ಕ್ಷಣಕ್ಷಣದ ಮಾಹಿತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಪಡೆಯಬಹುದಾಗಿದ್ದರೂ, ವಿಶ್ವಾಸಾರ್ಹ ಮತ್ತು ನೈಜ ಸುದ್ದಿಗಳಿಗಾಗಿ ಇಂದಿಗೂ ಮುದ್ರಣ ಮಾಧ್ಯಮವೇ ಅತ್ಯುತ್ತಮ ಎಂದು ಸಂಸದ ರಾಜಶೇಖರ ಹಿಟ್ನಾಳ್ ಹೇಳಿದರು.

ಕೊಪ್ಪಳ: ಕ್ಷಣಕ್ಷಣದ ಮಾಹಿತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಪಡೆಯಬಹುದಾಗಿದ್ದರೂ, ವಿಶ್ವಾಸಾರ್ಹ ಮತ್ತು ನೈಜ ಸುದ್ದಿಗಳಿಗಾಗಿ ಇಂದಿಗೂ ಮುದ್ರಣ ಮಾಧ್ಯಮವೇ ಅತ್ಯುತ್ತಮ ಎಂದು ಸಂಸದ ರಾಜಶೇಖರ ಹಿಟ್ನಾಳ್ ಹೇಳಿದರು.

ಕೊಪ್ಪಳದ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ನಗರದ ಪತ್ರಿಕೆ ವಿತರಕರ ಕ್ಷೇಮಾಭಿವೃದ್ಧಿ ಸಂಘ, ಕನ್ನಡಪ್ರಭ–ಏಷ್ಯಾನೆಟ್ ಸುವರ್ಣ ನ್ಯೂಸ್, ಪಾನಘಂಟಿ ಫೌಂಡೇಶನ್ ಹಾಗೂ ಶ್ರೀ ಭೀಮ ವೈಭವ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪತ್ರಿಕೆ ವಿತರಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೈಯಲ್ಲಿರುವ ಮೊಬೈಲ್‌ನಲ್ಲಿ ಪ್ರತಿಕ್ಷಣವೂ ಸುದ್ದಿ ಸೇರಿದಂತೆ ಜಗತ್ತಿನ ಬೆಳವಣಿಗೆಗಳು ಲಭ್ಯವಿದ್ದರೂ, ಬೆಳಗ್ಗೆ ಎದ್ದು ಪತ್ರಿಕೆಯನ್ನು ಓದಿದ ಮೇಲೆ ನಿಜವಾದ, ನೈಜವಾದ ಮಾಹಿತಿ ದೊರೆತ ಅನುಭವ ಈಗಲೂ ಆಗುತ್ತದೆ. ಈ ಕಾರಣಕ್ಕಾಗಿ ಮುದ್ರಣ ಮಾಧ್ಯಮ ಅತ್ಯಂತ ವಿಶ್ವಾಸಾರ್ಹ ಎನ್ನುವ ನಂಬಿಕೆ ಇದೆ. ಇಂತಹ ಪತ್ರಿಕೆಗಳನ್ನು ಹೊತ್ತು ಮನೆಮನೆಗೆ ತಲುಪಿಸುವ ಪತ್ರಿಕೆ ಹಂಚುವ ಹುಡುಗರು ಹಾಗೂ ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ. ಇಂಥವರ ಶ್ರಮವನ್ನು ಗುರುತಿಸಿ ಗೌರವಿಸುವ ಕಾರ್ಯ ನಿಜಕ್ಕೂ ಸಾರ್ಥಕವಾಗಿದೆ ಎಂದು ತಿಳಿಸಿದರು.

ಪತ್ರಿಕೆ ವಿತರಕರ ಸಂಘ ಹಾಗೂ ಕನ್ನಡಪ್ರಭ–ಏಷ್ಯಾನೆಟ್ ಸುವರ್ಣ ನ್ಯೂಸ್ ಜಂಟಿಯಾಗಿ ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಅತ್ಯುತ್ತಮ ಕಾರ್ಯವಾಗಿದೆ. ನಿತ್ಯವೂ ಮನೆ ಬಾಗಿಲಿಗೆ ಪತ್ರಿಕೆಯನ್ನು ತಲುಪಿಸುವ ಕೆಲಸ ಮಾಡುತ್ತಲೇ ತಮ್ಮ ಬದುಕು ಕಟ್ಟಿಕೊಳ್ಳುವ ವಿದ್ಯಾರ್ಥಿಗಳು, ಹುಡುಗರು ಸೇರಿದಂತೆ ವಿಶೇಷವಾಗಿ ಪತ್ರಿಕೆ ವಿತರಕರನ್ನು ಗುರುತಿಸಿರುವುದು ಒಳ್ಳೆಯ ಕಾರ್ಯವಾಗಿದೆ ಎಂದರು.

ವಿಶೇಷ ಸನ್ಮಾನ

ಕಳೆದ 30–40 ವರ್ಷಗಳಿಂದ ಪತ್ರಿಕೆ ವಿತರಣೆ ಸೇವೆಯಲ್ಲಿರುವ ಹಿರಿಯರಾದ ಎ.ಜಿ. ಕಾರಟಗಿ, ನಾಗರಾಜ ಕಲಾಲ್, ವೀರಣ್ಣ ಪತ್ತಾರ, ವೀರಣ್ಣ ಪಟ್ಟಣಶೆಟ್ಟಿ ಹಾಗೂ ಲಾಳೇಶ ನಾಯಕ ಅವರನ್ನು ಸನ್ಮಾನಿಸಲಾಯಿತು.

87 ವರ್ಷಗಳ ಹಿರಿಯ ಜೀವ ಎ.ಜಿ. ಕಾರಟಗಿ ಅವರು ಕಳೆದ 57 ವರ್ಷಗಳಿಂದ ಕನ್ನಡಪ್ರಭ ಪತ್ರಿಕೆಯನ್ನು ಕಾರಟಗಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಗೆ ಇಂದಿಗೂ ಪೂರೈಕೆ ಮಾಡುತ್ತಿರುವ ಕುರಿತು ಅತಿಥಿಗಳು ಅತ್ಯಂತ ಮೆಚ್ಚುಗೆಯ ಮಾತುಗಳನ್ನಾಡಿದರು. ಯುವಕರು ನಾಚುವಂತೆ ಬೆಳಗ್ಗೆ 5 ಗಂಟೆಗೆ ಈಗಲೂ ಕನ್ನಡಪ್ರಭ ಪತ್ರಿಕೆ ಹಂಚಲು ಹುಡುಗರಿಗೆ ಹುಮ್ಮಸ್ಸು ತುಂಬುತ್ತಿದ್ದಾರೆ ಎನ್ನುವುದನ್ನು ಕೇಳಿದ ಈಗಿನ ಪೀಳಿಗೆ ಬೆರಗಾಯಿತು.

ಅದೇ ರೀತಿ ವೀರಣ್ಣ ಪತ್ತಾರ, ನಾಗರಾಜ ಕಲಾಲ್, ವೀರಪ್ಪ ಪಟ್ಟಣಶೆಟ್ಟಿ ಹಾಗೂ ಲಾಳೇಶ ನಾಯಕ ಅವರ ಕಾರ್ಯವನ್ನು ಸ್ಮರಿಸಿ ಸತ್ಕರಿಸಲಾಯಿತು.

ಪ್ರತಿಭಾ ಪುರಸ್ಕಾರ

ಪತ್ರಿಕೆ ಹಂಚುತ್ತಲೇ ತಮ್ಮ ವಿದ್ಯಾಭ್ಯಾಸದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಪವನಕುಮಾರ, ಶಿವರಾಜ, ಶಿವನಗೌಡ ಹಾಗೂ ಆಕಾಶ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.

ವಿಜೇತರಿಗೆ ಬಹುಮಾನ

ಈ ವೇಳೆ ಪತ್ರಿಕಾ ವಿತರಕರಿಗೆ ಹಮ್ಮಿಕೊಂಡಿದ್ದ ಆಟೋಟ ಸ್ಪರ್ಧೆಗಳಲ್ಲಿ ಪತ್ರಿಕೆಯ ಹೆಸರು ಬರೆಯುವ ಸ್ಪರ್ಧೆಯಲ್ಲಿ ಗವಿ ಕಂದಾರಿ ಪ್ರಥಮ, ಮಂಜುನಾಥ ಟಪಾಲ ದ್ವಿತೀಯ ಸ್ಥಾನ ಪಡೆದರು.

ಪೇಪರ್ ಎಸೆಯುವ ಸ್ಪರ್ಧೆಯಲ್ಲಿ ರವೀಂದ್ರ ಕಲಾಲ್ ಪ್ರಥಮ, ಪರಶುರಾಮ ಶ್ಯಾವಿ ದ್ವಿತೀಯ ಹಾಗೂ ಬಕೆಟ್‌ನಲ್ಲಿ ಬಾಲ್ ಹಾಕುವ ಸ್ಪರ್ಧೆಯಲ್ಲಿ ರಮೇಶ್ ಚಕ್ರಸಾಲಿ ಪ್ರಥಮ, ನಾಗರಾಜ ಉಂಕಿ ದ್ವಿತೀಯ ಸ್ಥಾನ ಪಡೆದರು. ಇವರೆಲ್ಲರಿಗೂ ಬಹುಮಾನ ವಿತರಿಸಲಾಯಿತು.

ಲಕ್ಕಿ ಡ್ರಾದಲ್ಲಿ ವಿಜೇತರಾದ ಪತ್ರಿಕೆ ಹಂಚುವ ಹುಡುಗರಿಗೆ ಹಾಗೂ ಪತ್ರಿಕೆ ವಿತರಕರ ಕುಟುಂಬದ ಮಹಿಳಾ ಸದಸ್ಯರಿಗೂ ಬಹುಮಾನ ನೀಡಿ ಗೌರವಿಸಲಾಯಿತು.

ಸ್ವೀಟ್ ಬಾಕ್ಸ್ ವಿತರಣೆ

ಶ್ರೀ ಭೀಮ ವೈಭವ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಪತ್ರಿಕಾ ವಿತರಕರಿಗೆ ಹಾಗೂ ಪತ್ರಿಕೆ ಹಂಚುವ ಹುಡುಗರಿಗೆ ಸ್ವೀಟ್ ಬಾಕ್ಸ್ ಹಂಚಲಾಯಿತು. ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರು ಬಹುಮಾನ ವಿತರಣೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡಪ್ರಭ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕ ಮಲ್ಲಿಕಾರ್ಜುನ ಸಿದ್ದಣ್ಣವರ ವಹಿಸಿದ್ದರು. ಪಾನಘಂಟಿ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಶಾರದಾ ಪಾನಗಂಟಿ, ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ನಾಗರಾಜ ಜುಮ್ಮನ್ನವರ, ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಶ್ರೀಪಾದ ಕುಲಕರ್ಣಿ, ಗವಿರಾಜ ಕಂದಾರಿ, ಮಂಜುನಾಥ ಟಾಪಾಲ, ಮಹಿಬೂಬಸಾಬ್ ಗಂಗಾವತಿ, ನಾಗರಾಜ ಉಂಕಿ, ಮಹೇಶ ಚಕ್ರಸಾಲಿ, ನಾಗರಾಜ ಕಲಾಲ್, ರವೀಂದ್ರ ಕಲಾಲ್ ಇದ್ದರು.

ಪರಶುರಾಮ ಶ್ಯಾವಿ ಸ್ವಾಗತಿಸಿದರು. ಸೋಮರಡ್ಡಿ ಅಳವಂಡಿ ನಿರೂಪಿಸಿದರು. ಸಾನ್ವಿ ಹಾಗೂ ಕೀರ್ತನಾ ಸ್ವಾಗತಿಸಿದರು.ಸಾಧನೆಗೆ ಸಾಕಷ್ಟು ಅವಕಾಶ

ದಿನಪೂರ್ತಿ ಟಿವಿ ಮುಂದೆ ಕುಳಿತು ನ್ಯೂಸ್ ನೋಡಿದರೂ ಬೆಳಗ್ಗೆ ಎದ್ದ ತಕ್ಷಣ ಪತ್ರಿಕೆ ಬರದಿದ್ದರೆ ಈಗಲೂ ನನಗೆ ಚಡಪಡಿಕೆಯಾಗುತ್ತದೆ. ಬೆಳಗ್ಗೆ ಪತ್ರಿಕೆ ನೋಡುವ ಮುನ್ನ ಚಹಾ ಕುಡಿಯಲು ಆಗುವುದಿಲ್ಲ. ಅಷ್ಟೊಂದು ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಂಡಿದ್ದೇನೆ. ಹೀಗೆ ನಿತ್ಯವೂ ಬೆಳಗ್ಗೆ ಚಳಿ, ಮಳೆ ಲೆಕ್ಕಿಸದೆ ನಮ್ಮ ಮನೆಗೆ ಪತ್ರಿಕೆಯನ್ನು ತಲುಪಿಸುವ ಕಾರ್ಯ ಬೆಲೆ ಕಟ್ಟಲಾಗದ್ದು. ಇಂತಹ ಪತ್ರಿಕೆ ಹಾಕುತ್ತಲೇ ಬೆಳೆದು, ವಿಜ್ಞಾನಿಯಾಗಿ, ರಾಷ್ಟ್ರಪತಿಯಾಗಿ, ಭಾರತ ರತ್ನ ಪಡೆದ ಅಬ್ದುಲ್ ಕಲಾಂ ಅವರನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕು. ಹೀಗಾಗಿ ಪತ್ರಿಕೆ ಹಂಚುವ ಹುಡುಗರಿಗೆ ಜೀವನದಲ್ಲಿ ಸಾಧನೆ ಮಾಡುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಹೇಳಿದರು.

ಈಗಲೂ ನನಗೆ ಬೆಳಗ್ಗೆ ಪತ್ರಿಕೆಗಳು ಬರದೆ ಜೀವನ ಆರಂಭವಾಗುವುದೇ ಇಲ್ಲ. ಬೆಳಗ್ಗೆ ಪತ್ರಿಕೆಗಳು ಬರುವುದನ್ನೇ ಕಾಯುತ್ತಿರುತ್ತೇವೆ. ಇಂತಹ ಕಾರ್ಯವನ್ನು ನಿತ್ಯವೂ ಮಾಡುವ ಪತ್ರಿಕಾ ವಿತರಕರು ಮತ್ತು ಪತ್ರಿಕೆ ಹಂಚುವ ಹುಡುಗರ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಹೇಳಿದರು.

ದೇಶ–ವಿದೇಶಗಳ ಸುದ್ದಿಗಳನ್ನು ಹೊತ್ತು ತರುವ ಪತ್ರಿಕೆಗಳನ್ನು ಮನೆಮನೆಗೂ ತಲುಪಿಸುವವರ ಭವಿಷ್ಯ ಉಜ್ವಲವಾಗಬೇಕಾಗಿದೆ. ಅವರಿಗೆ ಸರ್ಕಾರದಿಂದ ಎಲೆಕ್ಟ್ರಿಕ್‌ ವಾಹನವನ್ನು ನೀಡುವಂತಾಗಬೇಕು ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕೆ. ಹೇಳಿದರು.

ಪತ್ರಿಕೆ ವಿತರಕರು ಮತ್ತು ಪತ್ರಿಕೆ ಹಂಚುವವರ ಕುರಿತು ಅವರದೇ ದಿನಾಚರಣೆಯನ್ನು ಮಾಡುವ ಮೂಲಕ ಅವರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಡಿವೈಎಸ್ಪಿ ಮುತ್ತಣ್ಣ ಸವರಗೋಳ ತಿಳಿಸಿದರು.

ಪತ್ರಿಕಾ ವಿತರಕರು ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಈಗಲೂ ಅವರಿಗೆ ಯಾವುದೇ ಭದ್ರತೆ, ಸ್ಥಿರ ಆದಾಯ ಇಲ್ಲ. ಹೀಗಾಗಿ ಅವರು ಸಂಘಟಿತರಾಗಿ, ಸರ್ಕಾರದಿಂದ ಸಹಾಯ ಪಡೆಯುವ ಶಕ್ತಿಯನ್ನು ಹೊಂದಬೇಕಾಗಿದೆ ಎಂದು ಪತ್ರಿಕೆ ವಿತರಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಶಂಕರ ಕುದರಿಮೋತಿ ತಿಳಿಸಿದರು.ವಿತರಕರೇ ಪತ್ರಿಕೆಯ ಜೀವಾಳ

ಪತ್ರಿಕೆ ಮತ್ತು ಅದರ ಸಂಪಾದಕರ ಬೆಳವಣಿಗೆಯ ಶಕ್ತಿ ಅಡಗಿರುವುದೇ ಪತ್ರಿಕೆ ವಿತರಕರು ಮತ್ತು ಪತ್ರಿಕೆ ಹಂಚುವ ಹುಡುಗರಲ್ಲಿದೆ ಎಂದು ಕನ್ನಡಪ್ರಭ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕರಾದ ಮಲ್ಲಿಕಾರ್ಜುನ ಸಿದ್ದಣ್ಣವರ ಅಭಿಪ್ರಾಯಪಟ್ಟಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಮುದ್ರಣ ಮಾಧ್ಯಮದಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದವರೆಂದರೆ ಪತ್ರಿಕಾ ವಿತರಕರು ಮತ್ತು ಪತ್ರಿಕೆ ಹಂಚುವವರು. ಅವರನ್ನೂ ಸಂಘಟಿತರನ್ನಾಗಿ ಮಾಡಿ, ಅವರ ಕಲ್ಯಾಣಕ್ಕಾಗಿ ಶ್ರಮಿಸುವ ಅಗತ್ಯವಿದೆ ಎಂದರು.

ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಿಂದ ಅವರಿಗೆ ಅಸಂಘಟಿತ ಕಾರ್ಮಿಕರು ಎನ್ನುವ ಗುರುತಿನ ಚೀಟಿಯನ್ನು ಈಗಷ್ಟೇ ವಿತರಣೆ ಮಾಡಲಾಗುತ್ತಿದೆ. ಕಾರ್ಮಿಕ ಸಚಿವರ ಮನವೊಲಿಸಿ ಗುರುತಿನ ಚೀಟಿಯನ್ನು ನೀಡುವಂತೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅವರನ್ನೂ ಆರೋಗ್ಯ ವಿಮಾ ವ್ಯಾಪ್ತಿಗೆ ಒಳಪಡಿಸುವ ಕುರಿತು ಸಂಘಟನಾತ್ಮಕ ಪ್ರಯತ್ನ ನಡೆದಿದೆ. ನೀವೆಲ್ಲರೂ ಸಂಘಟಿತರಾಗಿ ವ್ಯವಸ್ಥಿತ ರೀತಿಯಲ್ಲಿ ಪ್ರಯತ್ನ ಮಾಡುವ ಅಗತ್ಯವಿದೆ ಎಂದು ಹೇಳಿದರು.