ಮನೆಗಳಿಗೆ ನಲ್ಲಿ ಮೂಲಕ ಶುದ್ಧ ನೀರು ನೀಡಿದ್ದು ಪ್ರಧಾನಿ ಮೋದಿ: ರುದ್ರೇಶ್‌

| Published : Mar 04 2024, 01:19 AM IST

ಸಾರಾಂಶ

ಅಮಚವಾಡಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ದೇಶದ ಪ್ರತಿ ಹಳ್ಳಿಗಳಲ್ಲಿರುವ ಮನೆ ಮನೆಗೆ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಕಲ್ಪಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹಾಗೂ ಕೆಆರ್‌ಐಡಿಎಲ್ ಮಾಜಿ ಅಧ್ಯಕ್ಷ ಎಂ. ರುದ್ರೇಶ್ ತಿಳಿಸಿದರು.

ತಾಲೂಕಿನ ಅಮಚವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಭಾಗ ಮಾಜಿ ಮುಖ್ಯಮಂತ್ರಿ ರೈತ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟು ಹಬ್ಬದ ಅಂಗವಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಕಳೆದ ೧೦ ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೈತರು, ರೈತ ಮಹಿಳೆಯರು ಹಾಗೂ ಕುಗ್ರಾಮಗಳ ಅಭಿವೃದ್ಧಿಗೆ ವಿಶೇಷ ಯೋಜನೆಯನ್ನು ಜಾರಿ ಮಾಡಿದರು. ಅನುಷ್ಟಾನ ಮಾಡುವುದು ಮುಖ್ಯವಲ್ಲ. ಆ ಯೋಜನೆ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ರೈತರಿಗೆ ತಲುಪಬೇಕೆಂಬ ಮಹಾದಾಸೆಯನ್ನು ನಮ್ಮ ಪ್ರಧಾನಿಗಳು ಹೊಂದಿದ್ದರು. ಪ್ರತಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಕಲ್ಪಿಸಬೇಕು. ನಮ್ಮ ಹೆಣ್ಣು ಮಕ್ಕಳು ಬಿಂದಿಗೆ ಹಿಡಿದು ಬೀದಿ ಬೀದಿಯಲ್ಲಿ ನೀರಿಗಾಗಿ ಅಲೆಯುವುದು ತಪ್ಪಬೇಕು ಎಂಬ ಉದ್ದೇಶದಿಂದ ನಲ್ಲಿಗಳ ಮೂಲಕ ಮನೆಗೆ ಬಾಗಿಲು ಶುದ್ಧ ನೀರು ತಲುಪುವಂತೆ ಮಾಡಿದ್ದಾರೆ ಎಂದರು.

ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುವುದು ನಿಶ್ಚಿತ. ಅದೇ ರೀತಿ ರಾಜ್ಯದಲ್ಲಿ ರೈತ ನಾಯಕ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ೨೮ ಕ್ಷೇತ್ರದಲ್ಲಿಯು ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಮೋದಿ ಅವರಿಗೆ ರಾಜ್ಯದಿಂದ ಹೆಚ್ಚಿನ ಬೆಂಬಲವನ್ನು ನೀಡಬೇಕಾಗಿದೆ. ತಾವೆಲ್ಲರೂ ಪ್ರಧಾನಿ ಮೋದಿ ಅವರ ಸಾಧನೆಯನ್ನು ನೋಡಿ ಬಿಜೆಪಿಗೆ ಮತ ನೀಡಬೇಕು ಎಂದು ರುದ್ರೇಶ್ ಮನವಿ ಮಾಡಿದರು.

ಅಮಚವಾಡಿ ಗ್ರಾಮ ಬಹಳ ದೊಡ್ಡ ಗ್ರಾಮವಾಗಿದ್ದು, ನಮ್ಮ ಸರ್ಕಾರ ಅವಧಿಯಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಈ ಹಿಂದೆ ಹೇಳಿದಂತೆ ಅಸ್ಪತ್ರೆಗೆ ಬರುವ ರೋಗಿಗಳು ಹಾಗು ಅವರ ಸಹಾಯಕರಿಗೆ ಶುದ್ಧ ಕುಡಿಯುವ ನೀರು ಕಲ್ಪಿಸಲು ಘಟಕವನ್ನು ನಿರ್ಮಿಸಲಾಗಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಕನಕಪುರ ಜಗದೀಶ್, ಅಮಚವಾಡಿ ಗ್ರಾಪಂ ಉಪಾಧ್ಯಕ್ಷ ಪುಟ್ಟಸ್ವಾಮಿ, ಸದಸ್ಯರಾದ ಪುಟ್ಟಸ್ವಾಮಿ, ಕೋಮುವಾರು ಅಧ್ಯಕ್ಷ ಶ್ರೀಕಾಂತ್ ಅರಸು, ಉಪಾಧ್ಯಕ್ಷ ಮಹದೇವಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಮಹೇಂದ್ರ, ಬಿಜೆಪಿ ಮಂಡಲದ ಅಧ್ಯಕ್ಷ ಅಕರಲವಾಡಿ ಮಹೇಶ್, ಉಡಿಗಾಲ ಚಂದ್ರಶೇಖರ್, ಅಯ್ಯನಪುರ ವಿಜಯೇಂದ್ರ, ಅಭಿನಂದನ್, ಕೆಸ್ತೂರು ಬಸವಣ್ಣ, ಮರಿಯಾಲ ಶಿವರುದ್ರಪ್ಪ, ಅಮಚವಾಡಿ ವೀರಭದ್ರನಾಯಕ ಮೊದಲಾದವರಿದ್ದರು.