ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಅನಿವಾರ್ಯ

| Published : Mar 23 2024, 01:08 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಅನಿವಾರ್ಯವಾಗಿದ್ದಾರೆ. ಮೂರನೇ ಬಾರಿಗೆ ಪ್ರಧಾನಿ ಮಾಡಲು ದೇಶದ ಜನತೆ ಕಾತರರಾಗಿದ್ದಾರೆ ಎಂದು ಬಿಜೆಪಿ ಲೋಕಸಭೆ ಅಭ್ಯರ್ಥಿ ಎಸ್‌.ಬಾಲರಾಜು ಹೇಳಿದರು.

ಕನ್ನಡಪ್ರಭ ವಾರ್ತೆ ಹನೂರು

ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಅನಿವಾರ್ಯವಾಗಿದ್ದಾರೆ. ಮೂರನೇ ಬಾರಿಗೆ ಪ್ರಧಾನಿ ಮಾಡಲು ದೇಶದ ಜನತೆ ಕಾತರರಾಗಿದ್ದಾರೆ ಎಂದು ಬಿಜೆಪಿ ಲೋಕಸಭೆ ಅಭ್ಯರ್ಥಿ ಎಸ್‌.ಬಾಲರಾಜು ಹೇಳಿದರು.

ಪಟ್ಟಣದ ಶ್ರೀ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ಹನೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಏರ್ಪಡಿಸಲಾಗಿದ್ದ ಚಾಮರಾಜನಗರ ಲೋಕಾಸಭಾ ಚುನಾವಣೆ 2024 ರ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ನನ್ನ ಆಯ್ಕೆ ಸಂದರ್ಭದಲ್ಲಿ ಚಾಮರಾಜನಗರ ಕ್ಷೇತ್ರದ ಎಲ್ಲ ಮುಖಂಡರು ಒಪ್ಪಿಗೆ ಸೂಚಿಸಿದ್ದಾರೆ. ಮುಖ್ಯವಾಗಿ ಯಡಿಯೂರಪ್ಪರನ್ನು ಸ್ಮರಿಸುತ್ತೇನೆ.

ನನಗೆ ಕಾಂಗ್ರೆಸ್‌ನಿಂದ ಅನ್ಯಾಯವಾಗಿದೆ. ಅಲ್ಲಿ ಜೀತ ಮಾಡಿದ್ದು ಸಾಕಾಗಿ ಬಿಜೆಪಿಗೆ ಬಂದೆ. ನನ್ನ ಗುರು ಎಂ. ರಾಜಶೇಖರ ಮೂರ್ತಿ ನನ್ನನ್ನು ಶಾಸಕನಾಗಿ ಮಾಡಿದವರು ಮತ್ತು ಕ್ಷೇತ್ರಕ್ಕೆ ಬಹುಪಾಲು ಅನುದಾನ ನೀಡಿದವರು. ಬಿಜೆಪಿ ನನ್ನ ಕೈ ಹಿಡಿದೇ ಹಿಡಿಯುತ್ತದೆ ಎಂಬ ವಿಶ್ವಾಸದಿಂದ ಬಿಜೆಪಿಗೆ ಬಂದೆ. ಬಿಜೆಪಿ ಕಾರ್ಯಕರ್ತರು ಯೋಧರಿದ್ದಂತೆ. ಕ್ಷೇತ್ರದ ಜನತೆ ನನ್ನನ್ನು ಆಶೀರ್ವದಿಸಬೇಕು. ನಿಮ್ಮ ಮತಗಳ ಜೊತೆಗೆ ನಿಮ್ಮ ನೆರೆಹೊರೆಯವರಿಂದಲೂ ನನಗೆ ಮತ ಕೊಡಿಸಿ ಎಂದರು.ಭಾವುಕರಾಗಿ ಕಣ್ಣೀರಿಟ್ಟ ಬಾಲರಾಜು:ಜನದ್ವನಿ ವೆಂಕಟೇಶ್ ಅವರ ಒತ್ತಾಯದ ಮೇರೆಗೆ ಜೀವನ ಗೀತೆಯನ್ನು ಹಾಡುವಾಗ ಕಣ್ಣಿರಿಟ್ಟ ಪ್ರಸಂಗ ಜರುಗಿತು. ಬಿಜೆಪಿ ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್ ಮಾತನಾಡಿ, ಬಾಲರಾಜು ಉತ್ತಮ ಅಭ್ಯರ್ಥಿ. ಒಳ್ಳೆಯ ಕೆಲಸಗಾರರು. ಕಾಂಗ್ರೆಸ್ ಒಳ್ಳೆಯ ನಾಯಕನನ್ನು ಕಳೆದುಕೊಂಡೆವಲ್ಲ ಎಂದು ಪಶ್ಚಾತಾಪ ಪಡುತ್ತಿದ್ದಾರೆ. ಸಿದ್ದರಾಮಯ್ಯ ಬರಪರಿಹಾರ ಕೊಡುತ್ತೇವೆ ಎಂದರೂ ಇನ್ನೂ ಕೊಟ್ಟಿಲ್ಲ. ಗ್ಯಾರಂಟಿ ಯೋಜನೆ ವಿಫಲವಾಗಿದೆ. ದಲಿತರ ಹಣವನ್ನು ಬೇರೆಯ ಕಾರ್ಯಕ್ರಮಗಳಿಗೆ ಬಳಸಿಕೊಂಡಿದೆ. ಇದು ದಲಿತ ವಿರೋಧಿ ಸರ್ಕಾರವಾಗಿದ್ದು, ಯುವಕರಿಗೂ ವಂಚಿಸಿದ ಸರ್ಕಾರ ಎಂದು ಟೀಕಿಸಿದರು.ಹಿಂದುಳಿದ ವರ್ಗಗಳ ಜನಧ್ವನಿ ವೆಂಕಟೇಶ್‌ ರಾಜಕೀಯದ ಮೂಲಕ ಸತತ ಜನಸೇವೆ ಮಾಡಿಕೊಂಡು ಬಂದಿರುವ ಅಪರೂಪದ ನಾಯಕ. ಅಧಿಕಾರವಿಲ್ಲದೇ ನಾವೆಲ್ಲಾ ತಬ್ಬಲಿಗಳಾಗಿದ್ದೇವೆ. ಈ ಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಬಾಲರಾಜು ಗೆದ್ದೆ ಗೆಲ್ಲುತ್ತಾರೆ. ಕಾರ್ಯಕರ್ತರು ಬೂತ್ ಮಟ್ಟದಿಂದ ಹೆಚ್ಚಿನ ಮತವನ್ನು ದೊರೆಯುವಂತೆ ಶ್ರಮಿಸಬೇಕು ಎಂದರು.ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಚುನಾವಣೆ ಉಸ್ತುವಾರಿ ಫಣೇಶ್, ಜಿಲ್ಲಾ ಸಂಚಾಲಕ ಪ್ರೊ. ಕೆ.ಆರ್‌. ಮಲ್ಲಿಕಾರ್ಜುನಪ್ಪ, ರಾಷ್ಟ್ರೀಯ ಪರಿಷತ್ ಸದಸ್ಯ ಬೂದುಬಾಳು ವೆಂಕಟಸ್ವಾಮಿ, ದತ್ತೆಶ್ ಕುಮಾರ್ ಡಾ.ಪ್ರೀತನ್ ನಾಗಪ್ಪ, ಮಲೆ ಮಹದೇಶ್ವರ ಬೆಟ್ಟ ಮಂಡಲದ ಅಧ್ಯಕ್ಷ ಚಂಗವಾಡಿ ರಾಜು ಕಾರ್ಯಕರ್ತರು ಉಪಸ್ಥಿತರಿದ್ದರು.