ಮಂಗಳೂರಿನ ಮೂರು ಯೋಜನೆ ಅನಾವರಣಗೊಳಿಸಿದ ಪ್ರಧಾನಿ

| Published : Feb 29 2024, 02:03 AM IST

ಮಂಗಳೂರಿನ ಮೂರು ಯೋಜನೆ ಅನಾವರಣಗೊಳಿಸಿದ ಪ್ರಧಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದಿಂದ ನವ ಮಂಗಳೂರು ಬಂದರು ಪ್ರಾಧಿಕಾರದ ಅಡಿಯಲ್ಲಿ 136 ಕೋಟಿ ರು. ಮೊತ್ತದ ಮೂರು ಮಹತ್ವದ ಯೋಜನೆಗಳನ್ನು ಇದೇ ಸಂದರ್ಭ ಪ್ರಧಾನಿ ಅನಾವರಣಗೊಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಎನ್‌ಎಂಪಿಎ ವ್ಯಾಪ್ತಿಯ ಮೂರು ಪ್ರಮುಖ ಯೋಜನೆಗಳು ಸೇರಿದಂತೆ 17 ಸಾವಿರ ಕೋಟಿ ರು. ಮೌಲ್ಯದ 36 ಮೂಲಸೌಕರ್ಯ ಯೋಜನೆಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದಾರೆ.

ಕರ್ನಾಟಕದಿಂದ ನವ ಮಂಗಳೂರು ಬಂದರು ಪ್ರಾಧಿಕಾರದ ಅಡಿಯಲ್ಲಿ 136 ಕೋಟಿ ರು. ಮೊತ್ತದ ಮೂರು ಮಹತ್ವದ ಯೋಜನೆಗಳನ್ನು ಇದೇ ಸಂದರ್ಭ ಪ್ರಧಾನಿ ಅನಾವರಣಗೊಳಿಸಿದರು. ಕಾಂಕ್ರೀಟ್ ರಸ್ತೆ: ಬಂದರು ಪ್ರದೇಶದೊಳಗೆ ಟ್ರಕ್‌ಗಳ ಕಾರ್ಯಾಚರಣೆ ಮತ್ತು ಚಲನೆಯನ್ನು ಸುಧಾರಿಸಲು ತಣ್ಣೀರುಬಾವಿ ರಸ್ತೆಯನ್ನು ಟ್ಯಾಂಕ್ ಫಾರ್ಮ್‌ಗಳಿಗೆ ಸಂಪರ್ಕಿಸುವ ರಸ್ತೆಯನ್ನು 5.04 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ಪ್ರಮುಖ ಶೇಖರಣಾ ಘಟಕಗಳಿಗೆ ಸರಕು ಸಾಗಾಟಕ್ಕೆ ಪೂರಕವಾಗಲಿದೆ. ಶೇಖರಣಾ ಶೆಡ್‌: 23.78 ಕೋಟಿ ರು. ಅಂದಾಜು ವೆಚ್ಚದಲ್ಲಿ ಎರಡು ಅತ್ಯಾಧುನಿಕ ಶೇಖರಣಾ ಶೆಡ್‌ಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ಬಂದರಿನ ಉನ್ನತೀಕರಣಕ್ಕೆ ಇದು ಪೂರಕವಾಗಲಿದೆ. ಈ ಶೆಡ್‌ಗಳು 3,500 ಚದರ ಮೀಟರ್‌ ವಿಸ್ತೀರ್ಣದೊಂದಿಗೆ 7 ಸಾವಿರ ಮೆಟ್ರಿಕ್ ಟನ್‌ ಸಂಗ್ರಹಣಾ ಸಾಮರ್ಥ್ಯ ಹೊಂದಿರಲಿವೆ. ಹೆಚ್ಚಿನ ಸರಕು ನಿರ್ವಹಣೆ ಇದರಿಂದ ಸಾಧ್ಯವಾಗಲಿದೆ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಅಭಿವೃದ್ಧಿ: ಬಂದರು ಪ್ರದೇಶದಲ್ಲಿ ಅತ್ಯಾಧುನಿಕ 150 ಹಾಸಿಗೆಗಳ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ 107 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಆಸ್ಪತ್ರೆಯು ಮೂರು ಮಾಡ್ಯುಲರ್ ಆಪರೇಷನ್ ಥಿಯೇಟರ್‌ಗಳು ಮತ್ತು ಒಂದು ಕ್ಯಾಥ್ ಲ್ಯಾಬ್ ಹೊಂದಿರುತ್ತದೆ. ನೆಫ್ರಾಲಜಿ, ನ್ಯೂರಾಲಜಿ, ಕಾರ್ಡಿಯಾಲಜಿ, ನಿಯೋನಾಟಾಲಜಿ ಮುಂತಾದ ವಿವಿಧ ಬಹು ವಿಶೇಷ ಸೇವೆಗಳನ್ನು ಒದಗಿಸಲಿದೆ. ರೋಗಶಾಸ್ತ್ರ, ಫಾರ್ಮಸಿ, ಆಂಬ್ಯುಲೆನ್ಸ್ ಸೇವೆಗಳು ಒಂದೇ ಸೂರಿನಡಿ ದೊರೆಯಲಿವೆ.