ಬಿಜೆಪಿ ಬೆಂಬಲಿಸಿದ್ದಕ್ಕೆ ಕಾಂಗ್ರೆಸ್‌ನಿಂದ ಬೆಲೆ ಏರಿಕೆ ಅಸ್ತ್ರ ಪ್ರಯೋಗ: ಸಂಸದ ಶೆಟ್ಟರ ಆರೋಪ

| Published : Jun 17 2024, 01:31 AM IST

ಬಿಜೆಪಿ ಬೆಂಬಲಿಸಿದ್ದಕ್ಕೆ ಕಾಂಗ್ರೆಸ್‌ನಿಂದ ಬೆಲೆ ಏರಿಕೆ ಅಸ್ತ್ರ ಪ್ರಯೋಗ: ಸಂಸದ ಶೆಟ್ಟರ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಅಭಿವೃದ್ಧಿ ಶೂನ್ಯವಾಗಿದೆ ಎಂದು ಸಂಸದ ಶೆಟ್ಟರ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿರಹಟ್ಟಿ

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಅಭಿವೃದ್ಧಿ ಶೂನ್ಯವಾಗಿದೆ. ಅಧಿಕಾರದ ಆಸೆಗಾಗಿ ತಂದಿರುವ ಪಂಚ ಗ್ಯಾರೆಂಟಿ ಯೋಜನೆಗಳು ಅಭಿವೃದ್ದಿಯನ್ನು ನುಂಗಿ ಹಾಕಿದ್ದು, ಈಗ ಕಾಂಗ್ರೆಸ್ ಶಾಸಕರೇ ಗ್ಯಾರಂಟಿ ನಿಲ್ಲಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಬೆಳಗಾವಿಯ ಸಂಸದ ಜಗದೀಶ ಶೆಟ್ಟರ ಹೇಳಿದರು.

ಭಾನುವಾರ ಕೋಮು ಸೌಹಾರ್ದತೆಯ ಶಿರಹಟ್ಟಿಯ ಶ್ರೀ ಜ. ಫಕೀರೇಶ್ವರ ಸಂಸ್ಥಾನ ಮಠಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ಕತೃ ಗದ್ದುಗೆಯ ದರ್ಶನ ಪಡೆದ ನಂತರ ಶ್ರೀಗಳಿಂದ ಸನ್ಮಾನ ಸ್ವೀಕರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿಗಳಿಗಾಗಿ ಹಣ ಹೊಂದಿಸಲು ಪರದಾಡುತ್ತಿದ್ದು, ರಾಜ್ಯದ ಜನರಿಗೆ ಗ್ಯಾರಂಟಿಗಳನ್ನು ನೀಡಿದ್ದರೂ ಮತದಾರರು ಬಿಜೆಪಿ ಬೆಂಬಲಿಸಿದ್ದರಿಂದ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.

ಜನರ ಮೇಲೆ ಬೆಲೆ ಏರಿಕೆ ಅಸ್ತ್ರವನ್ನು ಬಿಟ್ಟು ಒಂದು ಕಡೆ ಕೊಟ್ಟಹಾಗೆ ಮಾಡಿ ಮತ್ತೊಂದು ಕಡೆಯಿಂದ ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಪಕ್ಷದ ಶಾಸಕರೇ ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕುಂಠಿತಗೊಂಡಿವೆ. ಗ್ಯಾರಂಟಿ ಯೋಜನೆಗಳ ಜಾರಿಯಿಂದ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಡುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ತಾತ್ಕಾಲಿವಾಗಿ ವೋಟಿನ ಆಸೆಗಾಗಿ ಜಾರಿಗೆ ತಂದಿರುವ ಎಲ್ಲ ಯೋಜನೆಗಳನ್ನು ಹಿಂಪಡೆಯುವ ಸಾಧ್ಯತೆ ಇದೆ ಎಂದು ಹೇಳಿದರು.

ಸರ್ಕಾರದ ಖಜಾನೆ ಖಾಲಿಯಾಗಿದೆ

ಅಧಿಕಾರದ ಆಸೆಗಾಗಿ ತಾತ್ಕಾಲಿಕವಾಗಿ ಜಾರಿಗೆ ತಂದಿರುವ ಪಂಚಗ್ಯಾರೆಂಟಿ ಯೋಜನೆಗಳಿಂದಾಗಿ ರಾಜ್ಯದ ಖಜಾನೆ ಸಂಪೂರ್ಣ ಖಾಲಿಯಾಗಿದೆ. ಸರ್ಕಾರಿ ನೌಕರರಿಗೆ ವೇತನ ನೀಡದ ಸ್ಥಿತಿಗೆ ಬಂದಿದೆ ಎಂದು ಆರೋಪಿಸಿದ ಅವರು ಜನರಿಗೆ ತೊಂದರೆಯಾದರೆ ಪಕ್ಷದ ವತಿಯಿಂದ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.

ರಾಜಕೀಯವಾಗಿ ಲೋಕಸಭಾ ಚುನಾವಣೆಯಲ್ಲಿ ಲಾಭವಾಗಿಲ್ಲ. ಎಲ್ಲ ಗ್ಯಾರಂಟಿ ವಾಪಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ. ಜೊತೆಗೆ ನೂರಾರು ಕಂಡೀಷನ್ ಹಾಕಿ ಫಲಾನುಭವಿಗಳ ಸಂಖ್ಯೆ ಕಡಿಮೆ ಮಾಡುವ ಸಾಧ್ಯತೆ ಕೂಡ ಇದೆ. ಈ ಬೆಳವಣಿಗೆ ಸರಿಯಲ್ಲ ಎಂದು ಹೇಳಿದರು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ ಶ್ರೀ ಸಾಮಾನ್ಯನ ಮೇಲೆ ಮತ್ತಷ್ಟು ಹೊರೆ ಬೀಳಲಿದೆ. ತಕ್ಷಣ ಬೆಲೆ ಏರಿಕೆ ಹಿಂಪಡೆಯದಿದ್ದರೆ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು.

ನಿಮಗೆ ಸಚಿವ ಸ್ಥಾನ ಸಿಕ್ಕಿಲ್ಲ ಎನ್ನುವ ಬಗ್ಗೆ ಬೇಸರವಿಲ್ಲವೆ ಎಂದು ಕೇಳಿದ ಪ್ರಶ್ನೆಗೆ ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಹಾಗೂ ಸಂಘ ಪರಿವಾರದಿಂದ ಬೆಳೆದು ಬಂದವನಾಗಿದ್ದು, ನನಗೆ ಸಚಿವ ಸ್ಥಾನ ನೀಡುವುದು ಬಿಡುವುದು ಪ್ರಧಾನಿ ನರೇಂದ್ರ ಮೋದಿ ಅವರ ವಿವೇಚನೆಗೆ ಹಾಗೂ ಪಕ್ಷಕ್ಕೆ ಬಿಟ್ಟ ವಿಷಯ. ಸಚಿವ ಸ್ಥಾನ ಸಿಗಬೇಕು ಎಂಬುದು ಜನತೆಯ ಆಸೆ ಇದೆ. ಪಕ್ಷ ನನಗೆ ಯಾವುದೇ ಜವಾಬ್ದಾರಿ ನೀಡಿದರೂ ನಿಷ್ಠೆಯಿಂದ ಮಾಡುವುದಾಗಿ ತಿಳಿಸಿದರು.

ನನಗೆ ವಿಧಾನಸಭೆಯಲ್ಲಿ ಶಾಸಕನಾಗಿ, ಸಚಿವನಾಗಿ, ವಿರೋಧ ಪಕ್ಷದ ನಾಯಕನಾಗಿ ಮತ್ತು ಮುಖ್ಯಮಂತ್ರಿಯಾಗಿ ಸುಮಾರು ೩೦ ವರ್ಷಗಳ ಕಾಲ ಕೆಲಸ ಮಾಡಿದ ಅನುಭವವಿದೆ. ಈ ಬಾರಿ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಜನತೆ ೧.೮೦ ಲಕ್ಷ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಹೇಳಿದರು.

ಶಾಸಕ ಡಾ. ಚಂದ್ರು ಲಮಾಣಿ, ಮುಖಂಡರಾದ ಚಂದ್ರಕಾಂತ ನೂರಶೆಟ್ಟರ, ಜಾನು ಲಮಾಣಿ, ಫಕ್ಕೀರೇಶ ರಟ್ಟಿಹಳ್ಳಿ, ಅಜ್ಜು ಪಾಟೀಲ, ಅಕ್ಬರಸಾಬ ಯಾದಗೀರಿ, ನಂದಾ ಪ್ರಕಾಶ ಪಲ್ಲೇದ ಸೇರಿ ಅನೇಕರು ಇದ್ದರು.