ಸಾರಾಂಶ
ಕನ್ನಡಪ್ರಭ ವಾರ್ತೆ ಸಂಡೂರುರಾಜ್ಯ ಕಾಂಗ್ರೆಸ್ ಸರ್ಕಾರ ೪೮ ವಸ್ತುಗಳ ಬೆಲೆ ಹೆಚ್ಚಿಸಿದೆ. ಒಂದುವರೆ ವರ್ಷದಲ್ಲಿ ೩ ಬಾರಿ ಡೀಸೆಲ್, ಪೆಟ್ರೋಲ್ ಬೆಲೆಯನ್ನು ಹೆಚ್ಚಿಸಲಾಗಿದೆ. ಬೆಲೆ ಏರಿಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ೬ನೇ ಗ್ಯಾರಂಟಿಯಾಗಿದೆ ಎಂದು ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಟೀಕಿಸಿದರು.ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಏ.೨೪ ರಂದು ಬಳ್ಳಾರಿಯಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ಜನಾಕ್ರೋಶ ಸಭೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ಗ್ಯಾಸ್ ದರ ಏರಿಸಿರುವುದನ್ನು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಟೀಕಿಸಿರುವುದನ್ನು ಗಮನಿಸಿದ್ದೇನೆ. ಕೇಂದ್ರ ಸರ್ಕಾರ ಈ ಮುಂಚೆ ಎರಡು ಬಾರಿ ಸೇರಿ ಒಟ್ಟು ₹೨೦೦ ಗ್ಯಾಸ್ ದರ ಇಳಿಕೆ ಮಾಡಿತ್ತು. ಈಗ ಅನಿವಾರ್ಯವಾಗಿ ₹೫೦ ಹೆಚ್ಚಿಸಿದೆ. ಗ್ಯಾಸ್ ದರದಲ್ಲಿ ಮೂಲ ದರ, ಕೇಂದ್ರದ ಟ್ಯಾಕ್ಸ್ ಹಾಗೂ ಸಾಗಾಣಿಕೆ ದರ ಸೇರಿ ಸುಮಾರು ೫೩೦ ಆಗುತ್ತದೆ. ಉಳಿದ ₹೩೦೦ ರಾಜ್ಯ ಸರ್ಕಾರದ ಟ್ಯಾಕ್ಸ್. ರಾಜ್ಯದ ಉಪ ಮುಖ್ಯಮಂತ್ರಿಗಳಿಗೆ ಜನಪರ ಕಾಳಜಿ ಇದ್ದರೆ, ತಮ್ಮ ಪಾಲಿನ ಟ್ಯಾಕ್ಸ್‌ನಲ್ಲಿ ₹೫೦ ಕಡಿಮೆ ಮಾಡಲಿ ಎಂದರು.ಡಾ. ಬಿ.ಆರ್. ಅಂಬೇಡ್ಕರ್ ವಿವಿಧ ದೇಶಗಳ ಸಂವಿಧಾನಗಳ ಅಧ್ಯಯನ ಮಾಡಿ, ಭಾರತದ ಸನ್ನಿವೇಶಗಳಿಗೆ ಹೊಂದಿಕೆಯಾಗುವ ಅಂಶಗಳನ್ನು ಒಳಗೊಂಡಂತೆ ಉತ್ತಮ ಸಂವಿಧಾನ ರಚಿಸಿ, ಎಲ್ಲಾ ವರ್ಗದ ಜನತೆಗೆ ಸಾಮಾಜಿಕ ನ್ಯಾಯ ಕಲ್ಪಿಸಿದವರು. ಅವರು ಕರ್ನಾಟಕದ ಬೆಳಗಾವಿಗೆ ಬಂದು ನೂರು ವರ್ಷವಾಗುತ್ತಿದೆ. ಅವರ ಬೆಳಗಾವಿ ಭೇಟಿಯ ಶತಮಾನೋತ್ಸವವನ್ನು ಬಿಜೆಪಿ ಆಚರಿಸಲಿದೆ ಎಂದರು.ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ದಿವಾಕರ, ಬಿಜೆಪಿ ಸಂಡೂರು ಮಂಡಲ ಅಧ್ಯಕ್ಷ ನಾನಾ ಸಾಹೇಬ್ ನಿಕ್ಕಂ ಮಾತನಾಡಿದರು. ಬಿಜೆಪಿ ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ರಾಮಕೃಷ್ಣ, ಎಸ್ಟಿ ಮೋರ್ಚಾ ತಾಲೂಕು ಘಟಕದ ಅಧ್ಯಕ್ಷ ಪರಶುರಾಮ್, ವಾಡಾ ಮಾಜಿ ಅಧ್ಯಕ್ಷ ಕೆ. ಯರಿಸ್ವಾಮಿ, ಮುಖಂಡರಾದ ಚಂದ್ರು, ಡಿ. ಪ್ರಹ್ಲಾದ್, ಆರ್.ಟಿ. ರಘುನಾಥ್, ಪ್ರವೀಣ್, ವಿ.ಎಸ್. ಶಂಕರ್, ರಾಮಾಂಜಿನಿ, ಕುಮಾರಸ್ವಾಮಿ, ಕೆ. ಹರೀಶ್, ಪ್ರಭುಗೌಡ, ದರೋಜಿ ರಮೇಶ್, ವಾಮದೇವ, ಕಿನ್ನೂರೇಶ್ವರ, ನರೇಂದ್ರಪಾಟೀಲ್, ಮಂಜುಳಾ ಮುಂತಾದವರಿದ್ದರು.