ತೆರಿಗೆ ರಸೀದಿಯಲ್ಲೂ ಮತ ಜಾಗೃತಿ ಸ್ಲೋಗನ್‌ ಮುದ್ರಣ

| Published : Mar 26 2024, 01:47 AM IST / Updated: Mar 26 2024, 12:42 PM IST

ಸಾರಾಂಶ

ಜನರಲ್ಲಿ ಮತದಾನದ ಜಾಗೃತಿ ಮೂಡಿಸಲು ಬಿಬಿಎಂಪಿ, ಬಿಡಿಎ, ಜಲಮಂಡಳಿ ಬಿಲ್‌ಗಳಲ್ಲಿ ಸ್ಲೋಗನ್‌ ಮುದ್ರಿಸಲು ಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮತದಾನದ ಕುರಿತಂತೆ ಜಾಗೃತಿ ಮೂಡಿಸಲು ಹೊಸ ವಿಧಾನ ಅನುಸರಿಸಲು ಮುಂದಾಗಿರುವ ಬಿಬಿಎಂಪಿ ಚುನಾವಣಾ ವಿಭಾಗ, ತೆರಿಗೆ ಪಾವತಿ ರಸೀದಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಮತದಾನ ಜಾಗೃತಿ ಸ್ಲೋಗನ್‌ಗಳನ್ನು ಮುದ್ರಿಸಲು ನಿರ್ಧರಿಸಲಾಗಿದೆ.

ಪ್ರತಿ ಚುನಾವಣೆಯ ಮತದಾನದಲ್ಲೂ ಬೆಂಗಳೂರು ನಗರ ಜಿಲ್ಲೆ ಸಾಕಷ್ಟು ಹಿಂದೆ ಬೀಳುತ್ತಿದೆ. ಶೇಕಡ 40ಕ್ಕಿಂತ ಹೆಚ್ಚಿನ ಮತದಾರರು ಮತದಾನ ಪ್ರಕ್ರಿಯೆಯಿಂದ ಹಿಂದುಳಿಯುತ್ತಿದ್ದಾರೆ. ಈ ಬಾರಿ ಅದನ್ನು ತಡೆದು ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹೊಸಹೊಸ ವಿಧಾನವನ್ನು ಅನುಸರಿಸಲಾಗುತ್ತಿದೆ. 

ಅದರಂತೆ ಈವರೆಗೆ ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್‌ ಟಿಕೆಟ್‌ನಲ್ಲಿ ಮಾತ್ರ ಮುದ್ರಿಸಲಾಗುತ್ತಿದ್ದ ಮತದಾನದ ಜಾಗೃತಿ ಸ್ಲೋಗನ್‌ಗಳನ್ನು ಬಿಬಿಎಂಪಿ, ಬಿಡಿಎ ತೆರಿಗೆ ರಸೀದಿ, ಜಲಮಂಡಳಿ ನೀರಿನ ರಸೀದಿ, ಬೆಸ್ಕಾಂ ವಿದ್ಯುತ್‌ ರಸೀದಿಗಳಲ್ಲೂ ಮುದ್ರಿಸಲು ಬಿಬಿಎಂಪಿ ಚುನಾವಣಾ ವಿಭಾಗ ನಿರ್ಧರಿಸಿದೆ.

 ಅದಕ್ಕಾಗಿ ಈಗಾಗಲೇ ಎಲ್ಲ ಇಲಾಖೆಗಳೊಂದಿಗೂ ಚರ್ಚಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಆ ಕ್ರಮ ಅನುಷ್ಠಾನಕ್ಕೆ ತರಲಾಗುತ್ತಿದೆ.ಮಹಿಳೆಯರನ್ನು ಮತಗಟ್ಟೆಗೆ

ಸೆಳೆಯಲು ಜಾಗೃತಿ ಕಾರ್ಯ: ಮಹಿಳಾ ಮತದಾರರನ್ನು ಹೆಚ್ಚಿನ ಮತದಾನ ಪ್ರಕ್ರಿಯೆಯಲ್ಲಿ ತೊಡಗುವಂತೆ ಮಾಡಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ನಗರದಲ್ಲಿನ ಎಲ್ಲ ಗಾರ್ಮೆಂಟ್ಸ್‌ಗಳಿಗೂ ಅಧಿಕಾರಿಗಳು ತೆರಳಿ ಜಾಗೃತಿ ಮೂಡಿಸಲು ಯೋಜಿಸಿದ್ದಾರೆ. 

ಅದಕ್ಕಾಗಿ ಗಾರ್ಮೆಂಟ್ಸ್‌ಗಳ ಪಟ್ಟಿಯನ್ನು ತರಿಸಿಕೊಳ್ಳಲಾಗುತ್ತಿದ್ದು, ಅಲ್ಲಿಗೆ ವಲಯ ಮಟ್ಟದ ಅಧಿಕಾರಿಗಳನ್ನು ಕಳುಹಿಸಿ ಮತದಾನದ ಮಹತ್ವದ ಬಗ್ಗೆ ತಿಳಿಸಿಕೊಡಲು ನಿರ್ಧರಿಸಲಾಗಿದೆ.

ಮತದಾನ ಹೆಚ್ಚಿಸಲು ಮತದಾರರಶಿಕ್ಷಣ ಚಟುವಟಿಕೆ ಹೆಚ್ಚಿಸಿ: ತುಷಾರ್‌ಕನ್ನಡಪ್ರಭ ವಾರ್ತೆ ಬೆಂಗಳೂರುಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ (ಸ್ವೀಪ್‌) ಚಟುವಟಿಕೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಯೋಜಿಸುವಂತೆ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅಧಿಕಾರಿಗಳಿಗೆ ಸೂಚಿಸಿದರು.

ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಸಿದ್ಧತೆಗಳ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿ ಮಾತನಾಡಿದ ತುಷಾರ್‌ ಗಿರಿನಾಥ್‌, ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಎಲ್ಲ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಭೆ ನಡೆಸಿ, ಮೈಕ್ರೋ ಲೆವೆಲ್‌ ಯೋಜನೆಗಳನ್ನು ರೂಪಿಸಬೇಕು. 

ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಸ್ವೀಪ್‌ ಚಟುವಟಿಕೆಯನ್ನು ನಡೆಸಬೇಕು. ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಬೇಕಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ತಿಳಿಸಿದರು.

ಮತದಾನದ ಮಹತ್ವದ ಕುರಿತಂತೆ ಜನರಲ್ಲಿ ಜಾಗೃತಿ ಮೂಡಲು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಜತೆಗೆ ಮಾತುಕತೆ ನಡೆಸಬೇಕು. ಪ್ರಮುಖವಾಗಿ ನಿವಾಸಿಗಳ ಸಂಘಗಳ ಮೂಲಕವೇ ಜನರಿಗೆ ಮತದಾನದ ಮಹತ್ವವನ್ನು ತಿಳಿಸುವಂತೆ ಮಾಡಬೇಕು ಎಂದರು.

ಅದರ ಜತೆಗೆ ಚುನಾವಣೆಗೆ ಸಂಬಂಧಿಸಿದ ಅರ್ಜಿ ವಿಲೇವಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಮತದಾರರ ಗುರುತಿನ ಚೀಟಿಗಳನ್ನು ಮತದಾರರ ಮನೆಗಳಿಗೆ ತ್ವರಿತವಾಗಿ ತಲುಪಿಸಬೇಕು. 

85 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನರ ಮನೆ-ಮನೆ ಭೇಟಿ ನೀಡಿ ಅವರಿಂದ ಮತದಾನ ಮಾಡಿಸಲು 12ಡಿ ನಮೂನೆ ಅರ್ಜಿ ಭರ್ತಿ ಮಾಡಿಸಿಕೊಳ್ಳಲು ಒತ್ತು ನೀಡಬೇಕು ಎಂದು ಹೇಳಿದರು.

ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಸೆಲ್ವಮಣಿ, ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ। ಕೆ.ಹರೀಶ್ ಕುಮಾರ್, ವಿನೋತ್ ಪ್ರಿಯಾ, ಸ್ನೇಹಲ್, ಡಾ। ಕೆ.ದಯಾನಂದ್, ಸ್ವೀಪ್ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ಕಾಂತರಾಜು ಇದ್ದರು.