ಸಾರಾಂಶ
ಚನ್ನಪಟ್ಟಣ: ವಿದ್ಯಾರ್ಥಿ ದೆಸೆಯಲ್ಲಿ ಅಂಕ ಗಳಿಕೆಗಿಂತ ವಿದ್ಯೆ ಕಲಿಕೆಗೆ ಆದ್ಯತೆ ನೀಡಬೇಕು. ಅಂಕಕ್ಕಿಂತ ಕಲಿತ ವಿದ್ಯೆ ಜೀವನದಲ್ಲಿ ತುಂಬಾ ಉಪಯೋಗಕ್ಕೆ ಬರುತ್ತದೆ ಎಂದು ನ್ಯಾಯಾಧೀಶ ಮಹೇಂದ್ರ ತಿಳಿಸಿದರು.
ನಗರದ ಚಂದ್ರು ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ಸಕಲೇಶಪುರ ತಾಲೂಕಿಗೆ ಹಿರಿಯ ಶ್ರೇಣಿಯ ನ್ಯಾಯಾಧೀಶರಾಗಿ ಮುಂಬಡ್ತಿ ಪಡೆದಿರುವ ಸಂದರ್ಭದಲ್ಲಿ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಅವರು, ಪೋಷಕರು ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವುದನ್ನು ಬಿಡಬೇಕು. ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಮುಂದಾಗಬೇಕು. ನಾನು ಸಹ ಸರ್ಕಾರಿ ಶಾಲೆಯಲ್ಲಿಯೇ ಕಲಿತು ಇಂದು ಈ ಮಟ್ಟಕ್ಕೆ ಬೆಳೆದಿದ್ದೇನೆ. ನಮ್ಮ ಶ್ರೀಮಂತಿಕೆಗಿಂತ ನಾವು ಮಾಡುವ ಸಾಮಾಜಿಕ ಕೆಲಸಗಳು ಸದಾ ಜನರ ನೆನಪಿನಲ್ಲಿ ಉಳಿಯುತ್ತವೆ. ಆ ನಿಟ್ಟಿನಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿರುವ ಚಂದ್ರು ಡಯಾಗ್ನೋಸ್ಟಿಕ್ ಕಾರ್ಯ ಶ್ಲಾಘನೀಯ ಎಂದರು.ಸರ್ಕಾರಿ ಶಾಲೆಗಳಲ್ಲಿ ಅಭ್ಯಾಸ ಮಾಡಿರುವ ಅನೇಕರು ಗಣ್ಯ ವ್ಯಕ್ತಿಗಳಾಗಿದ್ದಾರೆ. ದೇಶ ವಿದೇಶಗಳಲ್ಲಿ ಉನ್ನತ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಅರ್ಹ ಶಿಕ್ಷಕರಿದ್ದು ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಅದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು. ಸಾಲಸೋಲ ಮಾಡಿ ಖಾಸಗಿ ಶಾಲೆಗಳಲ್ಲಿ ಓದಿಸುವುದಕ್ಕಿಂತ, ಸರ್ಕಾರ ಸಕಲ ಸವಲತ್ತುಗಳನ್ನು ಕ್ಲಪಿಸಿ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಜ್ವಲ ಭವಿಷ್ಯವಿದೆ ಎಂಬುದನ್ನು ಗಮನಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನೇಗಿಲಯೋಗಿ ಸಾಮಾಜಿಕ ಸೇವಾ ಸಂಸ್ಥೆಯ ಅಧ್ಯಕ್ಷ ಧರಣೀಶ್, ಲಯನ್ ಸಂಸ್ಥೆ ತಾಲೂಕು ಅಧ್ಯಕ್ಷ ಕೆ.ತಿಪ್ಪರೇಗೌಡ, ಭಾರತ ಸೇವಾದಳದ ಅಧ್ಯಕ್ಷ ಗೋವಿಂದಯ್ಯ, ಕಾಡಯ್ಯ ಮುಂತಾದವರು ಭಾಗವಹಿಸಿದ್ದರು.ಪೊಟೋ೧ಸಿಪಿಟಿ೩: ನಗರದ ಚಂದ್ರು ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ಹಿರಿಯ ಶ್ರೇಣಿಯ ನ್ಯಾಯಾಧೀಶರಾಗಿ ಮುಂಬಡ್ತಿ ಪಡೆದು ಸಕಲೇಶ್ವರ ತಾಲೂಕಿಗೆ ವರ್ಗಾವಣೆಯಾದ ನ್ಯಾಯಾಧೀಶ ಮಹೇಂದ್ರ ಅವರಿಗೆ ಬೀಳ್ಕೋಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.