ಸಾರಾಂಶ
ಕಾರವಾರ: ಡೆಂಘೀ ನಿಯಂತ್ರಣ ಕುರಿತಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸುವ ಕ್ರಮಗಳನ್ನು ಸಾರ್ವಜನಿಕರು ತಮ್ಮ ಮನೆಯ ಒಳಗೆ ಮತ್ತು ಮನೆಯ ಸುತಮುತ್ತಲಿನ ಅವರಣದಲ್ಲಿ ತಪ್ಪದೇ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ತಿಳಿಸಿದರು.
ಶುಕ್ರವಾರ ಈಡಿಸ್ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಚಟುವಟಿಕೆಯ ಅಂಗವಾಗಿ, ನಗರದ ಅರ್ಜುನ್ ಟಾಕೀಸ್ ಬಳಿಯಲ್ಲಿನ ಮನೆಗಳಿಗೆ ಭೇಟಿ ನೀಡಿ, ಸಾರ್ವಜನಿಕರಿಗೆ ಡೆಂಘೀ ನಿಯಂತ್ರಣ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು.ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿ, ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಮನೆಯಲ್ಲಿನ ಅಲಂಕಾರಿಕ ಕುಂಡಗಳಲ್ಲಿ ನೀರು ನಿಲ್ಲದಂತೆ ಮತ್ತು ಮನೆಯ ಒಳಗೆ ಫ್ರಿಡ್ಜ್ ಕೆಳಗೆ ಸಹ ನೀರು ಶೇಖರವಾಗದಂತೆ ಎಚ್ಚರವಹಿಸಬೇಕು. ಡ್ರಮ್, ಬ್ಯಾರಲ್‌ಗಳಲ್ಲಿ ತುಂಬಿರುವ ನೀರನ್ನು ಆಗಾಗ್ಗೆ ಬದಲಾಯಿಸುವ ಮೂಲಕ ಸೊಳ್ಳೆಗಳು ಮೊಟ್ಟೆಗಳನ್ನು ಇಡದಂತೆ ಮತ್ತು ಈಗಾಗಲೇ ಇಟ್ಟಿರುವ ಮೊಟ್ಟೆಗಳನ್ನು ನಾಶ ಮಾಡುವ ಮೂಲಕ ಡೆಂಘೀ ಉಲ್ಬಣಗೊಳ್ಳುವುದನ್ನು ತಡೆಯಲು ಸಾಧ್ಯವಿದೆ ಎಂದರು.ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ, ಕಾರವಾರ ಉಪ ವಿಭಾಗಾಧಿಕಾರಿ ಕನಿಷ್ಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ(ಪ್ರ) ಡಾ. ನಟರಾಜ್, ತಹಸೀಲ್ದಾರ್ ನಿಶ್ಚಲ್ ನರೋನ್ಹ, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ರಮೇಶ ರಾವ್ ಹಾಗೂ ನಗರಸಭೆಯ ಅಧಿಕಾರಿಗಳು ಇದ್ದರು.