ಸಾರಾಂಶ
ಮುಂಡರಗಿ: ಪ್ರತಿ ತಿಂಗಳು ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ.ಸಭೆಯ ಪ್ರಗತಿ ವರದಿ ನೀಡುವಾಗ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಇರುವ ಕಾಮಗಾರಿಗಳ ಬಗ್ಗೆ ಪ್ರಗತಿ ವರದಿ ಸಲ್ಲಿಸುವಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಮಂಗಳವಾರ ಸಂಜೆ ಪಟ್ಟಣದ ತಾಪಂ ಸಮರ್ಥ ಸೌಧ ಸಭಾಂಗಣದಲ್ಲಿ ಜರುಗಿದ ತಾಲೂಕು ಮಟ್ಟದ ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ.ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಕೃಷಿ ಇಲಾಖೆ ಅಧಿಕಾರಿ ಮಾಹಿತಿ ನೀಡಿ, ಬಿತ್ತನೆ ಬೀಜಗಳ ಪೂರೈಕೆ, ಕೃಷಿ ಯಾಂತ್ರಿಕರಣ, ಕೃಷಿ ಸಂರಕ್ಷಣೆ ಯೋಜನೆ, ಕೃಷಿ ಭಾಗ್ಯ ಯೋಜನೆ, ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆಗಳಡಿ ಎಸ್.ಸಿ.ಎಸ್.ಪಿ ಯಲ್ಲಿ ಒಟ್ಟು ₹74.515 ಬಿಡುಗಡೆ ಆಗಿ ಖರ್ಚು ಕೂಡ ಆಗಿದೆ. ಟಿ.ಎಸ್.ಪಿ ಯಲ್ಲಿ ಒಟ್ಟು 27.22 ಬಿಡುಗಡೆಯಾಗಿದ್ದು ಇದು 100ಕ್ಕೆ 100ರಷ್ಟು ಖರ್ಚಾಗಿದೆ ಎಂದು ವಿವರಿಸಿದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಮಾಹಿತಿ ನೀಡಿ, ಸಿ.ಎಚ್, ಡಿ.ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆ ಮಧುವನ ಮತ್ತು ಜೇನು ಸಾಕಾಣಿಕೆ ಪಿಎಂಕೆಎಸ್ ವೈ ಯೋಜನೆ ಸೂಕ್ಷ್ಮ ನೀರಾವರಿ ಪದ್ಧತಿ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಕೇಂದ್ರ ಪುರಸ್ಕೃತ ಯೋಜನೆಗಳಾದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ, ಪಿಎಂಕೆ ಎಸ್ ವೈ ಯೋಜನೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಕೃಷಿ ಯಾಂತ್ರಿಕ ಯೋಜನೆ, ತಾಳೆ ಬೆಳೆ ಅಭಿವೃದ್ಧಿ ಯೋಜನೆಯಡಿ ಎಸ್.ಸಿ.ಎಸ್.ಪಿ. ಹಾಗೂ ಟಿಎಸ್ಪಿ ಯೋಜನೆ ಅಡಿ ಒಟ್ಟು ₹2.30 ಕೋಟಿ ಬಿಡುಗಡೆ ಆಗಿ ₹2.17 ಕೋಟಿ ಖರ್ಚಾಗಿದೆ.ಅತ್ತಿಕಟ್ಟಿ ಗ್ರಾಮದ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಶಾಲೆಯ ಶೌಚಾಲಯ ಮುಕ್ತಾಯಗೊಳಿಸುವಂತೆ ಸಂಬಂಧಪಟ್ಟ ಅಧಿಕಾಗಳಿಗೆ ಸೂಚಿಸಿ, ಕೆಆರ್ ಐ ಡಿ ಎಲ್ ಅಧಿಕಾರಿಗಳ ಪರ ಬಂದ ಅಧೀನ ಅಧಿಕಾರಿಗಳಿಗೆ ಕಕ್ಕೂರು ತಾಂಡಾದ ಅಂಗನವಾಡಿ ಕಟ್ಟಡದಲ್ಲಿ ಮೂಲಭೂತ ಸೌಕರ್ಯಗಳಾದ ಅಡುಗೆ ಮನೆಯಲ್ಲಿ ಗ್ಯಾಸ್ ಕಟ್ಟೆ ಮಕ್ಕಳ ಸ್ನೇಹಿ ಶೌಚಾಲಯ ನೀರಿನ ವ್ಯವಸ್ಥೆ ಬ್ಲಾಕ್ ಬೋರ್ಡ್, ಪೇಂಟ್ ಇವುಗಳನ್ನು ಮಾಡಿಸಿಕೊಡುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಅರುಣಾ ಸೋರಗಾಂವಿ ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಫಡ್ನೇಶಿ ಮಾತನಾಡಿ, ಆರ್‌ಟಿಇ ಶಾಲೆಯ ಎಸ್ ಸಿಎಸ್‌ಟಿ ಮಕ್ಕಳಿಗಾಗಿ 49 ಸೀಟು ರಿಸರ್ವೇಶನ್ ಇರುತ್ತವೆ ಎಂದು ತಿಳಿಸಿದರು.ಎಸ್‌ಸಿ ಎಸ್‌ಟಿ ಮಕ್ಕಳಿಗಾಗಿ ಸಮವಸ್ತ್ರ ಶೂ ಸಾಕ್ಸ್ ಪುಸ್ತಕಗಳನ್ನು ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಪುರಸಭೆ ಅಧಿಕಾರಿ ಸಭೆಗೆ ಮಾಹಿತಿ ನೀಡುತ್ತಾ, ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ₹23, 333 ಮೊತ್ತವನ್ನು ಒಟ್ಟು ಎಸ್ಸಿ12 ಫಲಾನುಭವಿಗಳಿಗೆ ಹಾಗೂ ಎಸ್ ಟಿ 03 ಫಲಾನುಭವಿಗಳಿಗೆ ವಿತರಿಸಲಾಗಿದೆ. ವಾರ್ಡ್ ನಂ. 4 ಹಾಗೂ 5ನೇ ವಾರ್ಡಿನಲ್ಲಿ ಶೌಚಾಲಯದ ಕುರಿತು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಶ್ನಿಸಿದಾಗ ಅದನ್ನು 25- 26ನೇ ಕ್ರಿಯಾ ಯೋಜನೆಯಲ್ಲಿ ಸೇರಿಸಿಕೊಂಡು ಕಾಮಗಾರಿ ಪೂರ್ಣಗೊಳಿಸಿ ಕೊಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ತಿಳಿಸಿದರು.ಸಭೆಯಲ್ಲಿ ಅನುಮತಿ ಪಡೆಯದೇ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡುವಂತೆ ಸೂಚಿಸಿ ಸಭೆಯಲ್ಲಿ ಹಾಜರಿದ್ದ ಎಲ್ಲ ಅಧಿಕಾರಿಗಳಿಗೆ ಎಸ್.ಸಿ.ಎಸ್.ಪಿ. ಹಾಗೂ ಟಿ.ಎಸ್.ಪಿ.ಯೋಜನೆಯಡಿಯಲ್ಲಿ ಬಿಡುಗಡೆಯಾದ ಅನುದಾನವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರಿಗಾಗಿ ಮಾತ್ರ ಬಳಕೆ ಮಾಡಬೇಕು. ಒಂದು ವೇಳೆ ಬೇರೆ ಕಡೆ ಅನುದಾನ ಬಳಕೆಯಾದ ಬಗ್ಗೆ ದೂರು ಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸೂಚಿಸಿದರು. ಸಭೆಯಲ್ಲಿ ಎಸ್.ಸಿ.ಎಸ್.ಪಿ. ಹಾಗೂ ಟಿ.ಎಸ್.ಪಿ. ಸಂಬಂಧಿಸಿದ ಎಲ್ಲ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.