾರ ಎತ್ತುತ್ತಿಲ್ಲ. ಯಾವ ಕಾರಣಕ್ಕೆ ಬೆಲೆ ಕುಸಿತಾಯಿದೆ ಎಂದು ಚರ್ಚೆ ಕೂಡ ಮಾಡುತ್ತಿಲ್ಲ ಎಂದು ಆರೋಪಿಸಿದರು.