ಸಾರಾಂಶ
ಶುದ್ಧ ಓದು, ಸ್ಪಷ್ಟ ಬರಹ ಹಾಗೂ ಗಣಿತದ ಮೂಲ ಕ್ರಿಯೆಗಳನ್ನು ಆರಂಭದಲ್ಲಿ ಕಲಿಸುವ ಮೂಲಕ ಗುಣಾತ್ಮಕ ಕಲಿಕೆ ಸಾಧ್ಯವಿದೆ. ಇಂತಹ ಕಲಿಕಾ ಹಬ್ಬಗಳಿಂದ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸುತ್ತದೆ.
ಯಲಬುರ್ಗಾ:
ಪಾಲಕರು ತಮ್ಮ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಶಿಕ್ಷಣ ಕೊಡಿಸುವ ಪ್ರಯತ್ನಕ್ಕೆ ಮುಂದಾಗಬೇಕು. ಮನೆಗೆ ಹೇಗೆ ತಳಪಾಯ ಎಷ್ಟು ಮುಖ್ಯವೋ ಅದರಂತೆ ಮಕ್ಕಳ ಕಲಿಕೆಗೆ ಪ್ರಾಥಮಿಕ ಶಿಕ್ಷಣವು ಕೂಡ ಭದ್ರ ಬುನಾದಿ ಇದ್ದಂತೆ ಎಂದು ಗ್ರಾಪಂ ಅಧ್ಯಕ್ಷೆ ಸಿದ್ದಮ್ಮ ಬಳಿಗಾರ ಹೇಳಿದರು.ತಾಲೂಕಿನ ಬೇವೂರ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ತಾಲೂಕು ಬೇವೂರು ವಲಯದ ಕಲಿಕಾ ಹಬ್ಬದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಾಥಮಿಕ ಹಂತದಲ್ಲಿ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನದ ಕಲಿಕಾ ಹಬ್ಬ ಆಯೋಜನೆ ಮಕ್ಕಳ ಕಲಿಕೆಗೆ ಹೆಚ್ಚು ಸಹಕಾರಿಯಾಗಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಮಲ್ಲನಗೌಡ ಕೋನನಗೌಡ್ರು ಮಾತನಾಡಿ, ಶುದ್ಧ ಓದು, ಸ್ಪಷ್ಟ ಬರಹ ಹಾಗೂ ಗಣಿತದ ಮೂಲ ಕ್ರಿಯೆಗಳನ್ನು ಆರಂಭದಲ್ಲಿ ಕಲಿಸುವ ಮೂಲಕ ಗುಣಾತ್ಮಕ ಕಲಿಕೆ ಸಾಧ್ಯವಿದೆ. ಇಂತಹ ಕಲಿಕಾ ಹಬ್ಬಗಳಿಂದ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸುತ್ತದೆ ಎಂದು ಹೇಳಿದರು.ಬೇವುರು ಗ್ರಾಪಂ ಅಧಿಕಾರಿ ಅಬ್ದುಲ್ ಗಫಾರ ಮಾತನಾಡಿ, ಪ್ರತಿ ಮಗು ಶಿಕ್ಷಣ ಪಡೆಯಬೇಕು. ಯಾವ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಸದುದ್ದೇಶದಿಂದ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಅವರ ಉಜ್ವಲ್ ಭವಿಷ್ಯಕ್ಕೆ ದಾರಿದೀಪವಾಗಬೇಕು ಎಂದು ಹೇಳಿದರು.
ಎಸ್‌ಡಿಎಂಸಿ ಸದಸ್ಯ ಸಿದ್ದು ಮಣ್ಣಿನವರ, ಶರಣಪ್ಪ ಹಳ್ಳಿ ಹಾಗೂ ಶಂಕ್ರಮ್ಮ ಗೊಂದಿ ಮಾತನಾಡಿ, ಶಿಕ್ಷಕರು ಮಕ್ಕಳು ಯಾವ ಕಲಿಕಾ ಹಂತದಲ್ಲಿ ಇದ್ದಾರೆ ಎನ್ನುವುದನ್ನು ಗುರುತಿಸಿ ಅವರಿಗೆ ಓದು, ಬರಹ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದರು.ಮುಖ್ಯಶಿಕ್ಷಕ ಲಕ್ಷ್ಮಣ ಡಿ., ಶಿಕ್ಷಕರಾದ ಪರಶುರಾಮ ತಳವಾರ, ರಮೇಶ ಕಾರ್ಬಾರಿ, ಮಹಾಂತೇಶ ಹಿರೇಮಠ, ಶೇಖರಗೌಡ ಪಾಟೀಲ್, ಮೆಹಬೂಬ, ಗಣೇಶ ಪಂಚಾಲ್ ಇದ್ದರು. ಸಮೂಹ ಸಂಪನ್ಮೂಲ ವ್ಯಕ್ತಿ ಶರಣಪ್ಪ ಕುರ್ನಾಳ ನಿರೂಪಿಸಿ, ವಂದಿಸಿದರು.