ಸಾರಾಂಶ
ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ರಾಜ್ಯದ 3 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ವರ್ಚುವಲ್ ಮೂಲಕ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ರಾಜ್ಯದ 3 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ವರ್ಚುವಲ್ ಮೂಲಕ ಚಾಲನೆ ನೀಡಿದರು.ಬೆಂಗಳೂರು-ಕಲಬುರಗಿ ಹಾಗೂ ಮೈಸೂರು- ಚೆನ್ನೈ ಮಾರ್ಗಗಳ ನಡುವೆ ಸಂಚರಿಸಲಿರುವ ಎರಡು ಹೊಸ ವಂದೇ ಭಾರತ್ ರೈಲುಗಳಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಿದರು. ಅಲ್ಲದೆ, ಮಂಗಳೂರು ಸೆಂಟ್ರಲ್ ಗೆ ವಿಸ್ತರಣೆಗೊಂಡ ತಿರುವನಂತಪುರಂ-ಕಾಸರಗೋಡು ವಂದೇ ಭಾರತ್‌ಗೂ ಚಾಲನೆ ನೀಡಿದರು. ಇದರಿಂದಾಗಿ ಕರ್ನಾಟಕದಲ್ಲಿ ಒಟ್ಟು ವಂದೇ ಭಾರತ್ ರೈಲುಗಳ ಸಂಖ್ಯೆ 8ಕ್ಕೆ ಏರಿದಂತಾಗಿದೆ.ಗುಜರಾತ್‌ನ ಅಹಮದಾಬಾದ್ ನಿಂದ ಬೆ.9.40ಕ್ಕೆ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಿಸುತ್ತಿದ್ದಂತೆ, ನಿಲ್ದಾಣಗಳಲ್ಲಿದ್ದ ಸಾರ್ವಜನಿಕರು, ಕಾರ್ಯಕರ್ತರು ‘ವಂದೇ ಭಾರತ್, ಭಾರತ್ ಮಾತಾಕೀ ಜೈ’ ಎಂದು ಘೋಷಣೆ ಕೂಗಿದರು. ಕಲಬುರಗಿ ರೈಲು ನಿಲ್ದಾಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕಲಬುರಗಿ ಸಂಸದ ಡಾ. ಉಮೇಶ ಜಾಧವ್, ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಇತರ ನಾಯಕರು ಹಾಜರಿದ್ದರು.ಇದೇ ವೇಳೆ, ನೈಋತ್ಯ ರೈಲ್ವೆ ವ್ಯಾಪ್ತಿಯ ₹5,142 ಕೋಟಿ ಯೋಜನೆಗಳಿಗೂ ಮೋದಿ ಚಾಲನೆ ನೀಡಿದರು.