ಕರ್ನಾಟಕವು ಪ್ರವಾಸೋದ್ಯಮದ ದೃಷ್ಟಿಯಿಂದ ಅತ್ಯಂತ ಶ್ರೀಮಂತ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ರಾಜ್ಯವಾಗಿದೆ. ನಮ್ಮ ಜಿಲ್ಲೆಯಲ್ಲಿ ತ್ರಿಕೂಟೇಶ್ವರ ದೇವಾಲಯ, ಲಕ್ಕುಂಡಿ ಸೇರಿ ಅನೇಕ ಪ್ರಮುಖ ಹಾಗೂ ಅಪಾರ ಸಾಮರ್ಥ್ಯವುಳ್ಳ ಪ್ರವಾಸಿ ತಾಣಗಳಿವೆ.
ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಜಿಪಂ ಸಿಇಒ
ಕನ್ನಡಪ್ರಭ ವಾರ್ತೆ ಗದಗಕರ್ನಾಟಕವು ಪ್ರವಾಸೋದ್ಯಮದ ದೃಷ್ಟಿಯಿಂದ ಅತ್ಯಂತ ಶ್ರೀಮಂತ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ರಾಜ್ಯವಾಗಿದೆ. ನಮ್ಮ ಜಿಲ್ಲೆಯಲ್ಲಿ ತ್ರಿಕೂಟೇಶ್ವರ ದೇವಾಲಯ, ಲಕ್ಕುಂಡಿ ಸೇರಿ ಅನೇಕ ಪ್ರಮುಖ ಹಾಗೂ ಅಪಾರ ಸಾಮರ್ಥ್ಯವುಳ್ಳ ಪ್ರವಾಸಿ ತಾಣಗಳಿವೆ. ಈ ತಾಣಗಳ ಸಂಪೂರ್ಣ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳಲು ಪರಿಸರವನ್ನು ಸ್ವಚ್ಛವಾಗಿಟ್ಟು, ಪ್ರವಾಸಿಗರ ಸುರಕ್ಷತೆ ಹಾಗೂ ಭದ್ರತೆಗೆ ಆದ್ಯತೆ ನೀಡುವುದು ಮತ್ತು ಪ್ರಾಕೃತಿಕ ಹಾಗೂ ಐತಿಹಾಸಿಕ ತಾಣಗಳನ್ನು ಸಂರಕ್ಷಿಸುವುದು ಅತ್ಯಗತ್ಯವಾಗಿದೆ ಎಂದು ಜಿಪಂ ಸಿಇಒ ಮುಕುಲ್ ಜೈನ್ ತಿಳಿಸಿದರು.ನಗರದ ಶ್ರೀ ಬಸವೇಶ್ವರ ಮೂರ್ತಿಯ ಉದ್ಯಾನವನ ಭೀಷ್ಮ ಕೆರೆಯ ವಿಹಾರದಾಮದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಜಿಲ್ಲಾ ಎನ್.ಎಸ್.ಎಸ್ ಘಟಕದ ಸಹಯೋಗದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ–2026 ಅಂಗವಾಗಿ ಆಯೋಜಿಸಲಾದ ಡಿಜಿಟಲ್ ಕಾರ್ಯಸೂಚಿ ಮತ್ತು ಕೃತಕ ಬುದ್ಧಿಮತ್ತೆ ಬಳಸಿ ಪ್ರವಾಸೋದ್ಯಮ ಮರುಸೃಷ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಾವು ಎಲ್ಲೇ ತೆರಳಿದರೂ ಸ್ವಚ್ಛತೆ, ಆರೋಗ್ಯ ನೈರ್ಮಲ್ಯ ಹಾಗೂ ಉತ್ತಮ ನಡತೆಯನ್ನು ಕಾಯ್ದುಕೊಳ್ಳಬೇಕು. ನೀವುಗಳು ನಿಮ್ಮ ಜಿಲ್ಲೆ, ರಾಜ್ಯ ಹಾಗೂ ಇಡೀ ದೇಶದ ಸಂಸ್ಕೃತಿ ಮತ್ತು ಪ್ರವಾಸೋದ್ಯಮದ ರಾಯಭಾರಿಗಳಂತೆ ಕಾರ್ಯನಿರ್ವಹಿಸಬೇಕು. ಉತ್ತಮ ನಡವಳಿಕೆ ಹಾಗೂ ಸ್ವಚ್ಛತೆಯಿಂದ ಪ್ರವಾಸಿಗರಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿ, ಪ್ರವಾಸೋದ್ಯಮ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.ಜಿಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಮಾತನಾಡಿ, ಪ್ರವಾಸೋದ್ಯಮವು ಕೇವಲ ಮನರಂಜನೆ ಅಥವಾ ಮಜಾ ಮಾಡಲು ಸೀಮಿತವಾಗಿರದೆ, ದೇಶದ ಸಂಸ್ಕೃತಿ ರಕ್ಷಣೆ ಹಾಗೂ ಆರ್ಥಿಕ ಪ್ರಗತಿಗೆ ಪ್ರಮುಖ ಬೆನ್ನೆಲುಬಾಗಿದೆ ಎಂದರು.
ಸಿಂಗಾಪುರ, ದುಬೈ, ಶ್ರೀಲಂಕಾ ಮುಂತಾದ ಅನೇಕ ದೇಶಗಳು ಕೇವಲ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡು ತಮ್ಮ ಆರ್ಥಿಕತೆಯನ್ನು ಬಲಪಡಿಸಿಕೊಂಡಿವೆ. ಪ್ರವಾಸಿಗರು ಆಗಮಿಸಿದಾಗ ಅವರಿಗೆ ಮೂಲಸೌಕರ್ಯಗಳು, ಉಪಚಾರ ಹಾಗೂ ಭದ್ರತೆ ನೀಡುವುದರಿಂದ ಸ್ಥಳೀಯವಾಗಿ ಆತಿಥ್ಯ ಉದ್ಯಮ ಬೆಳೆಯುವುದಲ್ಲದೆ, ಅಪಾರ ಪ್ರಮಾಣದ ಉದ್ಯೋಗಾವಕಾಶ ಸೃಷ್ಟಿಯಾಗುತ್ತವೆ. ದೇಶದ ಒಟ್ಟು ಜಿಡಿಪಿಯಲ್ಲಿ ಸುಮಾರು ಶೇ.10ರಷ್ಟು ಕೊಡುಗೆ ಪ್ರವಾಸೋದ್ಯಮ ಕ್ಷೇತ್ರದಿಂದಲೇ ಬರುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ ಎಂದರು.ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ವಿಭೂತಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರವಾಸ ಎಂದರೆ ಮನಸ್ಸಿಗೆ ಉಲ್ಲಾಸ, ನೆಮ್ಮದಿ ಹಾಗೂ ಸಂತೋಷ ನೀಡುವ ಪ್ರಕ್ರಿಯೆಯಾಗಿದೆ. ಪ್ರವಾಸೋದ್ಯಮವು ಕೇವಲ ಮನರಂಜನೆಗೆ ಸೀಮಿತವಾಗಿರದೆ, ಹೊಟೇಲ್, ಬೋಟಿಂಗ್, ರೆಸಾರ್ಟ್‌ಗಳು ಹಾಗೂ ಸ್ಥಳೀಯ ಉದ್ಯಮಗಳ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ ಎಂದರು.
ಉಪನ್ಯಾಸಕ ದತ್ತ ಪ್ರಸನ್ನ ಪಾಟೀಲ್ ಮಾತನಾಡಿ, ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಪ್ರಸಕ್ತ ವರ್ಷದ ಧೇಯವಾಕ್ಯವಾದ ಡಿಜಿಟಲ್ ಕಾರ್ಯಸೂಚಿ ಮತ್ತು ಕೃತಕ ಬುದ್ಧಿಮತ್ತೆ (AI) ಬಳಕೆಯ ಮೂಲಕ ಪ್ರವಾಸೋದ್ಯಮ ಕ್ಷೇತ್ರವನ್ನು ಆಧುನಿಕವಾಗಿ ಮರುಸೃಷ್ಟಿಸಬೇಕಿದೆ ಎಂದರು.ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಹಟ್ಟಿ ಮಾತನಾಡಿದರು. ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ವೇಳೆ ಡಿವೈಎಸ್ಪಿ ಮುರ್ತುಜಾ ಖಾದ್ರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ಸೇರಿ ನಗರಸಭೆ ಪೌರಕಾರ್ಮಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಇದ್ದರು. ಪ್ರೊ. ಬಾಹುಬಲಿ ಜೈನರ್ ನಿರೂಪಿಸಿ ವಂದಿಸಿದರು.