ಸಾರಾಂಶ
ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಈ ಹಿಂದೆ ಬಿಜೆಪಿ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಮಾಡಿತ್ತು, ಇಂದು ಕಾಂಗ್ರೆಸ್ ಸರ್ಕಾರ ತನ್ನ ಬಿಟ್ಟಿಭಾಗ್ಯಗಳಿಗೆ ಹಣ ಹೊಂದಿಸಲು ಪೆಟ್ರೋಲ್ ಮತ್ತು ಡೀಸೆಲ್ , ಹಾಲು ಸೇರಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿಸಿದೆ. ಇದರಿಂದ ಜನಸಾಮಾನ್ಯರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಪೆಟ್ರೋಲ್, ಡೀಸೆಲ್ ಮತ್ತು ಹಾಲಿನ ಬೆಲೆ ಏರಿಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿ, , ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 100 ಕೋಟಿ ರು.ಗಳ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಪಿಐ(ಎಂ) ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಸುಂದರಯ್ಯ ಭವನದ ಮುಂಭಾಗದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಯಲ್ಲಿ ಬಂದ ಪ್ರತಿಭಟನಕಾರರು,ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ಮುಖಂಡರು, ರಾಜ್ಯ ಸರ್ಕಾರದ ಆದಾಯವನ್ನು ಹೆಚ್ಚಿಸಿಕೊಳ್ಳಲು ಡೀಸೆಲ್ ಮತ್ತು ಪೆಟ್ರೋಲ್ ಹಾಲು ಇತ್ಯಾದಿಗಳ ಮೇಲೆ ಬೆಲೆ ಏರಿಕೆ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯ ಮೇಲೆ ಕರಭಾರ ಹೇರಿದೆ ಎಂದು ಆರೋಪಿಸಿದರು.ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಈ ಹಿಂದೆ ಬಿಜೆಪಿ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಮಾಡಿತ್ತು, ಇಂದು ಕಾಂಗ್ರೆಸ್ ಸರ್ಕಾರ ತನ್ನ ಬಿಟ್ಟಿಭಾಗ್ಯಗಳಿಗೆ ಹಣ ಹೊಂದಿಸಲು ಪೆಟ್ರೋಲ್ ಮತ್ತು ಡೀಸೆಲ್ , ಹಾಲು ಸೇರಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿಸಿದೆ. ಇದರಿಂದ ಜನಸಾಮಾನ್ಯರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕೂಟದ ವ್ಯವಸ್ಥೆಯಡಿ ಸರ್ಕಾರದಿಂದ ಪಡೆಯಬೇಕಾದ ನ್ಯಾಯಯುತ ತೆರಿಗೆ ಪಾಲು ಮತ್ತು ತೆರಿಗೆ ಬಾಕಿ, ಬರಪರಿಹಾರ ಬಾಕಿ ಪಡೆಯಲು ಮುಂದಾಗಬೇಕು, ಬಂಡವಾಳದಾರರಿಗೆ ನೀಡುವ ಸಹಾಯಧನ ಕಡಿತಗೊಳಿಸಬೇಕು, ಪೂರ್ವ ಪ್ರಾಥಮಿಕ ಶಾಲೆಗಳನ್ನು ಅಂಗನವಾಡಿ ಕೇಂದ್ರಗಳ ಮೂಲಕವೇ ನಡೆಸಬೇಕು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 100 ಕೋಟಿ ರು.ಗಳ ಹಗರಣವನ್ನು ನ್ಯಾಯಾಂಗ ತನಿಖೆಗೆ ಕೊಡಬೇಕು, ಪೆಟ್ರೋಲ್, ಡೀಸೆಲ್ ಮತ್ತು ಹಾಲಿನ ಬೆಲೆ ಏರಿಕೆ ತಕ್ಷಣ ವಾಪಸ್ ಪಡೆಯುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.ನಂತರ ಪ್ರತಿಭಟನಾಕಾರರು ತಹಸೀಲ್ದಾರ್ ಪ್ರಶಾಂತ್ ಕೆ. ಪಾಟಿಲ್ ರಿಗೆ ಮನವಿ ಪತ್ರ ಸಲ್ಲಿಸಿದರು. ಸಿಪಿಐ(ಎಂ) ಪಕ್ಷದ ಮುಖಂಡರಾದ ಚೆನ್ನರಾಯಪ್ಪ, ಮುನಿವೆಂಕಟಪ್ಪ, ಓಬಳರಾಜು, ಶ್ರೀರಾಮಪ್ಪ, ಆಶ್ವತ್ಥಪ್ಪ, ಮುಸ್ತಾಫ್, ಮುನಿಯಪ್ಪ, ನರಸಿಂಹರೆಡ್ಡಿ ಮತ್ತಿತರರು ಇದ್ದರು.