ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ದೇಶದ ರೈತರ ಹಿತವನ್ನು ಬಲಿಕೊಟ್ಟು ಅಮೆರಿಕಾದ ಕೃಷಿ ಉತ್ಪನ್ನಗಳನ್ನು ದೇಶಕ್ಕೆ ಮುಕ್ತವಾಗಿ ತೆರಿಗೆ ರಹಿತ ಆಮದು ಮಾಡಿಕೊಳ್ಳಲು ಪ್ರಧಾನಿ ಮೋದಿ ತುದಿಗಾಲಲ್ಲಿ ನಿಂತಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಶಾದಿ ಮಹಲ್‌ನಲ್ಲಿ ತಾಲೂಕು ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಅಮೆರಿಕಾದ ನಾಗರಿಕ ವಿರೋಧಿ ನೀತಿ ವಿರೋಧಿಸಿ ದೇಶದ ರೈತರು ಹೋರಾಟಕ್ಕೆ ಇಳಿಯಬೇಕು ಎಂದು ಕರೆ ನೀಡಿದರು.
ರೈತರ ಭೂಮಿ ಕೈಗಾರಿಕೋದ್ಯಮಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಲು ಹೊರಟಿದ್ದಾರೆ. ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ಕೃಷಿ ಯೋಗ್ಯ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಆಹಾರದ ಬಿಕ್ಕಟ್ಟು ತಲೆದೋರುವ ನಿರೀಕ್ಷೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಎನ್.ಎಲ್.ಭರತ್ ರಾಜ್ ಮಾತನಾಡಿ, ರೈತರು ಬೆಳೆದ ಎಲ್ಲಾ ಬೆಳಗಳಿಗೆ ಡಾ.ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಕೃಷಿ ಉತ್ಪನ್ನಕ್ಕೆ ತಗಲುವ ವೆಚ್ಚದ ಜೊತೆಗೆ ಶೇ.50ರಷ್ಟು ಲಾಭಾಂಶ ಸೇರಿಸಿ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದರು.
60 ವರ್ಷ ದಾಟಿದ ಪ್ರತಿ ರೈತರಿಗೆ ತಿಂಗಳಿಗೆ 500 ಪಿಂಚಣಿ ನೀಡಬೇಕು, ರೈತ ವಿರೋಧಿ ನೀತಿ ಕೈಬಿಡಬೇಕು ಮತ್ತು ನಿವೇಶನ ರೈತರಿಗೆ ಹಕ್ಕುಪತ್ರವನ್ನು ವಿತರಣೆ, ರೈತರ ಸರ್ವಾಂಗಿಣ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡಬೇಕೆಂದು ಆಗ್ರಹಿಸಿದರು.ವೇದಿಕೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಎನ್ ಲಿಂಗರಾಜಮೂರ್ತಿ, ಮದ್ದೂರು ಸಂಘದ ಕಾರ್ಯದರ್ಶಿ ಎಸ್ ವಿಶ್ವನಾಥ್, ಶ್ರೀರಂಗಪಟ್ಟಣದ ಸಂಘದ ಮುಖಂಡರಾದ ಅಬ್ದುಲ್ ಸುಕುರ್, ರೈತ ಮಹಿಳೆಯರ ಉಪಸಮಿತಿ ಮುಖಂಡರಾದ ಮಹದೇವಮ್ಮ, ಪದ್ಮ, ಹಲಗೂರು ಹೋಬಳಿ ಅಧ್ಯಕ್ಷ ಎಂ.ಇ.ಮಹದೇವು ಕಾರ್ಯದರ್ಶಿ ಮಹೇಶ್ ಬಿಜಿಪುರ ಹೋಬಳಿ ಅಧ್ಯಕ್ಷರಾದ ಗುರುಸ್ವಾಮಿ ಮಹಾದೇವಯ್ಯ, ಕಸಬಾ ಹೋಬಳಿ ಕಾರ್ಯದರ್ಶಿ ಎಲ್.ಶಿವಕುಮಾರ್, ಪ್ರಕಾಶ್, ಸತೀಶ್, ನಂಜುಂಡಸ್ವಾಮಿ, ಮರಿಲಿಂಗೇಗೌಡ, ಹಿಪ್ಜೂಲ್ಲಾ, ಸತೀಶ್ ಸೇರಿದಂತೆ ಇತರರು ಇದ್ದರು.