ಸಾರಾಂಶ
ಕಾರವಾರ: ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಮೋದಿ ಅವರು ಎಕ್ಸ್‌ನಲ್ಲಿ ಸಂತಾಪ ಸೂಚಿಸಿ ಪೋಸ್ಟ್ ಮಾಡಿದ್ದಾರೆ. ಕರ್ನಾಟಕದ ಪರಿಸರವಾದಿ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ತುಳಸಿ ಗೌಡ ಅವರ ನಿಧನ ತೀವ್ರ ದುಃಖ ತಂದಿದೆ. ಅವರು ತಮ್ಮ ಇಡೀ ಬದುಕನ್ನು ಪ್ರಕೃತಿ ಪೋಷಣೆಗಾಗಿ ಮುಡಿಪಾಗಿಟ್ಟು, ಸಾವಿರಾರು ಗಿಡಗಳನ್ನು ನೆಟ್ಟು ಬೆಳೆಸಿ ನಮ್ಮ ಪರಿಸರವನ್ನು ಸಂರಕ್ಷಿಸಿದರು. ಪರಿಸರ ರಕ್ಷಣೆಗೆ ಸದಾ ಮಾರ್ಗದರ್ಶನ ನೀಡುವ ಬೆಳಕಾಗಿ ಅವರು ಉಳಿಯುತ್ತಾರೆ. ಅವರ ಕೆಲಸಗಳು ನಮ್ಮ ಭೂಗ್ರಹವನ್ನು ರಕ್ಷಿಸಲು ತಲೆಮಾರುಗಳಿಗೆ ಪ್ರೇರಣೆ ನೀಡುತ್ತಿರುತ್ತವೆ ಎಂದಿದ್ದಾರೆ.
ತುಳಸಿ ಪದ್ಮಶ್ರೀ ಪ್ರಶಸ್ತಿ ಸ್ವೀಕಾರಕ್ಕೆ ಮುನ್ನ ಮೋದಿ ಅವರಿಗೆ ನಮಸ್ಕರಿಸಿದ್ದರು. ಮೋದಿ ಅಂಕೋಲಾಕ್ಕೆ ಬಂದ ಸಂದರ್ಭದಲ್ಲೂ ಕೈಮುಗಿದ ಮೋದಿ ಅವರ ತಲೆ ಸ್ಪರ್ಶಿಸಿ ತುಳಸಿ ಆಶೀರ್ವಾದ ಮಾಡಿದ್ದರು.ವೃಕ್ಷಮಾತೆಗೆ ವಿಧಾನಪರಿಷತ್‌ನಲ್ಲಿ ಸಂತಾಪ ಸೂಚನೆಯ ನಿರ್ಣಯ
ಕಾರವಾರ: ಪದ್ಮಶ್ರೀ ಪುರಸ್ಕೃತೆ, ವೃಕ್ಷಮಾತೆ ತುಳಸಿಗೌಡ ಅವರ ನಿಧನಕ್ಕೆ ವಿಧಾನಪರಿಷತ್‌ನಲ್ಲಿ ಮಂಗಳವಾರ ಸಂತಾಪ ಸೂಚಿಸಲಾಯಿತು.ಸಭಾಪತಿ ಬಸವರಾಜ ಹೊರಟ್ಟಿ, ತುಳಸಿಗೌಡ ಅವರ ನಿಧನರಾದ ವಿಷಯವನ್ನು ಸದನಕ್ಕೆ ತಿಳಿಸಿ ಸಂತಾಪ ಸೂಚನೆಯ ನಿರ್ಣಯವನ್ನು ಮಂಡಿಸಿದರು.ಅವರ ನಿಧನದಿಂದಾಗಿ ರಾಜ್ಯ ಹಾಗೂ ರಾಷ್ಟ್ರವು ಒಬ್ಬ ಶ್ರೇಷ್ಠ ಪರಿಸರ ವೃಕ್ಷಮಾತೆಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಸಭಾಪತಿ ಅವರು ಸಂತಾಪ ಸೂಚನೆಯ ನಿರ್ಣಯವನ್ನು ಸದನಕ್ಕೆ ತಿಳಿಸಿದರು.ಸಭಾನಾಯಕ ಮತ್ತು ಸಚಿವ ಎನ್.ಎಸ್. ಬೋಸರಾಜು ಹಾಗೂ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸಂತಾಪ ಸೂಚನಾ ನಿರ್ಣಯದ ಮೇಲೆ ಮಾತನಾಡಿದರು. ಮೃತರ ಗೌರವಾರ್ಥ ಸದಸ್ಯರು ಎದ್ದು ನಿಂತು ಒಂದು ನಿಮಿಷ ಮೌನ ಆಚರಿಸಿ ಸಂತಾಪ ಸಲ್ಲಿಸಿದರು.
ದೇಶಪಾಂಡೆ ಶೋಕಹಳಿಯಾಳ: ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಜಿಲ್ಲೆಗೆ ಮಾತ್ರವಲ್ಲ, ರಾಜ್ಯಕ್ಕೆ ಆದರ್ಶರಾಗಿದ್ದರು. ಅವರ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಕಂಬನಿ ಮಿಡಿದಿದ್ದಾರೆ.ತುಳಸಿ ಗೌಡ ಅವರ ನಿಧನದಿಂದ ವ್ಯಕ್ತಿಗತವಾಗಿ ನೋವಾಗಿದೆ. ಅಲ್ಲದೇ ರಾಜ್ಯಕ್ಕೆ ದೊಡ್ಡ ಹಾನಿಯಾಗಿದೆ. ಅರಣ್ಯ ಇಲಾಖೆಯಲ್ಲಿ ಸಸಿಗಳ ಪೋಷಣೆ ಮಾಡುವ ಕೆಲಸಕ್ಕೆ ಸೇರಿ ಲಕ್ಷಕ್ಕೂ ಅಧಿಕ ಗಿಡಗಳನ್ನು ಬೆಳೆಸಿ ಪರಿಸರ ಸಂರಕ್ಷಣೆಗೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಅಲ್ಲದೇ ದೇಶದ ಪ್ರತಿಷ್ಠಿತ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಗೆ ಅವರು ಭಾಜನರಾಗುವ ಮೂಲಕ ಇಡೀ ಜಿಲ್ಲೆಗೆ ಕೀರ್ತಿ ತಂದಿದ್ದರು. ಅವರ ಕುಟುಂಬಕ್ಕೆ ದುಃಖ ಮರೆಸುವ ಶಕ್ತಿ ದೇವರು ನೀಡಲೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.