ಪ್ರಾಥಮಿಕ ಶಾಲಾ ಮಕ್ಕಳಿಗೆ ಕ್ರೀಡಾಕೂಟದಲ್ಲಿ ಅನ್ಯಾಯವಾಗದಿರಲಿ

| Published : Aug 04 2025, 12:30 AM IST

ಸಾರಾಂಶ

ಪ್ರಾಥಮಿಕ ಶಾಲೆಯ ಮಕ್ಕಳಿಗೆ ನ್ಯಾಯ ದೊರಕಿಸಿಕೊಡಬೇಕು

ಭಟ್ಕಳ: ಪ್ರಾಥಮಿಕ ಶಾಲೆ ಕ್ರೀಡಾಕೂಟದಲ್ಲಿ ಪ್ರೌಢ ಶಾಲೆಯಲ್ಲಿ ಓದುತ್ತಿರುವ ೧೪ ವರ್ಷದ ಮಕ್ಕಳು ಭಾಗವಹಿಸಲು ಅವಕಾಶ ಕಲ್ಪಿಸಿರುವುದರಿಂದ ಪ್ರಾಥಮಿಕ ಶಾಲಾ ಮಕ್ಕಳಿಗೆ ತೊಂದರೆಯಾಗಲಿದೆ. ಪ್ರಾಥಮಿಕ ಶಾಲೆಯ ಮಕ್ಕಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಸರ್ಕಾರಿ ನೌಕರರ ಸಂಘದ ಶಾಖೆಯಿಂದ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಬಿಇಒ ಮೂಲಕ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ ೨೦೨೫ನೇ ಸಾಲಿನ ಪ್ರಾಥಮಿಕ ಶಾಲೆಯ ಕ್ರೀಡಾಕೂಟದಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿರುವ ೧೪ ವರ್ಷದ ವಯೋಮಾನದ ಮಕ್ಕಳಿಗೆ ಪಾಲ್ಗೊಳ್ಳಲು ಅವವಕಾಶ ಕಲ್ಪಿಸಿರುವುದು ಇವರೊಂದಿಗೆ ಪ್ರಾಥಮಿಕ ಶಾಲೆಯ ಮಕ್ಕಳು ಸ್ಪರ್ಧೆ ನೀಡಲಾಗದೇ ನಿರಾಸೆ ಅನುಭವಿಸುವ ಸಾಧ್ಯತೆ ಇದೆ. ಇದರಿಂದ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಅನ್ಯಾಯವಾಗಲಿದೆ. ಪ್ರೌಢಶಾಲೆಯ ಮಕ್ಕಳು ಪ್ರಾಥಮಿಕ ಶಾಲೆಯ ಮಕ್ಕಳಿಗಿಂತ ಸದೃಢವಾಗಿರುವುದರಿಂದ ಕ್ರೀಡೆಯ ಸಂದರ್ಭದಲ್ಲಿ ಇವರೊಂದಿಗೆ ಕ್ರೀಡೆ ಆಡುವ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪೆಟ್ಟಾಗುವ ಸಾಧ್ಯತೆ ಇದೆ. ಈ ಬಗ್ಗೆ ಪಾಲಕರಿಂದ ತೀವ್ರ ಆಕ್ಷೇಪ ಮತ್ತು ತಕರಾರು ಬಂದಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕ್ರೀಡಾಕೂಟ ಆಯೋಜಿಸುವುದು ಪ್ರಾಥಮಿಕ ಶಾಲೆಯವರು, ಬಹುಮಾನ ಪಡೆದುಕೊಂಡು ಹೋಗುವವರು ಪ್ರೌಢಶಾಲೆಯ ಮಕ್ಕಳು ಎನ್ನುವಂತಾಗಲಿದೆ. ಪ್ರಾಥಮಿಕ ಶಾಲೆಯ ಮಕ್ಕಳಿಗೆ ಅನ್ಯಾಯವಾಗದಂತೆ ಕ್ರೀಡಾಕೂಟದ ನಿಯಮ ರೂಪಿಸಬೇಕು ಎಂದು ಆಗ್ರಹಿಸಲಾಗಿದೆ.

ಮನವಿಯನ್ನು ಬಿಇಒ ವೆಂಕಟೇಶ ನಾಯಕ ಸ್ವೀಕರಿಸಿದರು. ಈ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮ ನಾಯ್ಕ, ನೌಕರರ ಸಂಘದ ಕಾರ್ಯದರ್ಶಿ ವೆಂಕಟೇಶ ನಾಯ್ಕ, ಶಿಕ್ಷಕರ ಸಂಘದ ಉಪಾಧ್ಯಕ್ಷ ಪಿ.ಎ. ಗೋಮ್ಸ, ಕಾರ್ಯದರ್ಶಿ ರಫೀಕ್, ಖಜಾಂಚಿ ಪ್ರಶಾಂತ ಕಾಯ್ಕಿಣಿ, ದೈಹಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಸಂತೋಷ ನಾಯ್ಕ, ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷೆ ತಾರಾ ನಾಯ್ಕ, ಹಿರಿಯ ಶಿಕ್ಷಕವಾಸು ನಾಯ್ಕ ಇದ್ದರು.