ಸಾರಾಂಶ
ಕನ್ನಡಪ್ರಭ ವಾರ್ತೆ ನಾಲತವಾಡ
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತೆ ಮರೆಮಾಚಿದೆ. ಶೌಚಾಲಯಗಳು ಗಬ್ಬು ವಾಸನೆಯಿಂದ ನಾರುತ್ತಿರುವುದು ಕಂಡು ಅಧಿಕಾರಿಗಳಿಗೆ ಚಳಿ ಬಿಡಿಸಿದ್ದೇನೆ. ಆಸ್ಪತ್ರೆ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಹೇಳಿದರು.ಮುದ್ದೇಬಿಹಾಳ ತಾಲೂಕಿನ ನಾಲತವಾಡ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರದಲ್ಲಿ ವಿಧವಾ ಸಮಾವೇಶಕ್ಕೆ ಬಂದಿದ್ದೆ. ಕಾರಕೂರ ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಮ ಮುಗಿಸಿ ನಾಲತವಾಡದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸಂಪೂರ್ಣ ಪರಿಶೀಲನೆ ನಡೆಸಿದರು. ನಾನು ಯಾವುದೇ ಗ್ರಾಮಕ್ಕೆ ಹೋದರೆ ಅಲ್ಲಿಯ ಆಸ್ಪತ್ರೆಗೆ ಭೇಟಿ ನೀಡುತ್ತೇನೆ. ಅದೇ ರೀತಿ ನಾಲತವಾಡದ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಹೆರಿಗೆ ಕೊಠಡಿಯಲ್ಲಿ ಸ್ವಚ್ಛತೆ ಕಾಪಾಡಿಲ್ಲ. ವೈದ್ಯಾಧಿಕಾರಿಗೆ ಕೊಠಡಿಯಲ್ಲಿ ಸ್ವಚ್ಛತೆ ಕಾಪಾಡುವಂತೆ ಸೂಚನೆ ನೀಡಿದ್ದೇನೆ. ಆಸ್ಪತ್ರೆಯಲ್ಲಿನ ವೈದ್ಯರ ಕೊರತೆ ನೀಗಿಸಿ, ಮೂಲ ಸೌಕರ್ಯಗಳನ್ನು ಕಲ್ಪಿಸಿ ರೋಗಿಗಳಿಗೆ ಗುಣಮಟ್ಟದ ಸೇವೆ ನೀಡಬೇಕು ಸೂಚಿಸಿದ್ದೇನೆ ಎಂದು ಹೇಳಿದರು.
ವಿವಿಧ ಸಂಘಟನೆಯವರು, ಕೆಲ ವೈದ್ಯರು ಇಲ್ಲಿಯೇ ಹಲವು ವರ್ಷಗಳಿಂದ ಇದ್ದು ಬೇರೆ ಕಡೆ ವರ್ಗಾವಣೆ ಮಾಡಿ ಎಂಬ ದೂರುಗಳನ್ನು ನಾಗರಿಂದ ಸ್ವೀಕರಿಸಿದರು. ಅಲ್ಲದೆ, ಆಸ್ಪತ್ರೆಯ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ಅವರು ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಆಸ್ಪತ್ರೆಯ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.ಇದರ ಜತೆಗೆ ರೋಗಿಗಳಿಂದ ಆಸ್ಪತ್ರೆಯಲ್ಲಿನ ಸಮಸ್ಯೆಗಳ ಬಗ್ಗೆಯೂ ಅವರು ಮಾಹಿತಿ ಪಡೆದುಕೊಂಡರು. ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಸವಲತ್ತು ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಈ ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡಿ. ದಿನಕ್ಕೆ 300 ಮಂದಿ ಹೊರ ರೋಗಿಗಳಿಗೆ ಕೇವಲ ಮೂವರು ವೈದ್ಯರು ಚಿಕಿತ್ಸೆ ನೀಡಬೇಕಿದೆ. ಇದರಿಂದ ಪಟ್ಟಣದ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸುವ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ ಲಭಿಸುತ್ತಿಲ್ಲ ಎಂದರು.
ಮಹಿಳೆಯರಿಂದ ಅಹವಾಲು ಸ್ವೀಕಾರ:ಪಟ್ಟಣದ ಬಹುತೇಕ ನೊಂದ ಮಹಿಳೆಯರು ತಮ್ಮ ನೋವನ್ನು ಅಧ್ಯಕ್ಷೆ ನಾಗಲಕ್ಷ್ಮಿ ಅವರ ಎದುರು ತೋಡಿಕೊಂಡರು. ಅವರಿಗೆ ಸಾಂತ್ವನ ಹೇಳಿ, ಸರ್ಕಾರದ ಗೃಹಲಕ್ಷ್ಮೀ ಹಣ ಸೇರಿದಂತೆ ಸೌಲಭ್ಯಗಳು ಸರಿಯಾಗಿ ಸಿಗುತ್ತಿರುವ ಬಗ್ಗೆ ಮಾಹಿತಿ ಪಡೆದು, ಅಹವಾಲು ಸ್ವೀಕರಿಸಿದರು.
ನಾಲತವಾಡದಲ್ಲಿ ಅನೇಕ ವರ್ಷಗಳಿಂದ ವೈದ್ಯರೆ ಇಲ್ಲದೆ ಸಮರ್ಪಕ ಚಿಕಿತ್ಸೆ ದೊರಕುತ್ತಿಲ್ಲ ಎಂದು ಅನೇಕ ಸಂಘಟನೆಯ ಕಾರ್ಯಕರ್ತರು ರಾಜ್ಯ ಮಹಿಳಾ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. ಆದರೆ ನಮ್ಮ ಮನವಿಗೆ ರಾಜ್ಯಾಧ್ಯಕ್ಷರು ಯಾವುದೇ ಪುರಸ್ಕಾರ ನೀಡಿಲ್ಲ ಎಂದು ಸಾಕಷ್ಟು ಸಂಘಟಕರು ಬೇಸರ ವ್ಯಕ್ತಪಡಿಸಿದರು.ಈ ವೇಳೆ ವೈದ್ಯರಾದ ಎಸ್.ಟಿ.ತಿವಾರಿ, ಸಿ.ಬಿ.ವಿರಕ್ತಮಠ, ವೈ.ಎಸ್.ತಳ್ಳೊಳ್ಳಿ, ಡಾ.ಕಾಶಿಬಾಯಿ ಪಾಟೀಲ, ಸಾಗರ್ ಪಾಟೀಲ, ರೇಶ್ಮಾಬಾನು ಹವೇಲಿ, ಡಿಎಸ್ಎಸ್ ಮುಖಂಡ ಮಲ್ಲು ತಳವಾರ, ಗುಂಡಪ್ಪ ಚಲವಾದಿ, ಹಣಮಂತ ಕುರಿ, ವೀರೇಶ ಕಂದಗಲ್ಲ, ಕರವೇ ಮುಖಂಡ ರಫೀಕ ತೆಗ್ಗಿನಮನಿ, ಸಿದ್ದು ಕುರಿ, ಸಂಗಣ್ಣ ಹಾವರಗಿ, ಸಂಗು ಮೇಟಿ, ವೀರೇಶ ಆಲಕೊಪ್ಪರ ಇದ್ದರು.