ಕನ್ನಡಪ್ರಭ ವಾರ್ತೆ, ಮಂಡ್ಯ/ನಾಗಮಂಗಲ
ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದ ವೇಳೆ ನೆರೆದಿದ್ದ ಸಹಸ್ರಾರು ಜನರು ಹರ್ಷೋದ್ಘಾರದೊಂದಿಗೆ ಅಭೂತಪೂರ್ವ ಸ್ವಾಗತ ಕೋರಿದ್ದು, ಮೋದಿ ಹವಾ ಸಾಕ್ಷೀಕರಿಸುವಂತಿತ್ತು.ಕ್ಷೇತ್ರಕ್ಕೆ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದರಿಂದ ಹೊಸ ಸಂಚಲನವೇ ಸೃಷ್ಟಿಯಾಗಿತ್ತು. ಮೋದಿ ಅವರನ್ನು ಶ್ರೀಮಠ ಹಾಗೂ ಜಿಲ್ಲಾಡಳಿತದ ವತಿಯಿಂದ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.ಬೆಳಗ್ಗೆ 10.50ಕ್ಕೆ ಆಗಮನ:
ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಬೆಳಗ್ಗೆ 10.50ಕ್ಕೆ ಆದಿಚುಂಚನಗಿರಿಯ ತಪೋವನದ ಆವರಣದಲ್ಲಿ ನಿರ್ಮಿಸಿದ್ದ ಹೆಲಿಪ್ಯಾಡ್‌ಗೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಮೋದಿ ಬಂದಿಳಿದರು. ಬಳಿಕ, ಬಿಗಿ ಭದ್ರತೆಯಲ್ಲಿ 1.5 ಕಿ.ಮೀ. ದೂರ ರಸ್ತೆ ಮೂಲಕ ಮಠಕ್ಕೆ ಆಗಮಿಸಿದರು.ನಂತರ, ಕ್ಷೇತ್ರದಲ್ಲಿ ಪರಶಿವನು ತಪಸ್ಸು ಮಾಡಿದ ಸ್ಥಳಕ್ಕೆ ತೆರಳಿ, ಜ್ವಾಲಾಪೀಠಕ್ಕೆ (ಹುರಿಗದ್ದುಗೆ) ನಮಸ್ಕರಿಸಿ, ಕ್ಷೇತ್ರದ ಅಧಿದೇವತೆ ಕಾಲಭೈರವೇಶ್ವರಸ್ವಾಮಿ ದೇಗುಲಕ್ಕೆ ಭೇಟಿ ಕೊಟ್ಟರು. ಈ ವೇಳೆ, ಮಠದ ಪೀಠಾಧ್ಯಕ್ಷ ಡಾ। ನಿರ್ಮಲಾನಂದನಾಥ ಶ್ರೀಗಳು ಮೋದಿ ಅವರ ಹಣೆಗೆ ತಿಲಕವಿಟ್ಟರು. ನಂತರ, ಸ್ವಾಮಿಗೆ ಸ್ವತಃ ಮಂಗಳಾರತಿ ಮಾಡಿ ಪೂಜೆ ಸಲ್ಲಿಸಿದ ಮೋದಿ, ಕ್ಷೇತ್ರದ ಮಾಳಮ್ಮ ಮತ್ತು ಸ್ಥಂಬಾಭಿಕೆ ದೇವಿ ದೇವಾಲಯಗಳಿಗೆ ಭೇಟಿ ಕೊಟ್ಟು, ಪೂಜೆ ಸಲ್ಲಿಸಿದರು.
ನಂತರ, ನೂತನವಾಗಿ ನಿರ್ಮಿಸಿರುವ ಶ್ರೀಗುರು ಭೈರವೈಕ್ಯ ಮಂದಿರ ಉದ್ಘಾಟಿಸಿ, ಭೈರವೈಕ್ಯ ಶ್ರೀಗಳ ಪಾದುಕೆಗೆ ನಮಸ್ಕರಿಸಿ, ಪುತ್ಥಳಿ ಇರುವ ಭವ್ಯ ಧ್ಯಾನ ಮಂದಿರ ಹಾಗೂ ನೆಲಮಹಡಿಯಲ್ಲಿ ಇರುವ ಗರ್ಭಗುಡಿಯಲ್ಲಿ ಪೂಜೆ ಸಲ್ಲಿಸಿದರು. ಬಳಿಕ, ವೇದಿಕೆ ಸಮಾರಂಭದಲ್ಲಿ ಪಾಲ್ಗೊಂಡರು. ಇದು ಮಧುರ ಮಂಡ್ಯ:
ಮಂಡ್ಯದ ಜನರಿಗೆ ನೀರಿನ ಮಹತ್ವ ಗೊತ್ತಿದೆ. ಸಕ್ಕರೆ ನಗರ, ಮಧುರ ಮಂಡ್ಯ ಎಂದೆಲ್ಲಾ ಕರೆಸಿಕೊಳ್ಳುವ ಈ ಊರಿಗೆ ತಾಯಿ ಕಾವೇರಿಯ ಆಶೀರ್ವಾದವಿದೆ. ಇದು ಕಬ್ಬಿಗರ ನಾಡು. ಇಲ್ಲಿನ ಜನರ ಮಾತುಗಳು ಕಬ್ಬಿನಷ್ಟೇ ಸಿಹಿಯಾಗಿವೆ. ಈ ಪ್ರದೇಶದ ಜನರು ನೀಡಿದ ಸ್ವಾಗತ ನನ್ನ ಹೃದಯವನ್ನು ಗೆದ್ದಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.
ಕರ್ನಾಟಕದಲ್ಲಿ ಎರಡು ಶಕ್ತಿಗಳಿವೆ. ಒಂದು ತತ್ವಜ್ಞಾನ. ಮತ್ತೊಂದು ತಂತ್ರಜ್ಞಾನ. ಈ ಎರಡೂ ಶಕ್ತಿಗಳು ಇಲ್ಲಿ ಸಮೃದ್ಧವಾಗಿವೆ. ಶ್ರೀಕ್ಷೇತ್ರ ಆಧ್ಯಾತ್ಮಿಕ, ನೈತಿಕ ಮೌಲ್ಯ, ತತ್ವಜ್ಞಾನದ ಮೂಲಕ ಸಮಾಜಕ್ಕೆ ಹೊಸ ದಿಕ್ಕನ್ನು ತೋರಿಸುತ್ತಿದೆ. ಬಾಲಗಂಗಾಧರನಾಥ ಸ್ವಾಮೀಜಿ ಮಹಾನ್ ಸಂತರು. ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ನಿರ್ಮಲಾನಂದನಾಥ ಶ್ರೀಗಳು ಸಮರ್ಪಣಾ ಭಾವದಿಂದ ಮಠವನ್ನು ಮುನ್ನಡೆಸುತ್ತಿದ್ದಾರೆ. ಬಾಲಗಂಗಾಧರನಾಥ ಶ್ರೀಗಳು ವಿಭೂತಿಪುರುಷರು. ಅವರ ಶರೀರ ನಮ್ಮೊಂದಿಗೆ ಇಲ್ಲವಾದರೂ ಅವರ ಆಧ್ಯಾತ್ಮಶಕ್ತಿ ಮತ್ತು ಸಾಧನೆ ನಮ್ಮ ಜೊತೆ ಶಾಶ್ವತವಾಗಿದೆ ಎಂದು ಹೇಳಿದರು.ಭೈರವೈಕ್ಯ ಮಂದಿರ ಕೇವಲ ಕಟ್ಟಡವಲ್ಲ. ಅದೊಂದು ಆಧ್ಯಾತ್ಮ ಭಾವನೆಗಳ ಸಾಕಾರ. ಸೇವೆ, ಸಾಧನೆ, ಪ್ರೇರಣೆಯ ಕೇಂದ್ರ. ಅದನ್ನು ಉದ್ಘಾಟಿಸುವ ಅವಕಾಶ ದೊರಕಿದ್ದು ನನ್ನ ಸೌಭಾಗ್ಯ ಎಂದು ಹರ್ಷ ವ್ಯಕ್ತಪಡಿಸಿದರು.ಮುದ್ದೆ ಪ್ರಸಿದ್ಧಿ ಆಗಲು
ದೇವೇಗೌಡರು ಕಾರಣಇಲ್ಲಿನ ರಾಗಿಮುದ್ದೆ ಜನಪ್ರಿಯತೆ ಪಡೆಯುವುದಕ್ಕೆ ದೇವೇಗೌಡರು ಕಾರಣ. ಆಹಾರದಲ್ಲಿ ಸಿರಿಧಾನ್ಯ ಮತ್ತು ರಾಗಿಯನ್ನು ಬಳಸುವುದರಿಂದ ಬೊಜ್ಜು ಬರುವುದಿಲ್ಲ. ಸದೃಢ ದೇಹವಿದ್ದಾಗ ಸದೃಢ ಮನಸ್ಸು ಇರುತ್ತದೆ. ಉತ್ತಮ ಆರೋಗ್ಯದಿಂದ ಆರೋಗ್ಯವಂತ ದೇಶ ನಿರ್ಮಾಣವಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ಬೆಳ್ಳಿ ನವಿಲಿನ ವಿಗ್ರಹ ಉಡುಗೊರೆವೇದಿಕೆ ಕಾರ್ಯಕ್ರಮದಲ್ಲಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರು ಮಠದ ಸಂಪ್ರದಾಯದಂತೆ ಮೋದಿ ಅವರಿಗೆ ರೇಷ್ಮೆ ಶಾಲು, ಹಾರ ಹಾಕಿ, ನವಿಲಿನ ಬೆಳ್ಳಿ ವಿಗ್ರಹವನ್ನು ಉಡುಗೊರೆಯಾಗಿ ನೀಡಿ ಗೌರವಿಸಿದರು. ತಮ್ಮ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿದ ಮೋದಿ, ನವಿಲು ನಮ್ಮ ರಾಷ್ಟ್ರಪಕ್ಷಿ. ನನ್ನ ಮನೆಯಲ್ಲೂ ನವಿಲುಗಳಿವೆ. ನನ್ನ ಮತ್ತು ಅವುಗಳ ನಡುವೆ ಒಳ್ಳೆಯ ಗೆಳೆತನವಿದೆ. ಅವುಗಳು ಶಾಂತಿ ಮತ್ತು ಸೌಂದರ್ಯದ ಸಂಕೇತ. ಭೈರವೈಕ್ಯ ಶ್ರೀಗಳು ಕೇವಲ ಜನರಿಗಷ್ಟೇ ಅಲ್ಲ, ನವಿಲುಗಳಿಗೂ ಕರುಣೆ ತೋರಿದ್ದಾರೆ. ಹೀಗಾಗಿ, ನಿರ್ಮಲಾನಂದನಾಥ ಸ್ವಾಮೀಜಿ ಅವರು ನನಗೆ ನವಿಲನ್ನು ನೆನಪಿನ ಕಾಣಿಕೆಯಾಗಿ ನೀಡಿದ್ದಾರೆ ಎಂದು ಸ್ಮರಿಸಿದರು.
ಇದೇ ವೇಳೆ, ವೇದಿಕೆಯಲ್ಲಿ ಮೋದಿ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸೌಂದರ್ಯ ಲಹರಿ ಮತ್ತು ಶಿವಮಹಿಮ್ನಾ ಸ್ತೋತ್ರಂ ಎಂಬ ಧಾರ್ಮಿಕ ಗ್ರಂಥಗಳನ್ನು ಬಿಡುಗಡೆ ಮಾಡಿದರು.ದೇವೇಗೌಡರಿಗೆ ಹಸ್ತಲಾಘವ:ವೇದಿಕೆ ಸಮಾರಂಭದಲ್ಲಿ ತಾವು ಕುಳಿತ ಆಸನದಿಂದ ಭಾಷಣಕ್ಕೆ ತೆರಳುವ ಮುನ್ನ ಮೋದಿಯವರು ಮತ್ತೊಮ್ಮೆ ದೇವೇಗೌಡರಿಗೆ ಹಸ್ತಲಾಘವ ಮಾಡಿ, ಕೆಲಕಾಲ ಅವರ ಜೊತೆ ಮಾತುಕತೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಯಿತು.
ಕನ್ನಡದಲ್ಲಿ ಮಾತು:ವೇದಿಕೆ ಕಾರ್ಯಕ್ರಮದಲ್ಲಿ ಮೋದಿಯವರು ಕನ್ನಡದಲ್ಲೇ ಭಾಷಣ ಆರಂಭಿಸಿದರು. ಕರ್ನಾಟಕದ ಸಹೋದರ-ಸಹೋದರಿಯರಿಗೆ ನನ್ನ ನಮಸ್ಕಾರಗಳು ಎಂದು ಅವರು ಭಾಷಣ ಆರಂಭಿಸುತ್ತಿದ್ದಂತೆ ನೆರೆದ ಸಭಿಕರಿಂದ ಮೋದಿ, ಮೋದಿ ಎಂಬ ಜಯಘೋಷ ಕೇಳಿ ಬಂತು.
