ಮತ್ತೊಮ್ಮೆ ಮೋದಿ ಪ್ರಧಾನಿ ಸಂಕಲ್ಪ: ಡಾ. ಅಶ್ವತ್ಥ್‌ ನಾರಾಯಣ ಕರೆ

| Published : Mar 01 2024, 02:18 AM IST

ಮತ್ತೊಮ್ಮೆ ಮೋದಿ ಪ್ರಧಾನಿ ಸಂಕಲ್ಪ: ಡಾ. ಅಶ್ವತ್ಥ್‌ ನಾರಾಯಣ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ವಿರಾಜಪೇಟೆಯ ಸೆರಿನಿಟಿ ಹಾಲ್‌ನಲ್ಲಿ ಗುರುವಾರ ನಡೆದ ವಿರಾಜಪೇಟೆ ಮಂಡಲ ಬಿಜೆಪಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಚಾಲನೆ ನೀಡಿದರು.ಮೋದಿ ಅವರನ್ನು ಮೂರನೇ ಅವಧಿಗೆ ಪ್ರಧಾನಿಯಾಗಿಸಲು ಕಾರ್ಯಕರ್ತರು ಸಂಕಲ್ಪ ಕೈಗೊಳ್ಳಬೇಕು ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಪ್ರಧಾನಿ ನರೇಂದ್ರ ಮೋದಿ ಯಶಸ್ವಿಯಾಗಿ ಹತ್ತು ವರ್ಷ ಜನಪರ ಆಡಳಿತ ನೀಡಿದ್ದು ಮತ್ತೊಮ್ಮೆ ಅವರನ್ನು ಪ್ರಧಾನಿಯನ್ನಾಗಿ ಮಾಡುವ ಮಹತ್ತರ ಹೊಣೆ ಕಾರ್ಯಕರ್ತರದ್ದು. ಮೋದಿ ಅವರನ್ನು ಮೂರನೇ ಅವಧಿಗೆ ಪ್ರಧಾನಿಯಾಗಿಸಲು ಕಾರ್ಯಕರ್ತರು ಸಂಕಲ್ಪ ಕೈಗೊಳ್ಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊಡಗು - ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಡಾ. ಅಶ್ವತ್ಥ್ ನಾರಾಯಣ್‌ ಅಭಿಪ್ರಾಯಪಟ್ಟಿದ್ದಾರೆ.

ವಿರಾಜಪೇಟೆಯ ಸೆರಿನಿಟಿ ಹಾಲ್‌ನಲ್ಲಿ ಗುರುವಾರ ನಡೆದ ವಿರಾಜಪೇಟೆ ಮಂಡಲ ಬಿಜೆಪಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕೊಡಗು ಜಿಲ್ಲೆ ವೀರ ಸೇನಾನಿಗಳ ನಾಡು. ಕೊಡಗಿನ ಜನರು ದೇಶಭಕ್ತಿಗೆ ಹೆಸರಾದವರು. ಕೊಡಗು ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲೂ ಪ್ರಸಿದ್ದಿ ಪಡೆದಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ತಮ್ಮ ಯೋಜನೆಗಳ ಮುಖಾಂತರ ಜನಪರ ಆಡಳಿತ ನೀಡಿದ್ದಾರೆ. ಸ್ವಚ್ಛ ಭಾರತ, ವಿಕಸಿತ ಭಾರತದಂತಹ ಕಾರ್ಯಕ್ರಮ ರೂಪಿಸಿದ್ದಾರೆ. ಭಾರತವನ್ನು ವಿಶ್ವಗುರುವನ್ನಾಗಿಸಲು ಪ್ರಯತ್ನ ಪಟ್ಟಿರುತ್ತಾರೆ. ಕಾರ್ಯಕರ್ತರು ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಮನೆಮನೆಗೆ ತೆರಳಿ ಜನರಿಗೆ ಮಾಹಿತಿ ನೀಡಬೇಕು ಎಂದರು. ಮೈಸೂರು -ಕೊಡಗು ಸಂಸದ ಪ್ರತಾಪ್ ಸಿಂಹ ಮಾತನಾಡಿ, ಕಾರ್ಯಕರ್ತರು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು. ಪಕ್ಷದ ಒಳಗಿನ ಅಸಮಾಧಾನ ಪಕ್ಷದಲ್ಲೇ ಸರಿಪಡಿಸಿಕೊಳ್ಳಬೇಕು. ಪ್ರಧಾನಿ ಮೋದಿ ಮತ್ತೊಮ್ಮೆ ಪ್ರಧಾನಿಗಳಾಗುವುದು ಶತಸಿದ್ಧವಾಗಿದ್ದು, ಕಾರ್ಯಕರ್ತರು ಮೈ ಮರೆಯದೆ ಸಂಘಟನಾ ಕಾರ್ಯದಲ್ಲಿ ತೊಡಗಬೇಕು ಎಂದರು. ಅಟಲ್ ಬಿಹಾರಿ ವಾಜಪೇಯಿ ಅವರ ಬಳಿಕ ಈಗಿನ ಪ್ರಧಾನಿ ಮೋದಿ ಅವರು ಜನಪರ ಆಡಳಿತ ನೀಡುತ್ತಾ ಬಂದಿದ್ದು, ಪಕ್ಷದ ಕಾರ್ಯಕರ್ತರು ಜನರ ಬಳಿಗೆ ತೆರಳಿ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿ ನೀಡಬೇಕು ಎಂದರು. ಕಾರ್ಯಕರ್ತರು ಪಕ್ಷದ ಜೀವಾಳವಾಗಿದ್ದು ಪಕ್ಷವನ್ನು ಅಧಿಕಾರಕ್ಕೆ ತರುವುದು ಪ್ರತೀ ಕಾರ್ಯಕರ್ತನ ಜವಾಬ್ದಾರಿಯಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗಂಡಾಂತರ ಕಾದಿದೆ ಎಂದು ಭವಿಷ್ಯ ನುಡಿದರು.

ವಿಧಾನಸಭೆ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಮಾತನಾಡಿ, ಆತ್ಮವಿಶ್ವಾಸದಿಂದ ನಾವು ಚುನಾವಣೆಗೆ ತಯಾರಾಗಬೇಕಾಗಿದೆ. ಕಾರ್ಯಕರ್ತರು ತಮಗೆ ಎದುರಾಗುವ ಎಲ್ಲಾ ಸವಾಲುಗಳನ್ನು ಎದುರಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.

ದೇಶವು ಮುನ್ನಡೆಯಬೇಕು. ಕರ್ನಾಟಕದಲ್ಲಿ ಈ ಬಾರಿ 28 ಸ್ಥಾನಗಳಲ್ಲಿ 28 ಸ್ಥಾನವನ್ನೂ ಗೆಲ್ಲುವ ಉದ್ದೇಶ ಪಕ್ಷದಾಗಿದೆ. ದೇಶದ ಅಖಂಡತೆ ಕಾಪಾಡಲು, ಭ್ರಷ್ಟಚಾರ ರಹಿತ ಆಡಳಿತ ನೀಡಲು ಪಕ್ಷ ಅಧಿಕಾರಕ್ಕೆ ಬರಬೇಕು ಎಂದರು. ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ವಿಧಾನ ಪರಿಷತ್‌ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ಬಿಜೆಪಿ ಮುಖಂಡರಾದ ಪಟ್ಟಡ ರೀನಾ ಪ್ರಕಾಶ್, ಮಾಚಿಮಂಡ ಸುವಿನ್ ಗಣಪತಿ, ಪಳೆಯಂಡ ರಾಬಿನ್ ದೇವಯ್ಯ, ನೆಲ್ಲಿರ ಚಲನ್, ಅನಿತಾ ಪೂವಯ್ಯ, ಪಟ್ರಪಂಡ ರಘು ನಾಣಯ್ಯ ಮತ್ತಿತರರಿದ್ದರು. ನಗರ ಬಿಜೆಪಿ ಅಧ್ಯಕ್ಷ ಟಿ. ಪಿ. ಕೃಷ್ಣ ನಿರೂಪಿಸಿದರು. ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪಧಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.-----------

ಬೈಕ್ ಜಾಥಾ

ಬಿಜೆಪಿ ವಿರಾಜಪೇಟೆ ಮಂಡಲ ಅಧ್ಯಕ್ಷರು ಹಾಗೂ ಪಧಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮಕ್ಕೂ ಮುಂಚೆ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬೈಕ್‌ ಜಾಥಾ ನಡೆಸಿದರು. ನಗರದ ತೆಲುಗರ ಬೀದಿಯ ಮರಿಯಮ್ಮ ದೇವಸ್ಥಾನದಿಂದ ಆರಂಭಗೊಂಡ ಈ ಜಾಥಾ ಖಾಸಗಿ ಬಸ್‌ ನಿಲ್ದಾಣದಿಂದ ಸಾಗಿ ಸೆರಿನಿಟಿ ಹಾಲ್ ತಲುಪಿತು. ಬಿಜೆಪಿ ಮುಖಂಡರಾದ ಮಾಚಿಮಂಡ ಸುವಿನ್ ಗಣಪತಿ, ಪಟ್ರಪಂಡ ರಘು ನಾಣಯ್ಯ, ಶಶಿ ಸುಬ್ರಮಣಿ, ನೆಲ್ಲಿರ ಚಲನ್, ನಗರಾಧ್ಯಕ್ಷ ಟಿ.ಪಿ. ಕೃಷ್ಣ ಮತ್ತಿತರರು ಹಾಜರಿದ್ದರು. -------------

ರಕ್ತದಾನ ಶಿಬಿರ ಆಯೋಜನೆ ಸಮಾರಂಭದಲ್ಲಿ ವಿರಾಜಪೇಟೆ ಬಿಜೆಪಿ ಘಟಕ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ರಕ್ತದಾನ ಶಿಬಿರ ವಿರಾಜಪೇಟೆ ಸೆರಿನಿಟಿ ಹಾಲ್ ನಲ್ಲಿ ನಡೆಯಿತು. ಪಕ್ಷದ ಯುವ ಮುಖಂಡ ಪಿ.ವಿಷ್ಣು ರಕ್ತದಾನ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಮಾಚಿಮಂಡ ಸುವಿನ್ ಗಣಪತಿ, ಪಟ್ರಪಂಡ ರಘು ನಾಣಯ್ಯ, ಶಶಾಂಕ್ ಭೀಮಯ್ಯ ಮತ್ತಿತರರು ಪಾಲ್ಗೊಂಡರು.