ಸಾರಾಂಶ
ಕಳೆದ ವರ್ಷ ವ್ಯಾಪಕ ಮಳೆ, ಕೊಳೆ ರೋಗ ಮತ್ತು ಎಲೆಚುಕ್ಕಿ ರೋಗದ ಪರಿಣಾಮ ಅಡಕೆ ಬೆಳೆ ಇಷ್ಟು ವರ್ಷಕ್ಕಿಂತ ಈ ವರ್ಷ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಭಟ್ಕಳ: ತಾಲೂಕಿನಲ್ಲಿ ಅಡಕೆ ಬೆಳೆ ನಿರೀಕ್ಷೆಗಿಂತ ಬಹಳ ಕಡಿಮೆಯಾಗಿದ್ದು, ಮುಂದಿನ ವರ್ಷದಲ್ಲಾದರೂ ಉತ್ತಮ ಬೆಳೆ ಬಂದರೆ ಸಾಕು ಎಂದು ಬೆಳೆಗಾರರು ಹೇಳುತ್ತಿದ್ದಾರೆ.
ಕಳೆದ ವರ್ಷ ವ್ಯಾಪಕ ಮಳೆ, ಕೊಳೆ ರೋಗ ಮತ್ತು ಎಲೆಚುಕ್ಕಿ ರೋಗದ ಪರಿಣಾಮ ಅಡಕೆ ಬೆಳೆ ಇಷ್ಟು ವರ್ಷಕ್ಕಿಂತ ಈ ವರ್ಷ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಅಡಕೆ ಬೆಳೆ ಒಂದನ್ನೇ ನಂಬಿ ಜೀವನ ಸಾಗಿಸುವವರು ತೊಂದರೆಗೆ ಸಿಲುಕಿದ್ದಾರೆ. ಏಳೆಂಟು ಕ್ವಿಂಟಲ್ ಆಗುತ್ತಿದ್ದ ಬೆಳೆ ಈ ಬಾರಿ 2-3 ಕ್ವಿಂಟಲ್‌ಗೆ ಇಳಿಕೆ ಕಂಡಿದೆ. ಬೆಳೆಗಾರರು ಅಡಕೆ ಬೆಳೆ ನಂಬಿ ವಾರ್ಷಿಕವಾಗಿ ವಿವಿಧ ಖರ್ಚು-ವೆಚ್ಚಗಳು, ಸಾಲಗಳನ್ನು ಮಾಡುತ್ತಾರೆ. ಆದರೆ ಈ ಸಲದ ಅಡಕೆ ಇಳುವರಿ ಕಡಿಮೆಯಾಗಿ ಎಲ್ಲವನ್ನೂ ತಲೆಕೆಳಗಾಗಿ ಮಾಡಿದೆ. ಸಾಲದ ಅಸಲಿರಲಿ ಬಡ್ಡಿ ಕೂಡ ಪಾವತಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಅಡಕೆಗೆ ಕೊಳೆ ರೋಗದ ಹೊಡೆತ ಒಂದೆಡೆಯಾದರೆ, ಎಲೆ ಚುಕ್ಕಿ ರೋಗ ಅಡಕೆ ಮರಕ್ಕೆ ಮಾರಕವಾಗಿ ಪರಿಣಮಿಸಿದೆ. ಅಡಕೆಗೆ ಸದ್ಯ ದರವೇನೋ ಬಂದಿದೆ. ದರ ನೋಡಿ ಬೆಳೆಗಾರರೂ ಖಷಿ ಆಗಿದ್ದಾರೆ. ಆದರೆ ಈಗಿದ್ದ ದರಕ್ಕೆ ಸರಿಯಾದ ಇಳುವರಿ ಬಂದಿದ್ದರೆ ಬೆಳೆಗಾರರ ಬದುಕು ಹಸನಾಗುತ್ತಿತ್ತು. ಆದರೆ ಈ ಸಲ ಅಡಿಕೆ ಬೆಳೆಗಾರರ ಪರಿಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ನಿರ್ಮಾಣವಾಗಿದೆ. ಉತ್ತಮ ದರವಿದ್ದರೂ ಬೆಳೆ ಇಲ್ಲ. ಬೆಳೆ ವಿಮೆ ಮಾಡಿಸಿದ್ದರೂ ಇದರ ಸದುಪಯೋಗ ಹೆಚ್ಚಿನ ಬೆಳೆಗಾರರಿಗೆ ಆಗಿಲ್ಲ. ವಿಪರ್ಯಾಸವೆಂದರೆ ಈ ಬೆಳೆ ವಿಮೆ ರೈತರ ಖಾತೆಗೆ ಯಾವಾಗ ಜಮಾ ಆಗುತ್ತದೆ ಎನ್ನುವುದೇ ಗೊತ್ತಾಗುವುದಿಲ್ಲ. ಬೆಳೆ ವಿಮೆ ಬಗ್ಗೆ ಇನ್ನು ತನಕ ರೈತರಿಗೆ ಸರಿಯಾದ ಮಾಹಿತಿಯೂ ಇಲ್ಲವಾಗಿದೆ. ಅಡಕೆ ಇಳುವರಿ ಕಡಿಮೆಯಾಗಿ ಬೆಳೆಗಾರರು ಸಂಕಷ್ಟದಲ್ಲಿರುವುದು ಒಂದೆಡೆಯಾದರೆ, ತೆಂಗಿನ ಕಾಯಿಗೆ ಉತ್ತಮ ದರ ಬಂದಿದ್ದರೂ ಮಂಗ, ಕ್ಯಾಚಾಳ ಮುಂತಾದ ಕಾಡು ಪ್ರಾಣಿಗಳ ಲೂಟಿಯಿಂದ ಬೆಳೆ ರೈತರ ಕೈಗೆ ಸಿಗುತ್ತಿಲ್ಲ. ಅಡಕೆಯಂತೆ ತೆಂಗಿನಕಾಯಿ ಇಳುವರಿಯೂ ಗಣನೀಯ ಪ್ರಮಾಣದಲ್ಲಿ ಕುಸಿದಿರುವುದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮರದಲ್ಲಿನ ಸಿಂಹಾಳ, ಕಾಯಿ ಎಲ್ಲವೂ ಮಂಗ, ಕ್ಯಾಚಾಳನ ಪಾಲಾಗುತ್ತಿದೆ. ಕೊಯ್ಲಿಗೆ 2000 ಕಾಯಿ ಕೊಯ್ಯುತ್ತಿದ್ದವವರಿಗೆ ೩೦೦-೪೦೦ ಕಾಯಿ ಸಿಗುತ್ತಿದೆ. ಗ್ರಾಮೀಣ ಭಾಗದಲ್ಲಿ ತೆಂಗಿನ ತೋಟದಲ್ಲಿ ಎಲ್ಲಿ ನೋಡಿದರೂ ಮಂಗ ತಿಂದು ಎಸೆದ ಸಿಂಹಾಳ ಬೊಂಡ, ಕಾಯಿಯನ್ನೇ ನೋಡಬಹುದು. ಅಡಿಕೆ, ತೆಂಗು ಬೆಳೆಯನ್ನಷ್ಟೇ ನಂಬಿಕೊಂಡ ರೈತರ ಪರಿಸ್ಥಿತಿ ತೀರಾ ಸಂಕಷ್ಟಮಯವಾಗಿದೆ. ಈ ವರ್ಷ ಬೆಳೆಗೆ ದರ ಇದ್ದರೂ ಇಳುವರಿ ಗಣನೀಯ ಪ್ರಮಾಣದಲ್ಲಿ ಕುಸಿದು ರೈತರಿಗೆ ಹಾನಿಯಾಗಿದೆ. ಪ್ರಸ್ತುತ ಬಿಸಿಲ ತಾಪಮಾನ ವ್ಯಾಪಕವಾಗಿರುವುದರಿಂದ ಹೊಳೆ-ಕೊಳ್ಳಗಳು ನೀರಿಲ್ಲದೇ ಒಣಗಿವೆ. ನೀರಿನ ತುಗಾಟಗ್ರತೆಯಿಂದ ತೋಟಕ್ಕೆ ನೀರಿಲ್ಲವಾಗಿದೆ. ನೀರಿಲ್ಲದೇ ಇರುವುದರಿಂದ ರೈತರಿಗೆ ತೋಟ ಉಳಿಸಿಕೊಳ್ಳುವುದೇ ಸವಾಲಾಗಿ ಪರಿಣಮಿಸಿದೆ.