ಸಾರಾಂಶ
ನರಗುಂದ: ಪ್ರಧಾನಿ ಮೋದಿಯವರು ದೇಶಕ್ಕೆ ಹೊಸ ದಿಕ್ಕು ತೋರಿಸಿದ ನಾಯಕ. ಜಗತ್ತಿನ 3ನೇ ಆರ್ಥಿಕ ಶಕ್ತಿ ರಾಷ್ಟ್ರವನ್ನಾಗಿ ಮಾಡಿದ್ದಾರೆ. 2047ರ ಹೊತ್ತಿಗೆ ಭಾರತ ಜಗತ್ತಿನ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ. ಭದ್ರತೆಯಲ್ಲಿ ಯಾರೊಂದಿಗೂ ರಾಜಿಯಾಗಿಲ್ಲ. ಭಾರತ ಅಷ್ಟೊಂದು ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಮೋದಿಯವರ ಸೇವೆ ಭಾರತಕ್ಕೆ ಇನ್ನೂ ಬೇಕಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.ಶುಕ್ರವಾರ ಮತಕ್ಷೇತ್ರದ ಚಿಕ್ಕನರಗುಂದ ಗ್ರಾಮದಲ್ಲಿ ಬಿಜೆಪಿ, ಬಾಬಾಸಾಹೇಬ ಭಾವೆ ಸರ್ಕಾರಿ ತಾಲೂಕು ಆಸ್ಪತ್ರೆ ಹಾಗೂ ಹುಬ್ಬಳ್ಳಿ ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಮೋದಿಯವರ ಆಡಳಿತದಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಆಗಿದೆ. ದೇಶದ ಆರ್ಥಿಕ ಸ್ಥಿತಿ ಸದೃಢವಾಗಿದೆ ಎಂದರು.ಉಗ್ರರ ಪಹಲ್ಗಾಂ ದಾಳಿ ನಂತರದ ಸಿಂದೂರ ಕಾರ್ಯಾಚರಣೆಯಲ್ಲಿ ಕೇವಲ ಇಬ್ಬರೇ ಮಹಿಳಾ ಸೇನಾ ಸಿಬ್ಬಂದಿ ಪಾಕಿಸ್ತಾನದೊಳಗೆ ಹೊಕ್ಕು ಉಗ್ರರ ಅಡಗುತಾಣಗಳನ್ನು ನಾಶ ಮಾಡಿ ಬಂದಿದ್ದಾರೆ. ನಮಗೆ ಪಾಕಿಸ್ತಾನ ಶತ್ರುರಾಷ್ಟ್ರ ಅಲ್ಲವೇ ಅಲ್ಲ, ನಮ್ಮ ವೈರಿ ಏನಿದ್ದರೂ ಅದು ಚೀನಾ ದೇಶವಾಗಿದೆ. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಬೆದರಿಕೆಗೂ ಬಗ್ಗದೇ ಮೋದಿಯವರು ದೇಶವನ್ನು ಮುನ್ನಡೆಸಿದ್ದಾರೆ. ಜತೆಗೆ ಹಲವಾರು ಜನಪರ ಯೋಜನೆಗಳನ್ನು ಸಹ ಜಾರಿಗೆ ತಂದಿದ್ದಾರೆ ಎಂದರು.ಮಾನಸಿಕ ಅಸಮತೋಲನ: ಕೆಲವು ವ್ಯಕ್ತಿಗಳಿಗೆ ಅಧಿಕಾರ ಸಿಗದೇ ಹೋದಾಗ ಮಾನಸಿಕ ಅಸಮತೋಲನ ಆಗುವುದು ಸಹಜ. ಅವರ ಬಗ್ಗೆ ನಾನೇನೂ ಮಾತನಾಡಲ್ಲ. ಬುದ್ಧಿವಂತರು ಮತ್ತು ಹುಚ್ಚರ ಜತೆ ಮಾತನಾಡಬಹುದು. ಆದರೆ ಅರೆಹುಚ್ಚರ ಜತೆ ಮಾತನಾಡುವುದು ಕಷ್ಟ ಎಂದರು.ಪ್ರಧಾನಿ ಮೋದಿಜಿಯವರ 75ನೇ ಜನ್ಮದಿನದ ಪ್ರಯುಕ್ತ ಚಿಕ್ಕನರಗುಂದ ಗ್ರಾಮದಲ್ಲಿ ಸಸಿಗಳನ್ನು ನೆಡಲಾಯಿತು ಮತ್ತು ಉಚಿತ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ವಿವಿಧ ಚಿಕಿತ್ಸೆಗಳನ್ನು ಒಳಗೊಂಡು 629 ಜನರು ಉಚಿತ ಆರೋಗ್ಯದ ಸೌಲಭ್ಯ ಪಡೆದರು.
ಕೊಣ್ಣೂರ, ಹೊಂಬಳ ಮತ್ತು ಬೆಳವಣಿಕಿ ಗ್ರಾಮಗಳಲ್ಲಿ ನಡೆಸಲಾದ ರಕ್ತದಾನ ಶಿಬಿರದಲ್ಲಿ 166 ಜನರು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ದೇಸಾಯಿಗೌಡ ಪಾಟೀಲ, ಮಹೇಶ್ವರಯ್ಯ ಸುರೇಬಾನ, ಎಸ್.ಆರ್. ಪಾಟೀಲ ಮಾತನಾಡಿದರು. ಮಂಡಲ ಅಧ್ಯಕ್ಷ ನಾಗನಗೌಡ ತಿಮ್ಮನಗೌಡ್ರ, ಶಿವಪ್ಪ ಗಣೇಶಿ, ಅಶೋಕ ಜ್ಞಾನೋಪಂಥ, ಮುತ್ತು ರಾಯರಡ್ಡಿ, ಪ್ರಕಾಶಗೌಡ ತಿರಕನಗೌಡ್ರ, ಮರಿಗೌಡ ಚನ್ನಪ್ಪಗೌಡ್ರ, ಶಿವಾನಂದ ಕುಲಕರ್ಣಿ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ನಿಂಗಪ್ಪ ಗಾಣಿಗೇರ, ಮಲ್ಲಪ್ಪ ಕಲಹಾಳ, ಮಲ್ಲಪ್ಪ ಆರಿಬೆಂಚಿ, ಬೀರಪ್ಪ ಕಲಹಾಳ, ಸಿದ್ದೇಶ ಹೂಗಾರ, ಸಂತೋಷ ಹಂಚಿನಾಳ ಮುಂತಾದವರು ಇದ್ದರು.