ಸಾರಾಂಶ
ಪ್ರಾಥಮಿಕ ಶಾಲಾ ಶಿಕ್ಷಕರಿಗಾದ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಪ್ರತಿಭಟನೆ ನಡೆಸಿ ತಾಲೂಕಿನ ತಹಸೀಲ್ದಾರರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಕೊಪ್ಪಳ
ಪ್ರಾಥಮಿಕ ಶಾಲಾ ಶಿಕ್ಷಕರಿಗಾದ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಪ್ರತಿಭಟನೆ ನಡೆಸಿ ತಾಲೂಕಿನ ತಹಸೀಲ್ದಾರರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಮನವಿ ಸ್ವೀಕರಿಸಿದ ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಯ್ಯ ಟಿ.ಎಸ್. ಮಾತನಾಡಿದರು.
ಈ ಸಮಯದಲ್ಲಿ ವಿಕಲಚೇತನ ನೌಕರರ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಚಿಲವಾಡಗಿ, ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಶಿವಪ್ಪ ಜೋಗಿ, ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ ತಗಡಿನಮನಿ, ಅಕ್ಷರ ದಾಸೋಹದ ತಾಲೂಕ ಅಧಿಕಾರಿ ಹನುಮಂತಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸವನಗೌಡ, ಕಾರ್ಯದರ್ಶಿ ಮಂಜುನಾಥ ಬಿ., ಕೊಪ್ಪಳ ತಾಲೂಕ ಅಧ್ಯಕ್ಷ ಹೊಳಿಬಸಯ್ಯಾ, ಕಾರ್ಯದರ್ಶಿ ಬಾಳಪ್ಪ ಕಾಳೆ, ನಿಕಟಪೂರ್ವ ಅಧ್ಯಕ್ಷ ಪ್ರಾಣೇಶ ಪೂಜಾರ, ಪತ್ತಿನ ಸಂಘದ ಅಧ್ಯಕ್ಷ ವೀರೇಶ ಅರಳಿಕಟ್ಟಿ, ಕಾಶಿನಾಥ ಸಿರಿಗೇರಿ ಮುಂತಾದವರಿದ್ದರು.ಅನ್ಯಾಯ ಸರಿಪಡಿಸಲು ಆಗ್ರಹಿಸಿ ಇಂದು ಶಿಕ್ಷಕರ ಪ್ರತಿಭಟನೆ:
ಕಳೆದ 30 ವರ್ಷಗಳಿಂದ ಸೇವೆ ಮಾಡುತ್ತಿದ್ದು, ಅರ್ಹತೆಯಿದ್ದರೂ ಸಹ ಬಡ್ತಿ ನೀಡದೇ ಈಗ ಏಕಾಏಕಿ ಹಿಂಬಡ್ತಿ ನೀಡಿದಂತೆ ನಮ್ಮನ್ನು ಪ್ರಾಥಮಿಕ ಶಾಲೆಗೆ ದೂಡುತ್ತಿರುವ ಸರ್ಕಾರದ ನಿರ್ಧಾರದ ವಿರುದ್ಧ ಈಗಾಗಲೇ ತಾಲೂಕು ಮಟ್ಟದ ಪ್ರತಿಭಟನೆ ನಡೆಸಲಾಗಿದ್ದು, ಆ. 7 ರಂದು ಜಿಲ್ಲಾ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ್ ಹೇಳಿದರು.ಕೊಪ್ಪಳ ನಗರದ ಮೀಡಿಯಾ ಕ್ಲಬ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಂತ ಹಂತವಾಗಿ ಹೋರಾಟ ಮಾಡಿ, ಸರ್ಕಾರ ಸ್ಪಂದನೆ ಮಾಡದಿದ್ದರೇ ಆ. 12ರಂದು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ಹೇಳಿದರು.
ನಾವು ಕಳೆದ 30 ವರ್ಷಗಳಿಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೂ ಪಾಠ ಮಾಡುತ್ತಿದ್ದೇವೆ. ಆದರೆ, ಈಗ ಸರ್ಕಾರ ನಿಯಮಾವಳಿಯನ್ನು ತಿದ್ದುಪಡಿ ಮಾಡಿ, ನಮ್ಮನ್ನೆಲ್ಲ ಕೇವಲ ಒಂದನೇ ತರಗತಿಯಿಂದ ಐದನೇ ತರಗತಿವರೆಗೂ ಮಾತ್ರ ಪ್ರಾಥಮಿಕ ಶಾಲೆಗೆ ಸೀಮಿತಿಗೊಳಿಸಲಾಗಿದೆ. ಇದು ಸರಿಯಾದ ಕ್ರಮವಲ್ಲ.ಸರ್ಕಾರ ಕೂಡಲೇ 2017 ವೃಂದ ಮತ್ತು ನೇಮಕಾತಿಯಲ್ಲಿ 2016ಕ್ಕಿಂತ ಮೊದಲ ನೇಮಕಾತಿಯಾದವರಿಗೆ ಪೂರ್ವಾನ್ವಯಗೊಳಿಸಬಾರದು. 2016 ಪೂರ್ವದಲ್ಲಿ ನೇಮಕವಾದವರಿಗೆ ಅರ್ಹತೆ ಇರುವವರಿಗೆ ಬಡ್ತಿ ನೀಡಬೇಕು ಸೇರಿದಂತೆ ಹಲವಾರು ಬೇಡಿಕೆಯನ್ನು ಇಟ್ಟುಕೊಂಡು ಹೋರಾಟ ಮಾಡುತ್ತೇವೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಬಿ., ಜಿಲ್ಲಾ ಗೌರವಾಧ್ಯಕ್ಷ ಈರಪ್ಪ ಬಳ್ಳೊಳ್ಳಿ, ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಕಮಲಾಪುರ ಹಾಗೂ ನಾಗರಾಜ ಮಾದಿನೂರು ಇದ್ದರು.