ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರವು 12 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಸಿದ್ದಕಟ್ಟೆ ಸಮೀಪದ ಶ್ರೀ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಹೂವಿನ ಪೂಜೆ ಹಾಗೂ ಸಾರ್ವತ್ರಿಕ ಪ್ರಾರ್ಥನೆ ನಡೆಯಿತು.

ದೇವಸ್ಥಾನದ ಅರ್ಚಕ ಕೃಷ್ಣ ಪ್ರಸಾದ್ ಅಸ್ರಣ್ಣ ಅವರು ವಿಶೇಷ ಪೂಜೆಯನ್ನು ನೆರವೇರಿಸಿ, ದೇಶದ ಮೇಲೆ ಎದುರಾಗುವ ಎಲ್ಲ ಆಪತ್ತುಗಳು ನಿವಾರಣೆಯಾಗಲಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ರಾಜಕೀಯ ಯಶಸ್ಸು ಲಭಿಸಲಿ ಎಂದು ಪ್ರಾರ್ಥಿಸಿದರು. ಜೊತೆಗೆ ಭಾರತವು ವಿಶ್ವಗುರುವಾಗಿ ಬೆಳೆಯುವ ಮೂಲಕ ದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಆರ್ಥಿಕ ಅಭಿವೃದ್ಧಿ ಇನ್ನಷ್ಟು ವೃದ್ಧಿಯಾಗಲಿ ಎಂದು ವಿಶೇಷ ಸಂಕಲ್ಪ ಮಾಡಲಾಯಿತು.

ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಪ್ರಭಾಕರ ಎಚ್. ಹುಲಿಮೇರು, ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ರಾಜೇಶ್ ಶೆಟ್ಟಿ ಕೊನೆರಬೆಟ್ಟು ಹಾಗೂ ದಿನೇಶ್ ಪೂಜಾರಿ ಹುಲಿಮೇರು, ಬಿಜೆಪಿ ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಆಶಾ ಎಸ್. ಶೆಟ್ಟಿ, ಆರಂಬೋಡಿ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಸುರೇಂದ್ರ ಶೆಟ್ಟಿ ಅಜ್ಜಾಡಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ನರೇಂದ್ರ ಮೋದಿ ಅಭಿಮಾನಿಗಳು ಇದ್ದರು.