ಪ್ರಧಾನಮಂತ್ರಿ 15 ಅಂಶದ ಕಾರ್ಯಕ್ರಮ ಪ್ರಗತಿ ಸಾಧಿಸಿ: ಜಿಲ್ಲಾಧಿಕಾರಿ ಸೂಚನೆ

| Published : Nov 29 2024, 01:01 AM IST

ಪ್ರಧಾನಮಂತ್ರಿ 15 ಅಂಶದ ಕಾರ್ಯಕ್ರಮ ಪ್ರಗತಿ ಸಾಧಿಸಿ: ಜಿಲ್ಲಾಧಿಕಾರಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಲ್ಪಸಂಖ್ಯಾತರ ಸಮುದಾಯಕ್ಕಾಗಿ ಜಾರಿಗೊಳಿಸಲಾಗಿರುವ ಪ್ರಧಾನಮಂತ್ರಿ 15 ಅಂಶದ ಕಾರ್ಯಕ್ರಮಗಳ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವಿವಿಧ ಇಲಾಖೆಗಳಡಿ ಅಲ್ಪಸಂಖ್ಯಾತರಿಗಾಗಿ ಇರುವ ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸುವಂತೆ ನಿರ್ದೇಶನ ನೀಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅಲ್ಪಸಂಖ್ಯಾತರ ಸಮುದಾಯಕ್ಕಾಗಿ ಜಾರಿಗೊಳಿಸಲಾಗಿರುವ ಪ್ರಧಾನಮಂತ್ರಿ 15 ಅಂಶದ ಕಾರ್ಯಕ್ರಮಗಳ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವಿವಿಧ ಇಲಾಖೆಗಳಡಿ ಅಲ್ಪಸಂಖ್ಯಾತರಿಗಾಗಿ ಇರುವ ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸುವಂತೆ ನಿರ್ದೇಶನ ನೀಡಿದರು.

ಶೈಕ್ಷಣಿಕ ಸೌಲಭ್ಯ ಕಲ್ಪಿಸುವುದು, ತಂತ್ರಜ್ಞಾನ ತರಬೇತಿ ಮೂಲಕ ಕೌಶಲ್ಯ ಕಾರ್ಯಕ್ರಮ ತಲುಪಿಸುವುದು, ಆರ್ಥಿಕ ಚಟುವಟಿಕೆ ಬಲಪಡಿಸಲು ಸಾಲ ಸೌಲಭ್ಯ ಕಲ್ಪಿಸುವುದು, ನಾಗರಿಕ ಸೇವೆಗಳ ಬಗ್ಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು, ವಸತಿ ಯೋಜನೆ, ಅಲ್ಪಸಂಖ್ಯಾತರ ಜೀವನ ಮಟ್ಟ ಸುಧಾರಿಸಲು ವಸತಿ ಯೋಜನೆ ಕಲ್ಪಿಸುವುದು, ಹೀಗೆ ಹಲವು ಕಾರ್ಯಕ್ರಮಗಳನ್ನು ಅಲ್ಪಸಂಖ್ಯಾತರಿಗೆ ತಲುಪಿಸುವಂತೆ ನಿರ್ದೇಶನ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜು ಮಾಹಿತಿ ನೀಡಿ, ಇಲಾಖೆಯಿಂದ ಪೂರಕ ಪೌಷ್ಟಿಕ ಆಹಾರ ಕಲ್ಪಿಸುವುದು, ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ತಲುಪಿಸುವುದು ಸೇರಿದಂತೆ ಹಲವು ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ರಂಗಧಾಮಪ್ಪ ಮಾತನಾಡಿ, ಶಾಲೆಗಳಲ್ಲಿ ಸಮವಸ್ತ್ರ, ಉಚಿತ ಪಠ್ಯಪುಸ್ತಕ ವಿತರಣೆ, ವಿದ್ಯಾರ್ಥಿ ವೇತನ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್ ಮಾಹಿತಿ ನೀಡಿ, ಕೃಷಿ ಇಲಾಖೆ ಸೂಕ್ಷ್ಮ ನೀರಾವರಿ, ಕೃಷಿ ಯಾಂತ್ರೀಕರಣ, ಬಿತ್ತನೆ ಬೀಜ ವಿತರಣೆ ಹೀಗೆ ಹಲವು ಕಾರ್ಯಕ್ರಮ ತಲುಪಿಸಲಾಗುತ್ತಿದೆ ಎಂದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಮುತ್ತಪ್ಪ ಅವರು ಮಾತನಾಡಿ ಇಲಾಖೆಯಿಂದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಜೇನು ಸಾಕಾಣಿಕೆ, ರಾಷ್ಟ್ರೀಯ ಖಾದ್ಯತೈಲ ಅಭಿಯಾನದಡಿ ತಾಳೆಬೆಳೆ ಯೋಜನೆ ಅನುಷ್ಠಾನ ಸಹಾಯಧನ ಹೀಗೆ ಹಲವು ಯೋಜನೆ ತಲುಪಿಸಲಾಗುತ್ತಿದೆ ಎಂದರು.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಆರ್.ಕೃಷ್ಣಮೂರ್ತಿ ಮಾಹಿತಿ ನೀಡಿ, ಶ್ರಮಶಕ್ತಿ, ಸ್ವಾವಲಂಬಿ ಸಾರಥಿ, ವೃತ್ತಿ ಪ್ರೋತ್ಸಾಹ, ಅರಿವು, ನೇರಸಾಲ ಯೋಜನೆ, ಉನ್ನತ ಶಿಕ್ಷಣಕ್ಕೆ ಸಾಲ ಯೋಜನೆ ಹೀಗೆ ಹಲವು ಯೋಜನೆ ತಲುಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಬಿ.ಬಸಪ್ಪ ಅವರು ಸ್ಥಳೀಯ ಪಟ್ಟಣ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಶಸ್ತ್ರಚಿಕಿತ್ಸೆಗೆ ಸಹಾಯಧನ, ವೈದ್ಯಕೀಯ ಧನ, ಲಘು ವಾಹನ ಚಾಲನಾ ತರಬೇತಿ, ಇತರ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ ಎಂದರು.

ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಸಚಿನ್ ಮೀನುಗಾರಿಕೆ ಸಲಕರಣೆ ವಿತರಣೆ, ಮತ್ಸ್ಯಸಂಪದ ಯೋಜನೆ ಸಹಾಯಧನ ಇತರ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದರು.

ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಧನರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಲಿಂಗರಾಜು ದೊಡ್ಡಮನಿ, ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪ ನಿರ್ದೇಶಕ ರಘು, ಉದ್ಯೋಗ ವಿನಿಮಯಾಧಿಕಾರಿ ರೇಖಾ, ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ ಇದ್ದರು.