ಬೆಲೆ ಕುಸಿತ, ಮುಂಡರಗಿಯಲ್ಲಿ ತರಕಾರಿ ರಸ್ತೆಗೆ ಚೆಲ್ಲಿ ರೈತರ ಪ್ರತಿಭಟನೆ

| Published : Feb 07 2024, 01:48 AM IST

ಬೆಲೆ ಕುಸಿತ, ಮುಂಡರಗಿಯಲ್ಲಿ ತರಕಾರಿ ರಸ್ತೆಗೆ ಚೆಲ್ಲಿ ರೈತರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಉಳ್ಳಾಗಡ್ಡಿ, ಬದನೇಕಾಯಿ, ಮೆಣಸಿನಕಾಯಿ, ಸೌತೆಕಾಯಿ, ಟೋಮೆಟೋ ಸೇರಿದಂತೆ ವಿವಿಧ ತರಕಾರಿಗಳ ದರ ಕುಸಿದ ಹಿನ್ನೆಲೆಯಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಮುಂಡರಗಿಯ ರಸ್ತೆಯಲ್ಲಿ ತರಕಾರಿ ಚೆಲ್ಲುವ ಮೂಲಕ ಕೆಲ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಮುಂಡರಗಿ: ಉಳ್ಳಾಗಡ್ಡಿ, ಬದನೇಕಾಯಿ, ಮೆಣಸಿನಕಾಯಿ, ಸೌತೆಕಾಯಿ, ಟೋಮೆಟೋ ಸೇರಿದಂತೆ ವಿವಿಧ ತರಕಾರಿಗಳ ದರ ಕುಸಿದ ಹಿನ್ನೆಲೆಯಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಮುಂಡರಗಿಯ ರಸ್ತೆಯಲ್ಲಿ ತರಕಾರಿ ಚೆಲ್ಲುವ ಮೂಲಕ ಕೆಲ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ರೈತ ಮುಖಂಡ ಶಿವಾನಂದ ಇಟಗಿ ಮಾತನಾಡಿ, ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲ. ಆದರೆ ಅದೇ ಮಾರುಕಟ್ಟೆಯಲ್ಲಿ ಸಾರ್ವಜನಿಕರು ತರಕಾರಿ ಕೊಳ್ಳಲು ಹೋದರೆ ಸಾಕಷ್ಟು ದುಬಾರಿಗೆ ಮಾರಾಟ ಮಾಡುತ್ತಾರೆ. ಇದರಿಂದ ರೈತರಿಗೆ ದೊಡ್ಡಮಟ್ಟದಲ್ಲಿ ಅನ್ಯಾಯವಾಗುತ್ತದೆ. ಸರ್ಕಾರ ಉಳ್ಳಾಗಡ್ಡಿ ಮತ್ತು ತರಕಾರಿಗೆ ಬೆಲೆ ನಿಗದಿಪಡಿಸಬೇಕು. ತರಕಾರಿ ಸ್ಟೋರೇಜ್ ಮಾಡಲು ಕೋಲ್ಡ್ ಸ್ಟೋರೇಜ್ ಘಟಕ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಶರಣಪ್ಪ ಕಂಬಳಿ ಮಾತನಾಡಿ, ಮುಂಡರಗಿ ಎಪಿಎಂಸಿಗೆ ಬರುವ ರೈತರಿಗೆ ಉಳಿದುಕೊಳ್ಳಲು ವ್ಯವಸ್ಥೆ ಇಲ್ಲ, ಹೀಗಾಗಿ ಇಲ್ಲಿ ರೈತ ಭವನ ಹಾಗೂ ವಸತಿ ಗೃಹ ನಿರ್ಮಾಣ ಮಾಡಬೇಕು, ಸರ್ಕಾರ ತಕ್ಷಣವೇ ಎಲ್ಲ ರೈತರಿಗೆ ಬರ ಪರಿಹಾರ ನೀಡಬೇಕು, ರೈತರ ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು, ಅನ್ನದಾತರ ಎಲ್ಲ ಬೆಳೆಗಳಿಗೂ ಬೆಳೆ ವಿಮೆ ನೀಡಬೇಕು. ತಾಲೂಕಿನಲ್ಲಿ ತಕ್ಷಣವೇ ಗೋಶಾಲೆ ತೆರೆಯಬೇಕು ಎಂದು ಒತ್ತಾಯಿಸಿದರು. ನಂತರ ಪ್ರತಿಭಟನಾ ಸ್ಥಳಕ್ಕೆ ಗ್ರೇಡ್ 2 ತಹಸೀಲ್ದಾರ್ ಕೆ.ರಾಧಾ ಅವರು ಆಗಮಿಸಿ ರೈತರಿಂದ ಮನವಿ ಸ್ವೀಕರಿಸಿದರು. ನಂತರ ರೈತರು ಪ್ರತಿಭಟನೆ ಹಿಂಪಡೆದರು. ಈ ಸಂದರ್ಭದಲ್ಲಿ ಎಸ್.ಡಿ. ಕಂಬಳಿ, ರಾಘವೇಂದ್ರ ಕುರಿ, ಚಂದ್ರಪ್ಪ ಬಳ್ಳಾರಿ, ಎಚ್.ಬಿ. ಕುರಿ, ಅಶ್ವಿನಿ ಬೀಡನಾಳ, ನಿಂಗಪ್ಪ ಭಂಡಾರಿ, ಕನಕಪ್ಪ ಕುರಿ, ರಾಮಚಂದ್ರಪ್ಪ ಕಂಬ‍ಳಿ, ಅಂದಪ್ಪ ಕುರಿ, ಚಿನ್ನಪ್ಪ ಹೆಬಸೂರು, ಹುಚ್ಚಪ್ಪ ಹಂದ್ರಾಳ, ದೇವಪ್ಪ ಕೋವಿ, ಯಲ್ಲಪ್ಪ ಸಂಗಟಿ, ರಾಘವೇಂದ್ರ ಅಬ್ಬೀಗೇರಿ, ಲಕ್ಷ್ಮವ್ವ ಹಟ್ಟಿ, ದೇವಕ್ಕ, ಅಶೋಕ ಬನ್ನಿಕೊಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.