ಸಾರಾಂಶ
ದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಬಡತನ, ನಿರುದ್ಯೋಗ, ನಿರಕ್ಷರತೆಯ ಸಮಸ್ಯೆಯನ್ನು ಪರಿಹರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.
ಹಳಿಯಾಳ: ಕಳೆದ ಎರಡು ಲೋಕಸಭಾ ಚುನಾವಣಾ ಸಂದರ್ಭದಲ್ಲಿ ದೇಶದ ಪ್ರಜೆಗಳಿಗೆ ನೀಡಿದ ವಾಗ್ದಾನವನ್ನು ಉಳಿಸಿಕೊಳ್ಳಲು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರಿ ಉಳಿಸಿಕೊಂಡಿಲ್ಲ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ವಾಗ್ದಾಳಿ ಮಾಡಿದರು.ಶನಿವಾರ ಸಂಜೆ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ ಬೆಂಬಲಾರ್ಥ ಆಯೋಜಿಸಿದ್ದ ರೋಡ್ ಶೋ ಆನಂತರ ನಡೆದ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು.ದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಬಡತನ, ನಿರುದ್ಯೋಗ, ನಿರಕ್ಷರತೆಯ ಸಮಸ್ಯೆಯನ್ನು ಪರಿಹರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.
ದೇಶದ ಪ್ರಗತಿ ಆಗಬೇಕಾದರೆ ಎಲ್ಲ ಸಮುದಾಯದವರು, ಧರ್ಮದವರು ಪ್ರೀತಿ, ವಿಶ್ವಾಸದಿಂದ, ಸೌಹಾರ್ದದಿಂದ ಇರಬೇಕಾಗಿದೆ. ಆದರೆ ಅಂತಹ ಸ್ಥಿತಿ ದೇಶದಲ್ಲಿ ಎಲ್ಲಿಯೂ ಕಂಡು ಬರುತ್ತಿಲ್ಲ. ಬಿಜೆಪಿ ಕಾರ್ಯಕರ್ತರ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಹಬ್ಬಿಸಿ ಹಿಂದೂ ಮುಸ್ಲಿಮರಲ್ಲಿ, ಅಲ್ಪಸಂಖ್ಯಾತರಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳನ್ನು ತರುವಂತಹ ಕುಕೃತ್ಯವನ್ನು ಮಾಡುತ್ತಿದ್ದು, ಇದು ಸರಿಯಲ್ಲ. ಚುನಾವಣೆ ಬರುತ್ತದೆ, ಹೋಗುತ್ತದೆ. ಆದರೆ ಶಾಂತಿ ಸೌಹಾರ್ದ ಬಹಳ ಮಹತ್ವದ್ದು ಎಂದರು.ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ಸ್ಥಾನಮಾನವನ್ನು ನೀಡಿದ್ದು ಕಾಂಗ್ರೆಸ್. ಹಾಗೆಯೇ ಮೋದಿ ಮೋದಿ, ಬಿಜೆಪಿ ಕಿ ಜೈ ಎಂದು ಕೂಗುವ ಈ ಯುವಸಮೂಹಕ್ಕೆ ಮತದಾನದ ಹಕ್ಕನ್ನು ನೀಡಿದ್ದು ಸಹ ಕಾಂಗ್ರೆಸ್ ಎಂಬ ಸತ್ಯವನ್ನು ನಮ್ಮ ಯುವ ಸ್ನೇಹಿತರು ಮರೆಯಬಾರದು. ಇಂದು ಯುವಪೀಳಿಗೆಯು ಬಿಜೆಪಿಯ ಭ್ರಮಾಲೋಕದಲ್ಲಿ ತೇಲುತ್ತ ವಾಸ್ತವವನ್ನೇ ಮರೆತಿದೆ ಎಂದರು.ಭವ್ಯ ರೋಡ್ ಶೋ: ಪಟ್ಟಣದ ಶಿವಾಜಿ ವೃತ್ತದಿಂದ ಅರ್ಬನ್ ಬ್ಯಾಂಕ್ ವರೆಗೆ ಮುಖ್ಯ ಬೀದಿಯಲ್ಲಿ ಕಾಂಗ್ರೆಸ್ ರೋಡ್ ಶೋ ನಡೆಯಿತು. ರೋಡ್ ಶೋ ಉದ್ದಕ್ಕೂ ಪಟ್ಟಣವಾಸಿಗಳಿಂದ ಭಾರಿ ಬೆಂಬಲ ದೊರಕಿತು. ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.