ಆರು ಕೆಜಿ ಒಳಗಿನ ಬಾಳೆಗೊನೆಗೆ ಶೇ.60 ರಷ್ಟು ಬೆಲೆ ನಿಗದಿ

| Published : Aug 31 2025, 01:09 AM IST

ಸಾರಾಂಶ

6 ಕೆ.ಜಿ ಒಳಗಿನ ಬಾಳೆಗೊನೆಯನ್ನು 2ನೇ ದರ್ಜೆಗೆ ಸೇರಿಸಿ ಶೇ. 60 ರಷ್ಟು ಬೆಲೆ ನಿಗದಿ ಮಾಡುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧ್ಯಕ್ಷತೆಯಲ್ಲಿ ನಡೆದ ರೈತರು ಮತ್ತು ವರ್ತಕರ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

6 ಕೆ.ಜಿ ಒಳಗಿನ ಬಾಳೆಗೊನೆಯನ್ನು 2ನೇ ದರ್ಜೆಗೆ ಸೇರಿಸಿ ಶೇ. 60 ರಷ್ಟು ಬೆಲೆ ನಿಗದಿ ಮಾಡುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧ್ಯಕ್ಷತೆಯಲ್ಲಿ ನಡೆದ ರೈತರು ಮತ್ತು ವರ್ತಕರ ಸಭೆಯಲ್ಲಿ ತೀರ್ಮಾನಿಸಲಾಯಿತು.

ನಗರದ ಜಿಲ್ಲಾಡಳಿತ ಭವನದ ಹಳೆಯ ಕೆಡಿಪಿ ಸಭಾಂಗಣದಲ್ಲಿ 2ನೇ ಹಂತದ ಬಾಳೆಕಾಯಿ ವರ್ತಕರು ಮತ್ತು ರೈತರ ಸಭೆ ಕರೆದು, ಸಾಧಕ ಬಾಧಕ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಜಿಲ್ಲೆಯಲ್ಲಿ ಬಾಳೆಕಾಯಿ ಬೆಲೆಯಲ್ಲಿ ವ್ಯತ್ಯಾಸವಿದ್ದು, ಸಭೆಯಲ್ಲಿ ರೈತರು ಮತ್ತು ವರ್ತಕರ ನಡುವೆ ಒಂದು ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಗಿದೆ. ನಮ್ಮ ಜಿಲ್ಲೆಯಲ್ಲಿ ನೇಂದ್ರ, ಇತರ ಬಾಳೆಬೆಳೆ ಬೆಳೆಯಲಾಗುತ್ತಿದ್ದು ಅಕ್ಕಪಕ್ಕದ ರಾಜ್ಯಗಳಿಗೆ ಬಾಳೆಕಾಯಿ ಮಾರಾಟ ಮಾಡಲಾಗುತ್ತಿದೆ.ಬಾಳೆ ಕಾಯಿ ಖರೀದಿಯಲ್ಲಿ ಬೆಲೆ ವ್ಯತ್ಯಾಸವಿದ್ದು, 2ನೇ ದರ್ಜೆಯ ಬಾಳೆಕಾಯಿಯನ್ನು ಸ್ವಲ್ಪ ಕಡಿಮೆ ಬೆಳೆ ತೆಗೆದುಕೊಳ್ಳುವುದು ಇತ್ತು. ಇದನ್ನು ಸರಿಪಡಿಸುವಂತೆ ರೈತರು ಮನವಿ ಮಾಡಿದರು. ಅದರಂತೆ ಜಿಲ್ಲಾಡಳಿತ ವತಿಯಿಂದ ಒಂದು ಪರಿಹರಿ ಕಂಡಕೊಳ್ಳಲು ಬಾಳೆಕಾಯಿ ವರ್ತಕರು, ರೈತರು ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಬಾಳೆಕಾಯಿ ವರ್ತಕರು, ರೈತರು ಇಬ್ಬರಿಗೂ ನಷ್ಟ ಬೇಡ ಎಂದು ಎರಡುಕಡೆಯವರನ್ನು ಒಪ್ಪಿಸಿ ಒಂದು ತೀರ್ಮಾನಕ್ಕೆ ಬರಲಾಗಿದೆ. ಬಾಳೆಕಾಯಿ ವ್ಯತ್ಯಾಸದ ಸಂಬಂಧವಾಗಿ ಅಕ್ಕಪಕ್ಕ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಕೇರಳ, ತಮಿಳುನಾಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಡನೆ ಇದರ ಬಗ್ಗೆ ಚರ್ಚಿಸಲಾಗುವುದು, ಸರ್ಕಾರ ಗಮನಕ್ಕೂ ತರಲಾಗುವುದು ಎಂದರು.

ರೈತ ಮುಖಂಡ ಮಹೇಶ್‌ಪ್ರಭು ಮಾತನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅದು ಕೃಷಿಯನ್ನು ಮಾರಾಟ ಮಾಡುವ ಮಾರುಕಟ್ಟೆ ಆಗಿದೆ ಎಂದು ಆರೋಪಿಸಿದರು.

5 ಕೆಜಿ ಒಳಗಿನ ಗೊನೆಗಳನ್ನು 2ನೇ ದರ್ಜೆಗೆ ಸೇರಿಸಬೇಕು. ಶೇ. 80 ಬೆಲೆ ಕೊಡಬೇಕು. ಪುಡಿಬಾಳೆಕಾಯಿಗೆ ಬೆಂಬಲ ಬೆಲೆ ನೀಡಬೇಕು ಎಂದು ರೈತರು ಪಟ್ಟು ಹಿಡಿದಾಗ ವರ್ತಕರು ಅದಕ್ಕೆ ಒಪ್ಪದೆ ಸಭೆಯಿಂದ ಹೊರನಡೆಯಲು ಯತ್ನಿಸಿದರು. ಜಿಲ್ಲಾಧಿಕಾರಿ ಅವರನ್ನು ಮನವೋಲಿಸಿ ಪಟ್ಟು ಹಿಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಒಂದು ನಿರ್ಧಾರ ಬರಬೇಕು ಎಂದು ವರ್ತಕರಿಗೆ ತಿಳಿಸಿದರು.

ಗಂಟೆಗಳೇ ಕಳೆದರೂ ಒಂದು ನಿರ್ಧಾರಕ್ಕೆ ಬರಲಿಲ್ಲ. ವರ್ತಕರು 6.50 ಕೆ.ಜಿ ಒಳಗಿನ ಬಾಳೆಗೊನೆಗಳನ್ನು ಸೆಕೆಂಡ್ ಹಾಕಿಕೊಳ್ಳುವುದಾಗಿ ಪಟ್ಟು ಹಿಡಿದಾಗ ಎಪಿಎಂಸಿ ನಿರ್ದೇಶಕ ವೆಂಕಟರಾವ್ 6 ಕೆ.ಜಿ ಒಳಗಿನ ಬೆಳೆಗೊನೆಗಳನ್ನು ಸೆಕೆಂಡ್ ಹಾಕಿಕೊಳ್ಳಬೇಕು. ಶೇ. 60 ರಷ್ಟು ಬೆಲೆ ಕೊಡಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಒಂದು ನಿರ್ಧಾರಕ್ಕೆ ಬರಲಾಯಿತು.

ನಿರ್ದೇಶಕ ಬಸವಣ್ಣ ಮಾತನಾಡಿ, ಎಪಿಎಂಸಿ ಕಾಯ್ದೆಯಲ್ಲಿ ಬಾಳೆಕಾಯಿ ಖರೀದಿಗೆ ಸ್ಪಷ್ಟವಾದ ನಿರ್ದೇಶನ ಇಲ್ಲ ಎಂದು ಹೇಳಿದಾಗ ಅವರಿಂದ ವಿರುದ್ಧ ರೈತರ ಮುಖಂಡರಾದ ಮಹೇಶ್ ಕುಮಾರ್, ಹೊನ್ನೂರು ಬಸವಣ್ಣ, ಚಿನ್ನಸ್ವಾಮಿ, ಆಕ್ರೋಶ ಹೊರಹಾಕಿದರು.

ಬಾಳೆಕಾಯಿ ವರ್ತಕರ ಸಂಘದ ಅಧ್ಯಕ್ಷ ಕುಮಾರ್, ಜಬೀಉಲ್ಲಾ ಇತರರ ವರ್ತಕರು ಕೊನೆಯವರಿಗೆ 6.5 ಕೆ.ಜಿ ಒಳಗಿನ ಬಾಳೆಗೊನೆಗಳನ್ನು ಸೆಕೆಂಡ್‌ ಹಾಕಿಕೊಳ್ಳುತ್ತೇನೆ. 6 ಒಳಗಿನ ಬಾಳೆಗೊನೆ 2ನೇ ದರ್ಜೆಗೆ ಹಾಕಿಕೊಂಡರೆ ನಮಗೆ ನಷ್ಟ ಆಗುತ್ತದೆ ಎಂದರು.

ರೈತ ಮುಖಂಡ ಮಹೇಶ್ ಕುಮಾರ್ ಮಾತನಾಡಿ, ರಾಜ್ಯಮಟ್ಟದ ಸಭೆ ಕರೆದು ರಾಜ್ಯ ಮಟ್ಟದ ಪಾಲಿಸಿಯಾಗಬೇಕು. ಎಪಿಎಂಸಿ ಮಾರುಕಟ್ಟೆ ಬಾಳೆಕಾಯಿ ದರ ನಾಮಫಲಕ ಹಾಕಬೇಕು. ರೈತರ ಮೊಬೈಲ್‌ಗೆ ಮಾಹಿತಿ ಕಳುಹಿಸಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ, ಎಪಿಎಂಸಿ ಅಧ್ಯಕ್ಷ ಸೋಮೇಶ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಿವಪ್ರಸಾದ್, ರೈತರ ಮುಖಂಡರಾದ ಮಹೇಶ್ ಕುಮಾರ್, ಬಸವಣ್ಣ, ಮೂಕಳ್ಳಿ ಮಹದೇವಸ್ವಾಮಿ ಭಾಗವಹಿಸಿದ್ದರು.