ಸಾರಾಂಶ
ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಹೇಳಿಕೆ । ಜೆಡಿಎಸ್-ಬಿಜೆಪಿ ಸಮನ್ವಯ ಸಭೆ
ಕನ್ನಡಪ್ರಭ ವಾರ್ತೆ ಸಕಲೇಶಪುರದೇಶದ ಅಸ್ತಿತ್ವಕ್ಕೆ ಧಕ್ಕೆ ಬಂದ ವೇಳೆ ದೇವದೂತರೊಬ್ಬರ ಉದಯವಾಗುತ್ತದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಸಿಲುಕಿ ನಲುಗಿದ್ದ ಭಾರತ ದೇಶದ ರಕ್ಷಣೆಗಾಗಿ ಉದಯಿಸಿದ ದೇವದೂತ ನರೇಂದ್ರ ಮೋದಿ ಎಂದು ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಹೇಳಿದರು.
ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರ ಸಮನ್ವಯ ಸಭೆಯಲ್ಲಿ ಮಾತನಾಡಿದರು.ಪ್ರಜ್ವಲ್ ರೇವಣ್ಣ ಮುಖ ನೋಡದೆ ದೇಶದ ಹಿತದ ಗಮನದಲ್ಲಿಟ್ಟುಕೊಂಡು ಮತ ಹಾಕಿ. ಕಳೆದ ೧೦ ವರ್ಷಗಳ ಆಡಳಿತದಲ್ಲಿ ಕೇಂದ್ರ ಸರ್ಕಾರ ಜಿಲ್ಲೆಯ ಅಭಿವೃದ್ದಿಗೆ ನೂರಾರು ಕೋಟಿ ರು. ನೀಡಿದೆ. ಈ ಎಲ್ಲ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಮತದಾರರಿಗೆ ವಿವರಿಸುವ ಮೂಲಕ ಮತ ಕೇಳಿ. ಕಾಂಗ್ರೆಸ್‌ನವರಿಗೆ ಮತ ಕೇಳುವ ಯಾವ ಆರ್ಹತೆಯೂ ಇಲ್ಲ. ಉಚಿತ ಕೂಡುಗೆಗಳನ್ನು ಘೋಷಣೆ ಮಾಡಿ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಲಾಗಿದೆ ಎಂದು ಟೀಕಿಸಿದರು.
ಹಾಸನ ಲೋಕಸಭಾ ಚುನಾವಣೆ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ‘ಕಳೆದ ಐದು ವರ್ಷದಲ್ಲಿ ಜಿಲ್ಲೆಯ ಪ್ರತಿ ಗ್ರಾಪಂ ಮಟ್ಟದಲ್ಲಿ ಸಭೆ ನಡೆಸಿದ ತೃಪ್ತಿ ನನಗಿದೆ. ತನ್ನ ಅಧಿಕಾರದ ಅವಧಿಯಲ್ಲಿ ಪಕ್ಷ ಭೇದಭಾವ ಮಾಡದೆ ಅಭಿವೃದ್ದಿಯ ಕೆಲಸಕ್ಕೆ ಸಹಕರಿಸಿದ್ದೇನೆ. ಕಾಡಾನೆ ಸಮಸ್ಯೆ ಬಗ್ಗೆ ಸಾಕಷ್ಟು ಹೋರಾಟ ನಡೆಸಿದ್ದೇನೆ. ಕಾಂಗ್ರೆಸ್ ಸರ್ಕಾರ ಆಯೋಮಯ ಸ್ಥಿತಿಯಲ್ಲಿದ್ದು ಉಚಿತ ಕೂಡುಗೆಗಳ ಬಗ್ಗೆ ಜನರು ಭ್ರಮನಿರಸರಾಗಿರುವುದು ಈಗಾಗಲೇ ತಿಳಿದಿದೆ. ಕಾಂಗ್ರೆಸ್ ಪಕ್ಷ ಮಲೆನಾಡಿಗೆ ನೀಡಿರುವ ಕೊಡುಗೆ ನಗಣ್ಯವಾಗಿದೆ. ದೇಶದ ಅಭಿವೃದ್ದಿಯ ದೃಷ್ಟಿಯಿಂದ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಅನಿವಾರ್ಯವಾಗಿದೆ’ ಎಂದು ಹೇಳಿದರು.ವಿಧಾನ ಪರಿಷತ್ ಉಪ ಸಭಾಪತಿ ಪ್ರಾಣೇಶ್ ಮಾತನಾಡಿ, ‘ನೈತಿಕತೆಯ ಆಧಾರದಲ್ಲಿ ಲೋಕಸಭಾ ಚುನಾವಣೆ ಎದುರಿಸುವ ಶಕ್ತಿ ಎನ್‌ಡಿಎ ಕಾರ್ಯಕರ್ತರಿಗಿದೆ.ಎರಡು ಪಕ್ಷದ ಜಿಲ್ಲಾ ಮುಖಂಡರಲ್ಲಿ ಭಿನ್ನಾಭಿಪ್ರಾಯವಿದೆಯೇ ಹೊರತು ಭಿನ್ನಮತವಿಲ್ಲ. ಭಿನ್ನಾಭಿಪ್ರಾಯ ಹೋಗಲಾಡಿಸುವ ನಿಟ್ಟಿನಲ್ಲಿ ಸಮನ್ವಯ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ದೇಶದಲ್ಲಿ ಎನ್‌ಡಿಎ ಆಡಳಿತ ನಡೆಸದಿದ್ದರೆ ನಮ್ಮ ಮಕ್ಕಳ ಭವಿಷ್ಯಕ್ಕೆ ಸಂಕಷ್ಟ ಎದುರಾಗುವುದು ನಿಶ್ಚಿತ. ನರೇಂದ್ರ ಮೋದಿ ಪ್ರಧಾನಿಯಾಗುವ ಮುನ್ನ ಕೊಟ್ಟ ಎಲ್ಲ ಭರವಸೆಗಳನ್ನು ತಮ್ಮ ಕಳೆದ ೧೦ ವರ್ಷಗಳ ಆಡಳಿತ ಅವಧಿಯಲ್ಲಿ ಪೊರೈಸಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ, ದೇಶ ಐದರೊಳಗಿನ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಆದ್ದರಿಂದ, ಈ ಬಾರಿ ನಾಲ್ಕು ನೂರಕ್ಕೂ ಅಧಿಕ ಸಂಸದರನ್ನು ಕಳುಹಿಸಿದರೆ ದೇಶದ ಭದ್ರತೆಯ ದೃಷ್ಟಿಯಿಂದ ಮತ್ತಷ್ಟು ಬಾಕಿ ಉಳಿದಿರುವ ಕೆಲಸಗಳು ನೆರವೇರಲಿವೆ ಎಂದು ಹೇಳಿದರು.ಶಾಸಕ ಸಿಮೆಂಟ್ ಮಂಜು, ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಮಾಜಿ ಶಾಸಕ ಬಿ.ಆರ್ ಗುರುದೇವ್, ಮಾಜಿ ಶಾಸಕ ಎಚ್.ಎಂ ವಿಶ್ವನಾಥ್, ತಾಲೂಕು ಭಾರತೀಯ ಜನತಾಪಕ್ಷದ ಅಧ್ಯಕ್ಷ ವಳಲಹಳ್ಳಿ ಅಶ್ವಥ್, ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ, ಬೇಲೂರು ಬಿಜೆಪಿ ಅಧ್ಯಕ್ಷ ರೇಣುಕುಮಾರ್, ಸಕಲೇಶಪುರ ತಾಲೂಕು ಜೆಡಿಎಸ್ ಅಧ್ಯಕ್ಷ ಸೋಮಶೇಖರ್, ಪ್ರತಾಪ್, ಪ್ರಸನ್ನಕುಮಾರ್, ಬಿಜೆಪಿ ಮಹಿಳಾಮೊರ್ಚಾ ಜಿಲ್ಲಾಧ್ಯಕ್ಷೆ ನೇತ್ರಾವತಿ ಮಂಜುನಾಥ್ ಇದ್ದರು.
ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ಸಮನ್ವಯ ಸಭೆಯನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಪ್ರಾಣೇಶ್, ಶಾಸಕ ಸಿಮೆಂಟ್ ಮಂಜು, ಲಿಂಗೇಶ್, ಗುರುದೇವ್, ಎಚ್.ಎಂ ವಿಶ್ವನಾಥ್ ಇತರರಿದ್ದರು.