ಸಾರಾಂಶ
ಕಾರವಾರ: ಬೃಹತ್ ರಕ್ತದಾನ ಶಿಬಿರ, ದೇವಾಲಯದಲ್ಲಿ ಪೂಜೆ, ವೃದ್ಧಾಶ್ರಮ ಹಾಗೂ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಜನ್ಮದಿನವನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ನೇತೃತ್ವದಲ್ಲಿ ಸಮಾಜಸೇವೆಯ ಮೂಲಕ ಆರಂಭಿಸಲಾಗಿದೆ. ಅ.2ರತನಕ ವಿವಿಧ ಕಾರ್ಯಕ್ರಮಗಳು ಮುಂದುವರಿಯಲಿವೆ.
ಮೊದಲು ನಗರದ ಗಣಪತಿ ದೇವಾಲಯ ಹಾಗೂ ಮಹಾದೇವ ದೇವಾಲಯಲ್ಲಿ ಪೂಜೆ ಸಲ್ಲಿಸಿ, ನರೇಂದ್ರ ಮೋದಿ ಅವರಿಗೆ ಆರೋಗ್ಯ, ಆಯುಷ್ಯ ನೀಡಿ, ಇನ್ನಷ್ಟು ವರ್ಷಗಳ ಕಾಲ ದೇಶ ಸೇವೆ ಮಾಡುವ ಅವಕಾಶ ನೀಡುವಂತೆ ಪ್ರಾರ್ಥಿಸಲಾಯಿತು. ಮಹಾದೇವ ದೇವಾಲಯದಲ್ಲಿ ನೂರಾರು ಜನರಿಗೆ ಪ್ರಸಾದ ವಿತರಣೆ ನಡೆಯಿತು. ರೂಪಾಲಿ ಎಸ್.ನಾಯ್ಕ ಸ್ವತಃ ಎಲ್ಲರಿಗೂ ಪ್ರಸಾದ ವಿತರಣೆ ಮಾಡಿದ್ದು ವಿಶೇಷವಾಗಿತ್ತು.ಜಿಲ್ಲಾಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ರೂಪಾಲಿ ಎಸ್.ನಾಯ್ಕ ಹಾಗೂ ಮೆಡಿಕಲ್ ಕಾಲೇಜಿನ ಡೀನ್ ಡಾ.ಪೂರ್ಣಿಮಾ ಉದ್ಘಾಟನೆ ನೆರವೇರಿಸಿದರು. ರಕ್ತದಾನಕ್ಕೆ 500ಕ್ಕೂ ಹೆಚ್ಚು ಜನರು ನೋಂದಣಿ ಮಾಡಿದ್ದು, ಬುಧವಾರದಿಂದ ರಕ್ತದಾನ ಆರಂಭವಾಗಿದೆ. ಹಂತ ಹಂತವಾಗಿ ನೋಂದಣಿ ಮಾಡಿದ ಎಲ್ಲರೂ ರಕ್ತದಾನ ಮಾಡಲಿದ್ದಾರೆ. ಬುಧವಾರ ರೂಪಾಲಿ ಎಸ್.ನಾಯ್ಕ, ಪಕ್ಷದ ಜಿಲ್ಲಾ ಅಧ್ಯಕ್ಷ ಎನ್.ಎಸ್. ಹೆಗಡೆ ಹಾಗೂ ಇತರರು ರಕ್ತದಾನ ಮಾಡಿದರು.
ಸಿದ್ಧರದ ಸುರಭಿ ವೃದ್ಧಾಶ್ರಮದಲ್ಲಿ ಬಿಜೆಪಿ ಹಿಂದುಳಿದ ಮೋರ್ಚಾದಿಂದ ಕಾರ್ಯಕ್ರಮ ಸಂಘಟಿಸಲಾಗಿತ್ತು. ಜಿಲ್ಲಾ ಅಧ್ಯಕ್ಷ ರಾಜೇಂದ್ರ ನಾಯ್ಕ ಮತ್ತು ತಾಲೂಕು ಅಧ್ಯಕ್ಷ ದೇವಿದಾಸ ನಾಯ್ಕ ಉಪಸ್ಥಿತಿಯಲ್ಲಿ ರೂಪಾಲಿ ಎಸ್.ನಾಯ್ಕ ಪಾಲ್ಗೊಂಡಿದ್ದರು. ಹಣ್ಣು ಹಂಪಲು, ಸಿಹಿ ತಿಂಡಿ ವಿತರಣೆ ಮಾಡಲಾಯಿತು. ಊಟದ ವ್ಯವಸ್ಥೆ ಮಾಡಲಾಗಿತ್ತು. ನಂತರ ಸಮೀಪದಲ್ಲಿರುವ ಸಿದ್ಧರದ ವಿಶೇಷಚೇತನರ ಶಾಲೆಗೆ ಭೇಟಿ ನೀಡಿ ಹಣ್ಣು ಹಂಪಲು ವಿತರಣೆ ಮಾಡಲಾಯಿತು.ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮಗಳ ಕುರಿತು ಮಾತನಾಡಿದ ರೂಪಾಲಿ ಎಸ್.ನಾಯ್ಕ, ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಒಂದೇ ಒಂದು ದಿನ ರಜೆಯನ್ನು ಮಾಡದೇ ನಿರಂತರವಾಗಿ ದೇಶ ಸೇವೆ ಮಾಡುತ್ತಿದ್ದಾರೆ. ಮೋದಿ ಅವರಿಗೆ ಯಾವುದೇ ಸ್ವಾರ್ಥ ಇಲ್ಲ. ಆದರೆ ಈ ದೇಶಕ್ಕೆ, ನಮ್ಮೆಲ್ಲರಿಗೆ ಮೋದಿ ಬೇಕು. ಜಾಗತಿಕ ಮಟ್ಟದಲ್ಲಿ ಭಾರತ ನಂಬರ್ ವನ್ ದೇಶ ಆಗಬೇಕು. ಅದು ಮೋದಿ ಅವರಿಂದ ಮಾತ್ರ ಸಾಧ್ಯ. ಹಾಗಾಗಿ ಸೇವಾ ಪಾಕ್ಷಿಕ್ ಹಮ್ಮಿಕೊಂಡು ನಿರಂತರವಾಗಿ ಸಮಾಜಸೇವೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮೋದಿ ಅವರಿಗೆ ಹುಟ್ಟುಹಬ್ಬದ ಕೊಡುಗೆಯನ್ನು ನೀಡುತ್ತಿದ್ದೇವೆ. ನರೇಂದ್ರ ಮೋದಿ ನಮ್ಮೆಲ್ಲರ ಹೆಮ್ಮೆ. ಅವರ ಪರವಾಗಿ ಹಾಗೂ ದೇಶಕ್ಕೆ ಒಳಿತಾಗಲೆಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ. ಅವರ ಜನ್ಮದಿನವನ್ನೂ ಸಾರ್ಥಕ ಆಚರಿಸುವ ಉದ್ದೇಶದಿಂದ ಅಕ್ಟೋಬರ್ 2 ರ ತನಕ ಸಮಾಜಸೇವೆ ಹಾಗೂ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ರಕ್ತದಾನ ಶ್ರೇಷ್ಠವಾದದ್ದು. ಬಿಜೆಪಿಯ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡು ರಕ್ತದಾನ ಮಾಡಿದ್ದಾರೆ ಎಂದು ತಿಳಿಸಿದರು.ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ಎಸ್.ಹೆಗಡೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರಿಂದ ಈ ದೇಶ ಅಭಿವೃದ್ಧಿ ಆಗಿದೆ. ಇಡಿ ವಿಶ್ವವೇ ಭಾರತದತ್ತ ಹೊರಳುವಂತೆ ಆಗಿದೆ. ಮೋದಿ ಅವರಿಗೆ ಇನ್ನಷ್ಟು ದೇಶಸೇವೆ ಮಾಡುವ ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿದ್ದೇವೆ ಎಂದರು.
ನಗರ ಮಂಡಲ ಅಧ್ಯಕ್ಷ ನಾಗೇಶ್ ಕುರುಡೇಕರ್, ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ್ ಗುನಗಿ, ಕಾರವಾರ ನಗರ ಸಭೆಯ ಅಧ್ಯಕ್ಷ ರವಿರಾಜ್ ಅಂಕೋಲೆಕರ್, ರಾಜ್ಯ ಪ್ರಕೋಷ್ಠ ಸದಸ್ಯ ಸುನಿಲ್ ಸೋನಿ, ಜಿಲ್ಲಾ ಉಪಾಧ್ಯಕ್ಷ ಸಂಜಯ ಸಾಳುಂಕೆ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಕಿಶನ್ ಕಾಂಬಳೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಾ ಹುಲಸ್ವಾರ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶುಭಂ ಕಳಸ್, ನಗರ ಹಾಗೂ ಗ್ರಾಮೀಣ ಪ್ರಧಾನ ಕಾರ್ಯದರ್ಶಿಗಳು, ನಗರಸಭೆ ಸದಸ್ಯರು, ಎಲ್ಲಾ ಮೋರ್ಚಾದವರು, ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು.