ಪ್ರಧಾನಿ ನರೇಂದ್ರ ಮೋದಿ ಭಾರತದ ರಕ್ಷಣಾ ಪಡೆ ಗಟ್ಟಿಗೊಳಿಸಿದರು. ಶತ್ರುಗಳಿಗೆ ತಕ್ಕ ಉತ್ತರ ನೀಡಿದರು

ಕೊಪ್ಪಳ: ಪ್ರಧಾನಿ ಮೋದಿಯಿಂದ ಭಾರತದ ಸರ್ವಾಂಗೀಣ ಅಭಿವೃದ್ಧಿ ಆಗಿದೆ. ಭಾರತಕ್ಕೆ ಅಗ್ರಸ್ಥಾನ ಸಿಕ್ಕಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ್ ಹೇಳಿದರು.

ನಗರದ ಈಶ್ವರ ದೇವಸ್ಥಾನದಲ್ಲಿ ದೇಶದ ಅತಿ ಹೆಚ್ಚು ದಿನಗಳ ಕಾಲ ಚುನಾಯಿತ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ 4399 ದಿನಗಳ ಸೇವೆ ಪೂರ್ಣಗೊಳಿಸಿರುವ ಹಿನ್ನೆಲೆ ಬಿಜೆಪಿಯಿಂದ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಸೇವೆಯಲ್ಲಿನ ನಿರಂತರ ಯಶಸ್ಸು ಹಾಗೂ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಅವರ ಸಂಕಲ್ಪ ಅತ್ಯಮೂಲ್ಯ ಸ್ಥಾನ ಭಾರತಕ್ಕೆ ನೀಡಿವೆ. ಭಾರತವನ್ನು ವಿಶ್ವದ ಅಗ್ರ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕೈಗೊಂಡಿರುವ ಜನಪರ ಯೋಜನೆ, ಅಭಿವೃದ್ಧಿ ಕಾರ್ಯ ಹಾಗೂ ದೂರದೃಷ್ಟಿಯ ನಾಯಕತ್ವ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಪ್ರೇರಣೆಯಾಗಿವೆ. ಅವರ ಸಮರ್ಥ ಆಡಳಿತದ ಫಲವಾಗಿ ಭಾರತವು ಜಾಗತಿಕ ಮಟ್ಟದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದುಕೊಂಡಿದ್ದು, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಹೊಸ ದಿಕ್ಕು ದೊರೆತಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಭಾರತದ ರಕ್ಷಣಾ ಪಡೆ ಗಟ್ಟಿಗೊಳಿಸಿದರು. ಶತ್ರುಗಳಿಗೆ ತಕ್ಕ ಉತ್ತರ ನೀಡಿದರು. ಹಾಗೇ ಭಾರತ ಪ್ರತಿ ರಂಗದಲ್ಲೂ ಗಟ್ಟಿಗೊಳಿಸುವಲ್ಲಿ ಅವರ ಇಟ್ಟ ದಿಟ್ಟ ಹೆಜ್ಜೆ ಜನಾನುರಾಗಿ ಆಗಿವೆ. ಅವರ ಸುದಿರ್ಘ ಆಡಳಿತ ಜನರಿಗೆ ಮತ್ತಷ್ಟು ಅಭಿವೃದ್ಧಿಯ ಭರವಸೆ ಮೂಡಿಸಿದೆ. ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಪ್ರಧಾನಿ ನರೇಂದ್ರ ಮೋದಿ ಭಾರತದ ಕಟ್ಟ ಕಡೆಯ ವ್ಯಕ್ತಿಗೂ ಯೋಜನೆ ತಲುಪಿಸಿದ್ದಾರೆ ಎಂದರು.

ಲೋಕಸಭೆಯ ನಿಕಟಪೂರ್ವ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರಿಂದ ಭಾರತ ವಿಶ್ವಗುರು ಆಗಿದೆ. ಅವರ ರಾಷ್ಟ್ರಪ್ರೇಮ ಹಾಗೂ ಆಡಳಿತ ವೈಖರಿ ಅನ್ಯ ರಾಷ್ಟ್ರಗಳು ನಿಬ್ಬೆರಿಗಿನಿಂದ ನೋಡುತ್ತಿವೆ. ದೇಶ ಹಾಗೂ ದೇಶದ ಜನರಿಗಾಗಿ ತಮ್ಮ ಜೀವನ ಪ್ರಧಾನಿ ನರೇಂದ್ರ ಮೋದಿ ಸೀಮಿತವಾಗಿಟ್ಟಿದ್ದಾರೆ. ನರೇಂದ್ರ ಮೋದಿ ದೇಶಸೇವೆ, ಅಭಿವೃದ್ಧಿ ಪರ ಚಿಂತನೆ ಮತ್ತು ಜನಪರ ಆಡಳಿತ ಮಾದರಿ ಎಂದರು.

ಈ ಸಂದರ್ಭದಲ್ಲಿ ಅಮರೇಶ ಮುರಳಿ, ವೀರೇಶ ಸಜ್ಜನ್, ಮಹಾಂತೇಶ ಪಾಟೀಲ್, ಮೈನಹಳ್ಳಿ, ನೀಲಕಂಠಯ್ಯ ಹಿರೇಮಠ, ರಮೇಶ ಕವಲೂರ, ಚನ್ನಬಸವ ಗಾಳಿ, ವಾಣಿಶ್ರೀ ಮಠದ, ಶೋಭಾ ನಗರಿ, ಗೀತಾ ಮುತ್ತಾಳ, ಮಹಾಲಕ್ಷ್ಮೀ ಕಂದಾರಿ, ಪುಟ್ಟರಾಜು ಚಕ್ಕಿ, ದೇವರಾಜ ಹಾಲಸಮುದ್ರ ಹಾಗೂ ಇತರರಿದ್ದರು.