ಸಾರಾಂಶ
ಮೊದಲು ನಾವು ನಮ್ಮ ನೆರೆ ಹೊರೆಯವರೊಂದಿಗೆ ಚೆನ್ನಾಗಿರಬೇಕಾಗುತ್ತದೆ. ಅವರಾಗೇ ಕಾಲು ಕೆದರಿ ಜಗಳಕ್ಕೆ ಬಂದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕನ್ನಡಪ್ರಭ ವಾರ್ತೆ ಕಲಬುರಗಿ
ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಎಲ್ಲವನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲು ನಾವು ನೆರೆಹೊರೆಯವರನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಕೆಟ್ಟ ಪರಿಸ್ಥಿತಿ ಬಂದಾಗ ನಾವು ಹೋರಾಟಕ್ಕೂ ಸಿದ್ಧವಾಗಿರಬೇಕಾಗುತ್ತದೆ. ಮೊದಲು ನೆರೆಹೊರೆಯವರನ್ನು ಚೆನ್ನಾಗಿ ಇಟ್ಟುಕೊಳ್ಳಲೇಬೇಕು ಎಂದು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.ಒಂದು ದಿನದ ಮಟ್ಟಿಗೆ ಕಲಬುರಗಿ ಪ್ರವಾಸದಲ್ಲಿರುವ ಡಾ.ಖರ್ಗೆ ಮಂಗಳವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚಿಗೆ ಮಾಲ್ಡೀವ್ಸ್ ಜೊತೆಗಿನ ಭಾರತದ ರಾಜತಾಂತ್ರಿಕ ಸಂಬಂಧಗಳಲ್ಲಿನ ಹೊಸ ಬೆಳವಣಿಗೆಗಳ ಹಿನ್ನೆಲೆ ಸುದ್ದಿಗಾರರ ಗಮನ ಸೆಳೆಯುವ ಪ್ರಶ್ನೆಗೆ ಡಾ. ಖರ್ಗೆ ಮೇಲಿನಂತೆ ಪ್ರತಿಕ್ರಿಯಿಸಿದರು.
ನಾವು ಪ್ರಸಂಗ ಬಂದಾಗ ದೇಶಕ್ಕಾಗಿ ಹೋರಾಟ ಕೂಡಾ ಮಾಡಬೇಕಾಗುತ್ತದೆ. ಆದರೆ ನೆರೆಹೊರೆಯವರೊಂದಿಗೆ ಜಗಳ ಕಾಯುತ್ತಲೇ ಇರಬೇಕು ಅಂತಲ್ಲ, ಯಾವ ರೀತಿ ಇಂದಿರಾಗಾಂಧಿ ಹೋರಾಟ ಮಾಡಿ ಪಾಕಿಸ್ತಾನ ಬೇರ್ಪಡಿಸಿ ಬಾಂಗ್ಲಾದೇಶ ಸ್ವತಂತ್ರ ಮಾಡಿದರೋ ಆ ರೀತಿ ನಾವು ಹೋರಾಟಕ್ಕೂ ಸಿದ್ಧವಾಗಬೇಕು. ಆದರೆ ಇಂದು ಅಂತಾರಾಷ್ಟ್ರೀಯ ವಿಚಾರದಲ್ಲಿ ಮೋದಿಯವರು ತಮ್ಮ ಮನಸೋ ಇಚ್ಚೆ ವರ್ತಿಸುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.ತಮಗೆ ಬೇಕಾದಾಗ ಯಾರನ್ನೋ ತಬ್ಬಿಕೊಳ್ಳುತ್ತಾರೆ, ಏಕಾಏಕಿ ಹಲವರನ್ನ ತಿರಸ್ಕರಿಸುತ್ತಾರೆ. ಹಲವರನ್ನ ತೆಗಳುತ್ತಾರೆ, ದೂರಕ್ಕೆ ತಳ್ಳಿ ಬಿಡುತ್ತಾರೆಂದು ಮೋದಿಯವರ ವಿದೇಶಾಂಗ ನೀತಿ ಬಗ್ಗೆ ಡಾ.ಖರ್ಗೆ ತಮ್ಮ ಮಾತಿನಲ್ಲೇ ತಿವಿದರು.
ನೆರೆಮನೆಯವರೊಂದಿಗೆ ಸರಿ ಇರಬೇಕು, ಸರಿ ಹೋಗದೆ ಇದ್ದಾಗ ಮನೆ ಬದಲಾಯಿಸಬಹುದು, ಆದರೆ ದೇಶಕಾಲ ವಿಚಾರದಲ್ಲಿ ಈ ನೀತಿ ಸರಿ ಹೊಂದೋದಿಲ್ಲ. ಇಂಚಿಂಚೂ ಜಾಗಕ್ಕೆ ನಾವು ಪರದಾಡುವಾಗ, ಬೌಗೋಳಿಕವಾಗಿ ಯಾರು, ಏನು? ಎತ್ತ ಎಂಬುದನ್ನು ಮೊದಲು ಅರಿಯಬೇಕಾಗುತ್ತದೆಂದರು.ಇವೆಲ್ಲ ಅಂಶಗಳ ಹಿನ್ನೆಲೆ ದೇಶದ ವಿಚಾರ ಬಂದಾಗ ನೆರೆಯವರನ್ನು ಸುಲಭದಲ್ಲಿ ಬದಲಾಯಿಸಲಾಗದು. ಅವರೊಂದಿಗೆ ಮೊದಲು ಚೆನ್ನಾಗಿರಬೇಕು. ನಾವು ಒಂದಾಗಿ ಹೋಗಬೇಕು. ಅವರಾಗಿಯೇ ಅವರು ನಮ್ಮ ಮೈಮೇಲೆ ಬಂದಾಗ ನಾವು ಸುಮ್ಮನಿರಬಾರದು, ಹೋರಾಟಕ್ಕೂ ಸಿದ್ಧವಾಗಿರಬೇಕಾಗುತ್ತದೆ ಎಂದು ಡಾ. ಖರ್ಗೆ ಹೇಳಿದರು.