ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯದ ಶೈಕ್ಷಣಿಕ ಬದುಕಿಗೆ ಭದ್ರ ಬುನಾದಿ ಹಾಕಿಕೊಡುತ್ತದೆ ಎಂದು ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ಧೈವಾಡಿ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ವಿಜಯಪುರ
ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯದ ಶೈಕ್ಷಣಿಕ ಬದುಕಿಗೆ ಭದ್ರ ಬುನಾದಿ ಹಾಕಿಕೊಡುತ್ತದೆ ಎಂದು ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ಧೈವಾಡಿ ಅಭಿಪ್ರಾಯಪಟ್ಟರು.ನಗರದ ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ಜರುಗಿದ ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 2025-26ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ ಎನ್ನುವುದು ಓದು ಬರಹ ಲೆಕ್ಕಾಚಾರಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿ ರ‍್ಯಾಂಕ್ ಬರಿಸುವುದರ ಜೊತೆಗೆ ಭವ್ಯ ಭಾರತದ ಜವಾಬ್ದಾರಿಯುತ ಮಾನವೀಯ ಮೌಲ್ಯಗಳನ್ನು ಮೇಳವಿಸಿಕೊಂಡ ನಾಯಕರನ್ನು ನಿರ್ಮಿಸುವುದಾಗಿದೆ. ಆದ್ದರಿಂದ ಶಿಕ್ಷಣ ತಜ್ಞರು ಭಾರತದ ಭವಿಷ್ಯ ಶಾಲಾ ಕಾಲೇಜುಗಳ ವರ್ಗಕೋಣೆಗಳಲ್ಲಿ ನಿರ್ಮಾಣವಾಗುತ್ತಿದೆ ಎಂದು ಹೇಳಿದ್ದಾರೆ ಎಂದರು.
ಸಂಸ್ಥೆ ಮುಖ್ಯಸ್ಥೆ ಅನಾಲೀಸಾ ಬಾಸ್ಕೋ 2025-26ನೇ ಸಾಲಿನಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕ್ರೀಡೆ ಸಾಹಿತ್ಯ ಸಂಗೀತ, ಯೋಗ ಇತ್ಯಾದಿ ಸ್ಪರ್ಧೆಗಳಲ್ಲಿ ವಿಜೇತರಾದ 128 ವಿದ್ಯಾರ್ಥಿಗಳಿಗೆ ಪಾರಿತೋಷಕ ಹಾಗೂ ಪದಕವನ್ನು ವಿತರಿಸಿ ಮಾತನಾಡಿ, ನಮ್ಮ ಶಾಲೆಯಲ್ಲಿ ಇಲ್ಲಿಯ ವರೆಗೆ ಸುಮಾರು 5 ಸಾವಿರದಷ್ಟು ವಿದ್ಯಾರ್ಥಿಗಳು ಎಸ್ಎಸ್ಎಲ್‌ಸಿ ವ್ಯಾಸಂಗವನ್ನು ಪೂರ್ಣಗೊಳಿಸಿ ಮುಂದೆ ಉನ್ನತ ಶಿಕ್ಷಣ ಪೂರೈಸಿ ಸಮಾಜದಲ್ಲಿ ಅನೇಕ ಪ್ರತಿಷ್ಠಿತ ಹಾಗೂ ಸೇವಾ ಮನೋವೃತ್ತಿಯ ಉದ್ಯೋಗಗಳಾದ ವೈದ್ಯ, ಇಂಜಿನಿಯರ್, ಪೊಲೀಸ್, ರಾಜಕೀಯ, ಉದ್ಯಮ, ಉದ್ಯೋಗ, ಕ್ರೀಡೆ ಇತ್ಯಾದಿ ತಮಗಿಷ್ಟವಾದ ಕ್ಷೇತ್ರಗಳನ್ನು ಆಯ್ದುಕೊಂಡು ಗುರಿ ಮುಟ್ಟಿ ಸಾರ್ಥಕ ಬದುಕನ್ನು ಮುನ್ನಡೆಸುತ್ತಿರುವುದು ಶಿಕ್ಷಣ ಸಂಸ್ಥೆಯ ಗುಣಮಟ್ಟದ ಶಿಕ್ಷಣಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.ಸಂಸ್ಥೆ ಅಧ್ಯಕ್ಷ ಶಾಜು ಜೋಸೆಫ್ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಣವು ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಣದ ಹಂತವಾಗಿದೆ. ಈ ಹಂತದ ಮಕ್ಕಳಿಗೆ ಶಿಕ್ಷಕರು ಪಾಲಕರು ಆದರ್ಶ ಮಾದರಿಗಳಾಗಿರಬೇಕು. ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವ ಹಾಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಜವಾಬ್ದಾರಿ ಹೊಣೆಗಾರಿಕೆಯನ್ನು ಮಕ್ಕಳಿಗೆ ನಿರಂತರವಾಗಿ ನಮ್ಮ ಶಿಕ್ಷಣ ಸಂಸ್ಥೆಯು ಕಲಿಕೊಂಡು ಬರುತ್ತಿದೆ. ಆದ್ದರಿಂದ ನಗರದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ನಮ್ಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದರು.
ಅಧ್ಯಕ್ಷತೆ ಮಹಿಸಿದ್ದ ರೆವರೆಂಡ್ ಫಾದರ್ ಜೋಸೆಫ್ ವಾಝ್ ಮಾತನಾಡಿ, ದೇಶದ ಪ್ರಗತಿಗೆ ಶಿಕ್ಷಣ ಸಾಧನವಾಗಿದೆ ಇಂತಹ ಗುಣಮಟ್ಟದ ಶಿಕ್ಷಣವನ್ನು ಕಳೆದ 3 ದಶಕಗಳಿಂದ ವಿಜಯಪುರದ ವಿದ್ಯಾರ್ಥಿಗಳಿಗೆ ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆಯು ನೀಡುತ್ತಿರುವುದು ಶ್ಲಾಘನೀಯವಾದದ್ದು ಎಂದರು.ಭಾರತಿ ಕರಡಿ, ಪ್ರದೀಪ ಪಾಟೀಲ ಜಯತೀರ್ಥ ಪಂಢರಿ, ರಾಜೇಶ ನುಚ್ಚಿ, ಪುರುಷೋತ್ತಮ.ಪಿ, ಆನಂದ ಬಿರಾದಾರ ಇದ್ದರು.
