ಸೈಬರ್ ವಂಚಕರ ಬಲೆಗೆ ಸಿಕ್ಕಿಬಿದ್ದ ಪ್ರಾಚಾರ್ಯ

| Published : Dec 23 2024, 01:00 AM IST

ಸಾರಾಂಶ

ನಿತ್ಯ ಸಾವಿರಾರು ಮಕ್ಕಳಿಗೆ ಪಾಠ ಬೋಧಿಸುವ, ಭವಿಷ್ಯ ರೂಪಿಸುವ ಶಿಕ್ಷಕನೇ ಈಗ ಸೈಬರ್ ವಂಚಕರ ಖೆಡ್ಡಾಗೆ ಬಿದ್ದು ಬಲಿಪಶುವಾಗಿದ್ದಾರೆ.

ಶಿವಾನಂದ ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ನಿತ್ಯ ಸಾವಿರಾರು ಮಕ್ಕಳಿಗೆ ಪಾಠ ಬೋಧಿಸುವ, ಭವಿಷ್ಯ ರೂಪಿಸುವ ಶಿಕ್ಷಕನೇ ಈಗ ಸೈಬರ್ ವಂಚಕರ ಖೆಡ್ಡಾಗೆ ಬಿದ್ದು ಬಲಿಪಶುವಾಗಿದ್ದಾರೆ.

ಮಕ್ಕಳ ಅಂಕು-ಡೊಂಕು ತಿದ್ದಿ ಬುದ್ಧಿ ಹೇಳುವ ಶಿಕ್ಷಕರಿಗೆ ಇದೀಗ ವಂಚಕರು ಬಲೆ ಬೀಸಿದ್ದು, ರಬಕವಿ-ಬನಹಟ್ಟಿ ತಾಲೂಕಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಿಗೆ ಸೈಬರ್ ವಂಚಕರು ಖೆಡ್ಡಾ ತೋಡಿ ಬರೋಬ್ಬರಿ ₹೧೦ ಲಕ್ಷ ಎಗರಿಸಿದ್ದಾರೆ. ಈ ಕುರಿತು ಸಿಇಎನ್ ಪೊಲೀಸ್ ಠಾಣೆ ಬಾಗಲಕೋಟೆಯಲ್ಲಿ ಬುಧವಾರ ಪ್ರಕರಣ ಕೂಡ ದಾಖಲಾಗಿದೆ.

ನಡೆದಿದ್ದೇನು?:

ಖಾಸಗಿ ಮೊಬೈಲ್ ಕಂಪನಿಗಳ ರೂವಾರಿ ಟ್ರಾಯ್ ಹೆಸರಿನಡಿ ಸ್ಥಳೀಯ ಪ್ರಾಚಾರ್ಯರಿಗೆ ಆಂಗ್ಲ ಭಾಷಾ ಹಿಡಿತವಿದ್ದ ಕಾರಣ ಆಂಗ್ಲ ಭಾಷೆಯಲ್ಲಿ ಕರೆ ಮಾಡಿದ್ದಾರೆ. ಟ್ರಾಯ್ ಕಚೇರಿಯಿಂದ ಕರೆ ಮಾಡಿದ್ದು, ನಿಮ್ಮ ಆಧಾರ್ ಲಿಂಕ್‌ ಇರುವ ಮೊಬೈಲ್ ಸಂಖ್ಯೆಯಿಂದ ಮುಂಬೈನ ಕೆನರಾ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದು ಅಕ್ರಮವಾಗಿ ಹಣ ವರ್ಗಾಯಿಸಲಾಗಿದೆ. ಕಾರಣ ತುರ್ತಾಗಿ ಮುಂಬೈ ಪೊಲೀಸ್ ಠಾಣೆಗೆ ತಕ್ಷಣ ಬಂದು ಹಾಜರಾಗಬೇಕು ಎಂದಿದ್ದಾರೆ. ಇಷ್ಟೇ ಅಲ್ಲದೆ ಸಿಬಿಐ ಕಚೇರಿಯಿಂದಲೂ ವಿಡಿಯೋ ಕಾಲ್ ಬರುತ್ತೆ ಅವರಿಗೂ ತಪ್ಪದೇ ತಾವು ಸಂಪೂರ್ಣ ಮಾಹಿತಿ ಒದಗಿಸಬೇಕು ಎಂದಿದ್ದಾರೆ.

ಇದನ್ನೇ ನಂಬಿದ ಸಂತ್ರಸ್ತ ಪ್ರಾಚಾರ್ಯ ಭಯಭೀತಗೊಂಡಿದ್ದಾರೆ. ತಕ್ಷಣವೇ ವಿಡಿಯೋ ಕರೆ ಮಾಡಿ ಫೋನ್ ಮೂಲಕವೇ ಕೆಲ ಕರಾರು ಹಾಕಿ ವಿಚಾರಣೆ ನಡೆಸುತ್ತ ಇದೀಗ ಡಿಜಿಟಲ್ ಅರೆಸ್ಟ್ ವಾರಂಟ್ ಜಾರಿಯಾಗಿದೆ. ಕರೆ ಕಟ್ ಮಾಡಿದರೆ ತಕ್ಷಣವೇ ಪೊಲೀಸರು ಮನೆಗೆ ಬಂದು ಬಂಧನ ಮಾಡುತ್ತಾರೆಂದು ಇತ್ಯಾದಿ ನಂಬಲು ಯೋಗ್ಯ ಭೀತಿಯುಂಟು ಮಾಡುವ ಮಾತುಗಳನ್ನಾಡಿದ್ದಾರೆ. ಇವೆಲ್ಲವೂ ಆಂಗ್ಲ ಭಾಷೆಯಲ್ಲಿಯೇ ಸಂವಾದವಾಗಿವೆ.

ಯಾರಿಗೂ ಹೇಳದಂತೆ ಸೂಚನೆ:

ಪ್ರಾಚಾರ್ಯರೊಡನೆ ಅವ್ಯಾಹತವಾಗಿ ಪೊಲೀಸ್ ಇಲಾಖೆ, ಸಿಬಿಐ, ನ್ಯಾಯಾಲಯ, ಟ್ರಾಯ್ ಹೀಗೆ ಹಲವಾರು ಸರ್ಕಾರಿ ತನಿಖಾ ಸಂಸ್ಥೆಯ ಹೆಸರಿನಡಿ ಫೋನ್ ಹಾಗೂ ವಿಡಿಯೋ ಕರೆಗಳು ಬಂದಿವೆ. ಹಲವಾರು ಕೃತ್ಯದ ಜೊತೆಗೆ ಹಣದ ವ್ಯಹಾರ ಕಾನೂನು ಬಾಹಿರವಾಗಿ ವಹಿವಾಟು ಆಗಿದ್ದು, ಆ ಗ್ಯಾಂಗ್ ಜೊತೆಗೆ ಮೊಬೈಲ್ ನಂಬರ್ ಲಿಂಕ್ ಇದೆ ಇದನ್ನು ನಾವು ಟ್ರ್ಯಾಕ್ ಮಾಡುತ್ತಿದ್ದೇವೆ. ಜೊತೆಗೆ ನಿಮ್ಮನ್ನು ವಿಡಿಯೋ ಕಾಲ್ ಮೂಲಕ ವಿಚಾರಣೆ ನಡೆಸಬೇಕು ಎಂದು ತಿಳಿಸಿದ್ದಾರೆ.

ಯಾವುದೇ ರೀತಿ ಅನುಮಾನಬಾರದಂತೆ ನಿಜಕ್ಕೂ ಡಿಜಿಟಲ್ ಅರೆಸ್ಟ್ ಪ್ರಕರಣದ ರೀತಿಯಲ್ಲಿಯೇ ಆರೋಪಿಗಳ ಬೆದರಿಕೆಗೆ ದಿಕ್ಕೇ ತೋಚದಂತಾಗಿ ಕಕ್ಕಾಬಿಕ್ಕಿಯಾದ ಪ್ರಾಚಾರ್ಯರಿಗೆ ನಿಮ್ಮ ಬ್ಯಾಂಕ್ ಖಾತೆಗಳಲ್ಲಿರುವ ಸದ್ಯದ ಹಣ ಎಷ್ಟಿದೆ ಎಂದಿದ್ದಷ್ಟೇ ತಡ ಒಂದೆಡೆ ₹ ೬ ಲಕ್ಷ ಇನ್ನೊಂದು ಬ್ಯಾಂಕ್‌ನಲ್ಲಿ ₹೪ ಲಕ್ಷವೆಂದಿದ್ದಾರೆ. ತಮ್ಮ ಬ್ಯಾಂಕ್ ಖಾತೆಗಳಿಗೆ ಸಂತ್ರಸ್ತನಿಂದ ಆರ್‌ಟಿಜಿಎಸ್ ಮೂಲಕ ₹೧೦ ಲಕ್ಷ ವರ್ಗಾವಣೆ ಮಾಡಿಸಿಕೊಂಡು ಯಾಮಾರಿಸಿದ್ದಾರೆ.

ಈ ವಿಷಯ ಯಾರಿಗೂ ಹೇಳದಿರಿ. ತಮ್ಮ ಹಣ ವರ್ಗಾವಣೆ ಮಾಡಿಕೊಂಡು ತನಿಖೆಯಿಂದ ನೀವು ಅಪರಾಧ ಮುಕ್ತರಾಗುತ್ತೀರಿ. ನಿಮ್ಮ ಹಣ ತನಿಖೆಯಾದ ತಕ್ಷಣವೇ ವಾಪಸ್ ವರ್ಗಾಯಿಸುತ್ತೇವೆ ಎಂದಿದ್ದಾರೆ.

ಅವಳಿ ನಗರದಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣ ಇದೇ ಮೊದಲಾಗಿದೆ. ಅದರಲ್ಲೂ ವಿದ್ಯಾವಂತರನ್ನೇ ಟಾರ್ಗೆಟ್ ಮಾಡಿ ಭಾರಿ ಪ್ರಮಾಣದ ಹಣ ವಸೂಲಿಗಿಳಿದಿರುವ ಡಿಜಿಟಲ್ ಅರೆಸ್ಟ್ ಹೆಸರಲ್ಲಿ ನಾನಾ ತರಹದ ಸೈಬರ್ ದುರುಳರು ವಂಚನೆಗಳಿದಿರುವುದು ವಿದ್ಯಾವಂತರನ್ನೇ ಮೋಸವೆಸಗಿದ್ದು, ಇನ್ನು ಜನಸಾಮಾನ್ಯರ ಗತಿ ಏನು? ಎಂಬುದಕ್ಕೆ ಬಾಗಲಕೋಟೆಯ ಸಿಇಎನ್ ಪೊಲೀಸರೇ ತನಿಖೆಯ ಸುಖಾಂತ್ಯಗೊಳಿಸಿ ಹಣ ಸಂತ್ರಸ್ತನಿಗೆ ಮರಳಿಸಿ ಉತ್ತರ ನೀಡಬೇಕಿದೆ.